ಬೋಧನೆ ಶಿಕ್ಷಕರ ಆಧ್ಯಾತ್ಮ ಕೈಂಕರ್ಯ: ಸುಚೇಂದ್ರ ಪ್ರಸಾದ್‌

KannadaprabhaNewsNetwork |  
Published : Dec 15, 2025, 03:00 AM IST
ಅಮೃತ ಮಹೋತ್ಸವ. | Kannada Prabha

ಸಾರಾಂಶ

ಶಾಲೆಯೆಂಬುದು ದೇಗುಲವಾದರೆ, ಅಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರದ್ದು ಆಧ್ಯಾತ್ಮ ಕೈಂಕರ್ಯ ಎಂದು ಸಂಸ್ಕಾರ ಭಾರತಿ ಪ್ರಾಂತ ಅಧ್ಯಕ್ಷ ಸುಚೇಂದ್ರ ಪ್ರಸಾದ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶಾಲೆಯೆಂಬುದು ದೇಗುಲವಾದರೆ, ಅಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರದ್ದು ಆಧ್ಯಾತ್ಮ ಕೈಂಕರ್ಯ ಎಂದು ಸಂಸ್ಕಾರ ಭಾರತಿ ಪ್ರಾಂತ ಅಧ್ಯಕ್ಷ ಸುಚೇಂದ್ರ ಪ್ರಸಾದ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಬಳಂಜದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕೀರ್ತಿಶೇಷ ಪಟೇಲ್ ಕಿನ್ನಿಯಾನೆ ಕೋಟಿ ಪಡಿವಾಳ ಸಭಾಮಂದಿರದಲ್ಲಿ ಭಾನುವಾರ ನಡೆದ ಅಮೃತ ಮಹೋತ್ಸವದ ಎರಡನೇ ದಿನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆತ್ಮಾನುಸಂಧಾನವಿಲ್ಲದ, ಪ್ರಯೋಗಾತ್ಮಕವಲ್ಲದ ಶಿಕ್ಷಣ ವ್ಯವಸ್ಥೆಯಲ್ಲಿ ನಾವಿದ್ದೇವೆ. ಸರ್ಕಾರಿ ಕನ್ನಡ ಶಾಲೆಯಲ್ಲಿ ಆಂಗ್ಲ ಶಿಕ್ಷಣ ತರುವ ಮೂಲಕ ಅಡ್ಡದಾರಿ ಹಿಡಿಯುತ್ತಿದ್ದೆವೆಯೋ ಎಂಬ ಬಗ್ಗೆ ಚಿಂತನೆ ಮಾಡುವ ಅವಶ್ಯಕತೆಯಿದೆ ಎಂದ ಅವರು, ಬಳಂಜದಲ್ಲಿ ಸಾಧಕರ ಸಂತತಿ ಇನ್ನಷ್ಟು ಹೆಚ್ಚಲಿ ಎಂದು ಆಶಿಸಿದರು.

ಮಾಜಿ ಸಚಿವ ಪ್ರಮೋದ ಮಧ್ವರಾಜ್ ಮಾತನಾಡಿ, ಮಾಜಿ ಎಂಬ ಪದವಿ ಅಂಟಿಸಿಕೊಳ್ಳದ ಸಮೂಹವಿದ್ದರೆ ಅದು ಶಿಕ್ಷಕರದ್ದು. ಅವರು ಕೊನೆ ತನಕ ಮಾಸ್ಟ್ರೇ ಆಗಿರುತ್ತಾರೆ. ಮಕ್ಕಳ ಬಗ್ಗೆ ಮುತುವರ್ಜಿ ವಹಿಸುವ ಜವಾಬ್ದಾರಿಯನ್ನು ಶಿಕ್ಷಕರು ಮರೆತು ಬಿಟ್ಟರೆ ಮುಂದೊಂದು ದಿನ ಆತ ಶಿಕ್ಷಣ‌ ಮಂತ್ರಿಯಾದಲ್ಲಿ ಬೇಸರಪಡಬೇಕಾದ ಸಂದರ್ಭ ಬರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಕೆ.ಚಂದ್ರಶೇಖರ, ಸಾಹಿತಿ, ‘ಥಟ್ ಅಂತ ಹೇಳಿ’ ಕಾರ್ಯಕ್ರಮ ಖ್ಯಾತಿಯ ಡಾ। ನಾ.ಸೋಮೇಶ್ವರ, ಕನ್ನಡಪ್ರಭ ಪುರವಣಿ ಪ್ರಧಾನ ಸಂಪಾದಕ ಜೋಗಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಹಾಜರಿದ್ದರು.

