ಭಗವದ್ಗೀತೆಯ ಜ್ಞಾನದಿಂದ ಭಾವೈಕ್ಯತೆ: ಭಾರತಿ

KannadaprabhaNewsNetwork | Published : May 22, 2024 12:59 AM

ಸಾರಾಂಶ

ಭಗವಂತನ ಧ್ಯಾನ ಮಾಡಿ ಶಕ್ತಿ ತುಂಬಿಕೊಳ್ಳುವ ವಿಚಾರವನ್ನೂ ತಿಳಿದುಕೊಂಡು ಮಾನಸಿಕವಾಗಿ ಶಕ್ತಿಶಾಲಿಯಾಗಬೇಕು.

ಕುಮಟಾ: ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಧರ್ಮಕ್ಷೇತ್ರವನ್ನಾಗಿ ಮಾಡಿಕೊಳ್ಳಬೇಕು. ಕೇವಲ ಭಗವದ್ಗೀತೆಯ ಆತ್ಮಜ್ಞಾನ ಮತ್ತು ಪರಮಾತ್ಮ ಜ್ಞಾನದಿಂದ ಮಾತ್ರ ವಿಶ್ವ ಭಾವೈಕ್ಯತೆ ಹಾಗೂ ವಿಶ್ವ ಭ್ರಾತೃತ್ವ ಸಾಧ್ಯ ಎಂದು ದೀವಗಿಯ ಸತ್ಯ ಗೀತಾ ಜ್ಞಾನಯೋಗ ಅಧ್ಯಯನ ಕೇಂದ್ರದ ಸಂಚಾಲಕಿ ಎ.ಆರ್. ಭಾರತಿ ತಿಳಿಸಿದರು.

ದೀವಗಿಯ ಚೇತನಾ ಸೇವಾ ಸಂಸ್ಥೆಯ ಸತ್ಯ ಗೀತಾ ಜ್ಞಾನಯೋಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಒಂದು ವಾರ ಕಾಲ ನಡೆದ ಭಗವದ್ಗೀತಾ ಪ್ರವಚನ ಮಾಲೆಯ ಸಮಾರೋಪದಲ್ಲಿ ಮಾತನಾಡಿದರು.

ದೀವಗಿ ಗ್ರಾಪಂ ಮಾಜಿ ಅಧ್ಯಕ್ಷ ಹೇಮಂತಕುಮಾರ ಗಾಂವ್ಕರ ಮಾತನಾಡಿ, ಪ್ರವಚನ ಮಾಲಿಕೆಯಿಂದ ನಾನು ದೇಹವಲ್ಲದೇ ಈ ದೇಹವನ್ನು ನಡೆಸುವ ಚೈತನ್ಯ ಶಕ್ತಿ ಆತ್ಮಜ್ಯೋತಿ ಎಂಬ ತಿಳಿವಳಿಕೆ ಮೂಡಿತು. ಆ ಭಗವಂತನ ಧ್ಯಾನ ಮಾಡಿ ಶಕ್ತಿ ತುಂಬಿಕೊಳ್ಳುವ ವಿಚಾರವನ್ನೂ ತಿಳಿದುಕೊಂಡು ಮಾನಸಿಕವಾಗಿ ಶಕ್ತಿಶಾಲಿಯಾಗಬೇಕು. ಪ್ರತಿಯೊಬ್ಬರೂ ಅದರ ಲಾಭವನ್ನು ಪಡೆದುಕೊಳ್ಳೋಣ ಎಂದರು.

ಪ್ರೀತಿ ಮಾಬ್ಲೇಶ್ವರ ದೇಶಭಂಡಾರಿ, ಮಂಗಲಾ ಸುರೇಶ ದೇಶಭಂಡಾರಿ, ತುಳಸಿ ಪರಮೇಶ್ವರ ಗೌಡ ಅನಿಸಿಕೆ ಹಂಚಿಕೊಂಡರು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. ೯೭ ಅಂಕಗಳನ್ನು ಪಡೆದ ಡಾ. ಎ.ವಿ. ಬಾಳಿಗಾ ಕಾಲೇಜಿನ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ದೀವಗಿಯ ಪ್ರೀತಿ ಮಾಬ್ಲೇಶ್ವರ ದೇಶಭಂಡಾರಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೯೩ ಅಂಕಗಳನ್ನು ಪಡೆದ ದೀವಗಿಯ ಡಿಜೆವಿಎಸ್ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದ ನಿವೇಲಾ ನಾಗೇಶ ದೇಶಭಂಡಾರಿ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ನೌಕರ ಜಾನಪ್ಪ ಎನ್. ದೇಶಭಂಡಾರಿ, ವಾಕರಸಾ ನಿವೃತ್ತ ಚಾಲಕ ಅಶೋಕ ಎನ್. ದೇಶಭಂಡಾರಿ, ವಾಕರಸಾ ನಿರ್ವಾಹಕ ಗೋವಿಂದ ಟಿ. ದೇಶಭಂಡಾರಿ, ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಗಂಗಾಧರ ಎಸ್. ಅಂಬಿಗ, ಟೇಲರ್ ಅನಿಲ ಶಿರೋಡ್ಕರ್ ಉಪಸ್ಥಿತರಿದ್ದರು. ಚೇತನಾ ಸೇವಾ ಸಂಸ್ಥೆಯ ಅಧ್ಯಕ್ಷ ಆರ್.ಕೆ. ಅಂಬಿಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Share this article