ಸಂಪತ್ತು ಗಳಿಕೆ ಜಂಜಾಟದಿಂದ ಆಧ್ಯಾತ್ಮಿಕತೆ ಮಾಯ

KannadaprabhaNewsNetwork | Published : Feb 10, 2025 1:47 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಆಧುನಿಕತೆ, ಸಂಪತ್ತು ಗಳಿಕೆಯ ಜಂಜಾಟದಲ್ಲಿರುವ ನಗರದ ಜನರಲ್ಲಿ ದೇವರು, ದೇವಸ್ಥಾನ, ದೈವರಲ್ಲಿ ನಂಬಿಕೆ, ಭಕ್ತಿ-ಭಾವ ಮತ್ತು ಆಧ್ಯಾತ್ಮಿಕತೆ ಎನ್ನುವುದು ಮಾಯವಾಗುತ್ತಿದೆ ಎಂದು ಪ್ರಾಧ್ಯಾಪಕ ಪ್ರೊ.ಎಂ.ಎಸ್.ಖೊದ್ನಾಪೂರ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಆಧುನಿಕತೆ, ಸಂಪತ್ತು ಗಳಿಕೆಯ ಜಂಜಾಟದಲ್ಲಿರುವ ನಗರದ ಜನರಲ್ಲಿ ದೇವರು, ದೇವಸ್ಥಾನ, ದೈವರಲ್ಲಿ ನಂಬಿಕೆ, ಭಕ್ತಿ-ಭಾವ ಮತ್ತು ಆಧ್ಯಾತ್ಮಿಕತೆ ಎನ್ನುವುದು ಮಾಯವಾಗುತ್ತಿದೆ ಎಂದು ಪ್ರಾಧ್ಯಾಪಕ ಪ್ರೊ.ಎಂ.ಎಸ್.ಖೊದ್ನಾಪೂರ ಕಳವಳ ವ್ಯಕ್ತಪಡಿಸಿದರು.ನಗರದ ಎನ್.ಜಿ.ಒ ಕಾಲೋನಿಯ ಜೈ ಆಂಜನೇಯ ದೇವಸ್ಥಾನದ ೫ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನದ ಅಭಿವೃದ್ಧಿ ಗೆ ಕೈಜೋಡಿಸಿದ ಅಧ್ಯಕ್ಷ ಸಂತೋಷ ಪಾಟೀಲ ಹಾಗೂ ನಿರ್ದೇಶಕ ಎಂ.ಆರ್.ಪಾಟೀಲ ಅವರಿಗೆ ಬಡಾವಣೆಗಳ ನಾಗರಿಕರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಆಧುನಿಕತೆ, ಹಣ-ಸಂಪತ್ತು ಗಳಿಕೆಯ ಜಂಜಾಟದಲ್ಲಿರುವ ನಗರದ ಜನರಲ್ಲಿ ದೇವರು, ದೇವಸ್ಥಾನ, ದೈವರಲ್ಲಿ ನಂಬಿಕೆ, ಭಕ್ತಿ-ಭಾವ ಮತ್ತು ಆಧ್ಯಾತ್ಮಿಕತೆ ಎನ್ನುವದು ಮಾಯವಾಗುತ್ತಿದೆ. ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಈ ದೇವಸ್ಥಾನದಲ್ಲಿ ಪ್ರತಿನಿತ್ಯ ಯೋಗ, ಧ್ಯಾನ ತರಬೇತಿ ಮತ್ತು ಶನಿವಾರ ದಂದು ಹನುಮಾನ ಚಾಲೀಸ ಪಠಣ, ಪ್ರವಚನ, ಸತ್ಸಂಗ, ಕೀರ್ತನೆ, ಭಜನೆ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರಿಂದ ನವರಸಪುರ ಬಡಾವಣೆಗಳ ಮಕ್ಕಳು, ಯುವಕರು, ಮಹಿಳೆಯರು ಮತ್ತು ಹಿರಿಯರಲ್ಲಿ ಅಧ್ಯಾತ್ಮಿಕ, ವೈಚಾರಿಕ ಮತ್ತು ದೈವತ್ವದ ಭಕ್ತಿ-ಭಾವದ ಬಗ್ಗೆ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜೀವನದಲ್ಲಿ ಮಾನಸಿಕ ನೆಮ್ಮದಿ ಮತ್ತು ಸುಖ-ಶಾಂತಿ ಪಡೆದು ಸತ್ಪ್ರಜೆಗಳನ್ನಾಗಿ ನಿರ್ಮಾಣ ಮಾಡಲು ಸಹಕಾರಿಯಾಗಿದೆ. ಈ ದೇವಸ್ಥಾನದ ಸಂಪೂರ್ಣ ಅಭಿವೃದ್ಧಿಗೆ ಕಾರಣರಾದ ಅಧ್ಯಕ್ಷ ಸಂತೋಷ ಪಾಟೀಲ ಕಾರ್ಯವೈಖರಿಯೇ ಕಾರಣವಾಗಿದೆ ಎಂದರು.ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ ಮಾತನಾಡಿ, ೨೦೨೦ ರಲ್ಲಿ ದೇವಸ್ಥಾನದಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯ ನೆರವೇರಿದ ನಂತರ, ದೇವಸ್ಥಾನದಲ್ಲಿ ಹಂತ ಹಂತವಾಗಿ ಪ್ರತಿವರ್ಷ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅದರಲ್ಲಿ ವಿಶೇಷವಾಗಿ ಮಹಿಳೆಯರ ತನು-ಮನ-ಧನದ ಸಹಕಾರದಿಂದ ೭ ಕೆ.ಜಿ ತೂಕದ ಬೆಳ್ಳಿ ಆಂಜನೇಯ ಉತ್ಸವ ಮೂರ್ತಿ ನಿರ್ಮಾಣ, ಶ್ರೀರಾಮ ಮತ್ತು ಬನ್ನಿ ಮಹಾಕಾಳಿ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಗಳನ್ನು ಕೈಗೊಳ್ಳಲಾಯಿತು. ದೇವಸ್ಥಾನದೊಳಗೆ ಮಕ್ಕಳಿಗಾಗಿ ಓಪನ್ ಜಿಮ್, ಕಾರ್ಯಕ್ರಮದ ವೇದಿಕೆ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ಗೋ-ಮಾತೆ ಪಾಲನೆ ಮತ್ತು ಅರ್ಚಕರ ವಾಸಸ್ಥಾನಕ್ಕಾಗಿ ನಾಲ್ಕು ಕೊಠಡಿಗಳು ಹೀಗೆ ಅಭಿವೃದ್ಧಿ ಕಾರ್ಯಕ್ರಮಳನ್ನು ಕೈಗೊಳ್ಳಲಾಗಿದೆ. ಇದಕ್ಕೆಲ್ಲ ನಮ್ಮ ದೇವಸ್ಥಾನದ ನಿರ್ದೇಶಕರು, ಸದಸ್ಯರು, ಮಹಿಳಾ ಸದಸ್ಯರು ಹಾಗೂ ಎಲ್ಲ ಬಡಾವಣೆಗಳ ಸಾರ್ವಜನಿಕರ ಸಹಕಾರವೇ ಕಾರಣ ಎಂದು ಹೇಳಿದರು.