ಕಾರ್ಯಕ್ರಮಕ್ಕೆ ಮೊದಲು ಆಕರ್ಷಕ‌ ಮೆರವಣಿಗೆಯಲ್ಲಿ ಅತಿಥಿಗಳನ್ನು ಕರೆತರಲಾಯಿತು. ಸಭೆಯಲ್ಲಿ ಶಾಲೆಯ ನಿವೃತ್ತ ಶಿಕ್ಷಕರನ್ನು ಹಾಗೂ ವೃತ್ತಿಯಲ್ಲಿರುವ ಸುಮಾರು 50ಕ್ಕೂ ಹೆಚ್ಚು ಶಿಕ್ಷಕರನ್ನು ಆರತಿ ಬೆಳಗಿ ಸನ್ಮಾನಿಸುವ ಮೂಲಕ ‘ಗುರುಭ್ಯೋ ನಮಃ’ ಕಾರ್ಯಕ್ರಮ ಸಂಪನ್ನವಾಯಿತು.

ವಿದ್ಯೆ ಜೊತೆಗೆ ಕೌಶಲ್ಯ ಅಗತ್ಯ: ರವಿ ಹೆಗಡೆಧ್ವಜಾರೋಹಣ ನೆರವೇರಿಸಿದ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಸರ್ಕಾರಿ ಶಾಲೆಗಳು ಕಾಲಘಟ್ಟಕ್ಕೆ ಸರಿಯಾಗಿ ತೆರೆದುಕೊಳ್ಳದೆ ಇರುವುದರಿಂದ ಅವು ಊರಿನವರಿಗೆ ಸಂಬಂಧವಿಲ್ಲದ ಆಸ್ತಿಯಾಗಿವೆ. ಶಾಲೆಯಲ್ಲಿ ವಿದ್ಯೆ ಕಲಿತರೆ ಸಾಲಲ್ಲ. ವಿದ್ಯೆಯ ಜೊತೆ ಕೌಶಲ್ಯತೆಯೂ ಬೇಕಾಗುತ್ತದೆ ಎಂದರು.

ಯಾವ ಥರ ಕಂಪ್ಯೂಟರನ್ನು ಕೌಶಲ್ಯ ಅಂತ ತಿಳಿದುಕೊಳ್ಳುತ್ತೇವೆಯೋ ಅದೇ ರೀತಿ ಇಂಗ್ಲಿಷನ್ನು ಕೂಡಾ ಕೌಶಲ್ಯ ಅಂತ ಪರಿಗಣಿಸಬೇಕು. ಶಾಲೆಗಳಲ್ಲಿ ಇಂಗ್ಲಿಷ್ ಕೌಶಲ್ಯ ಬೇಕು, ಆದರೆ, ಅದುವೇ ಮಾಧ್ಯಮವಾಗಬಾರದು. ಏನೇ ಪದವಿಗಳನ್ನು ಪಡೆದಿದ್ದರೂ ವಿವೇಕವಿಲ್ಲದೇ ಇದ್ದರೆ ಕಲಿತದ್ದು ನಿರರ್ಥಕ ಎಂದರು.

ಇದು ಸರ್ಕಾರಿ ಶಾಲೆ ಎಂದೇ ಅನ್ನಿಸುವುದಿಲ್ಲ. ಯಾರೋ ಖಾಸಗಿಯವರು ಕಟ್ಟಿ ಬೆಳೆಸಿದ ಶಾಲೆಯ ಥರ ಇದೆ ಎಂದು ಅವರು ಬಳಂಜ ಶಾಲೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಕನ್ನಡಪ್ರಭ ಪುರವಣಿ ಪ್ರಧಾನ ಸಂಪಾದಕ ಜೋಗಿ ಮಾತನಾಡಿ, ಶಾಲೆ ಅಂದರೆ ನಿಜವಾಗಿ ದೇವಸ್ಥಾನದ ಹಾಗೆ. ಇಲ್ಲಿ ದೈವಸಮಾನರಾದ ಗುರುಗಳು, ದೇವಸಮಾನರಾದ ಮಕ್ಕಳಿದ್ದಾರೆ ಎಂದರು.

ನಮಗೆ ಎಳವೆಯಲ್ಲಿ ಗುಣನಡತೆ ಪ್ರಮಾಣಪತ್ರ ಕೊಡುವುದು ಮೇಷ್ಟ್ರುಗಳು. ಅಂದು ಮೇಷ್ಟ್ರು ಕೊಡುವ ಗುಣನಡತೆ ಪ್ರಮಾಣಪತ್ರ ನಮ್ಮೊಳಗಿನ ಆತ್ಮವಿಶ್ವಾಸ ಹೆಚ್ಚಿಸುತ್ತಾ ಇತ್ತು. ನಾನು ಮೊದಲ ಕತೆ ಬರೆದಾಗ ಓದಿದ ಮೇಷ್ಟ್ರು ವೆಂಕಟ್ರಮಣ ಬಡ್ಲ. ಅವರು ಓದಿ ಪ್ರೋತ್ಸಾಹಿಸಿದ್ದಕ್ಕೆ ಇಂದು ಕತೆಗಾರನಾದೆ. ಆ ಪ್ರೋತ್ಸಾಹ ಸಿಕ್ಕದಿರುತ್ತಿದ್ದರೆ ಆ ಸಾಧ್ಯತೆ ಕ್ಷೀಣಿಸುತ್ತಿತ್ತು ಎಂದು ಜೋಗಿ ಸ್ಮರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