ಶಾಂತಿ, ನೆಮ್ಮದಿಗೆ ಆಧ್ಯಾತ್ಮ ಅಗತ್ಯ: ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ಕುಶಾಲನಗರ ತಾಲೂಕಿನ ಹೆಬ್ಬಾಲೆಯ ಶ್ರೀ ಬಸವೇಶ್ವರ ದೇವಾಲಯ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಸಮಾರಂಭ

ಕನ್ನಡಪ್ರಭ ವಾರ್ತೆ ಕುಶಾಲನಗರ

ಮಾನವ ಜೀವನದ ಆಂತರಿಕ ಪರಿಷ್ಕರಣೆ, ಶಾಂತಿ, ನೆಮ್ಮದಿ ಸೌಹಾರ್ದತೆಗೆ ಆಧ್ಯಾತ್ಮದ ಅಗತ್ಯತೆ ಇದೆ ಎಂದು ಅರಮೇರಿ ಕಳಚೇರಿ ಮಠಾಧೀಶ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಅವರು ಕುಶಾಲನಗರ ತಾಲೂಕಿನ ಹೆಬ್ಬಾಲೆಯ ಶ್ರೀ ಬಸವೇಶ್ವರ ದೇವಾಲಯ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಆಧ್ಯಾತ್ಮಿಕ ಪರಂಪರೆಯ ಶಕ್ತಿ ಮೂಲಕ ಆಸ್ತಿಕ ಭಾವನೆ ಕಾಣಲು ಸಾಧ್ಯ ಎಂದ ಶ್ರೀಗಳು, ವಿಜ್ಞಾನ ತಂತ್ರಜ್ಞಾನ ಬೆಳವಣಿಗೆ ಮೂಲಕ ಮನುಷ್ಯ ಬಾಹ್ಯ ಬದಲಾವಣೆ ಕಾಣಲು ಮಾತ್ರ ಸಾಧ್ಯ ಎಂದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಅರೆಮಾದನಹಳ್ಳಿಯ ಶ್ರೀಗಳಾದ ಶಿವ ಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸನ್ನಡತೆ, ಸದ್ವಿಚಾರ, ನಿಸ್ವಾರ್ಥ ಸೇವೆಗಳ ಮೂಲಕ ಭಗವಂತನ ಅನುಗ್ರಹ ಪಡೆಯಲು ಸಾಧ್ಯ ಎಂದರು.

ಬಸವೇಶ್ವರ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಎಚ್.ಎನ್.ಬಸವರಾಜ್ ಸೇರಿದಂತೆ ದೇವಾಲಯ ಜೀರ್ಣೋದ್ಧಾರಕ್ಕೆ ಸಹಕರಿಸಿ, ಸಲಹೆ ನೀಡಿ ಕೊಡುಗೆ ನೀಡಿದ‌ ಪ್ರಮುಖ ದಾನಿಗಳನ್ನು, ಪೂಜಾ ವಿಧಿ ನೆರವೇರಿಸಿದ ಶಾಸ್ತ್ರಿಗಳ ತಂಡವನ್ನು ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿಗಳು ಸನ್ಮಾನಿಸಿ ಆಶೀರ್ವದಿಸಿದರು.

ಮಡಿಕೇರಿ ಶಾಸಕ ಡಾ.ಮಂಥರ್ ಗೌಡ, ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ಸಂದರ್ಭ ತೊರೆನೂರು ವಿರಕ್ತ ಮಠದ ಮಲ್ಲೇಶಸ್ವಾಮಿ, ವಿರಾಜಪೇಟೆ ಆತ್ಮಾನಂದ ಪುರಿ ಸ್ವಾಮಿ ಅರ್ಶಿವಚನ ನೀಡಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಬಸವರಾಜ್ ವಹಿಸಿದ್ದರು. ಈ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಉದ್ಯಮಿ ಎಚ್.ಆರ್. ದಿನೇಶ್, ಎಚ್.ಎಲ್. ರಾಮಪ್ಪ, ಎಚ್.ವಿ. ಶಿವಪ್ಪ, ಕೆ.ಪಿ.ಸಿ.ಸಿ. ಸದಸ್ಯ ಮಂಜುನಾಥ ಗುಂಡುರಾವ್, ಕಾಂಗ್ರೆಸ್ ಮುಖಂಡ ಎಚ್.ಕೆ. ನಟೇಶ್ ಗೌಡ, ಶ್ರೀನಿವಾಸ, ರಾಜಶೇಖರ ಸೇರಿದಂತೆ ಹಲವಾರು ಗಣ್ಯರು, ದಾನಿಗಳು ಉಪಸ್ಥಿತರಿದ್ದರು.ನೂತನವಾಗಿ ನಿರ್ಮಿಸಲಾದ ಬಸವೇಶ್ವರ ದೇವಾಲಯ ಪುನರ್ ಪ್ರತಿಷ್ಠಾಪನೆ, ಕಳಶರೋಹಣ, ಮಹಾರುದ್ರಾಭಿಷೇಕ, ರುದ್ರಪರಾಯಣ, ಗೋಪುರಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ ಸೇರಿದಂತೆ ವಿವಿಧ ಹೋಮಹವನ ಪೂಜಾ ಕೈಂಕರ್ಯಗಳು ಎರಡು ದಿನಗಳವರೆಗೆ ಕಿರಣ್ ಶಾಸ್ತ್ರಿ ನೇತೃತ್ವದ ಅರ್ಚಕ ತಂಡದಿಂದ ನೆರವೇರಿತು. ಸಮಾರಂಭಕ್ಕೂ ಮುನ್ನ ಕಾವೇರಿ ನದಿಯಿಂದ ಮಹಿಳೆಯರು ಕಳಸದಲ್ಲಿ ಗಂಗಾಜಲವನ್ನು ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು. ಹೆಬ್ಬಾಲೆ ಸೇರಿದಂತೆ ಸುತ್ತಮುತ್ತಲ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Share this article