ದೇವಸ್ಥಾನದ ಸೇವಾ ಸಮಿತಿಯ ಲಕ್ಷ್ಮಣ ಶಿಂಧೆ, ಬಿ.ಆರ್.ಬಿರಾದಾರ, ಎಸ್.ಜಿ.ನಿಂಗನಗೌಡ್ರ, ಎಂ.ಆರ್.ಪಾಟೀಲ, ಶಿವಪ್ಪ ಸಾವಳಗಿ, ಬಾಬು ಕೋಲಕಾರ, ಬಿ.ಎನ್.ಕೂಟನೂರ, ಶ್ರೀರಾಮ ದೇಶಪಾಂಡೆ, ಶಿವಾನಂದ ಬಿಜ್ಜರಗಿ, ಡಾ.ಮಹಾದೇವ ಪಾಟೀಲ, ಅನೀಲ ಪಾಟೀಲ, ರಮೇಶ ಕೋಷ್ಠಿ, ಗಂಗಾಧರ ಚಾಬುಕಸವಾರ, ಆರ್.ಬಿ.ಕುಮಟಗಿ, ಪ್ರೊ.ಎಂ.ಆರ್.ಜೋಶಿ, ಬಸವರಾಜ ತೊಡಕೆ ಮುಂತಾದವರು ಇದ್ದರು.

Share this article