ಲೋಕಾಯುಕ್ತ ಅಧಿಕಾರಿಗಳ ವಿರುದ್ಧವೂ ಸ್ವಯಂಪ್ರೇರಿತ ಕೇಸ್‌: ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ

KannadaprabhaNewsNetwork |  
Published : Dec 04, 2024, 12:32 AM IST
ಉಪ ಲೋಕಾಯುಕ್ತ ಜಸ್ಟೀಸ್‌ ಬಿ.ವೀರಪ್ಪ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಮಂಗಳೂರಿನಲ್ಲಿ ಕಳೆದ ಎರಡು ದಿನಗಳ ಕಾಲ ನಡೆದ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ವಿಚಾರಣೆಯಲ್ಲಿ ಒಟ್ಟು 193 ದೂರು ಸ್ವೀಕರಿಸಲಾಗಿದ್ದು, 81 ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ. ಇದು ಲೋಕಾಯುಕ್ತ ವಿಚಾರಣೆಯಲ್ಲಿ ಮೂರನೇ ದೊಡ್ಡ ವಿಲೇವಾರಿಯಾಗಿದೆ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಲೋಕಾಯುಕ್ತ ಅಧಿಕಾರಿಗ‍ಳ ಮೇಲೆ ಯಾವುದೇ ಆರೋಪ ಕೇಳಿಬಂದರೆ, ಅವರ ವಿರುದ್ಧವೂ ಸ್ವಯಂ ಪ್ರೇರಿತ ಕೇಸು ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದ್ದಾರೆ. ಮಂಗಳೂರಿನ ಸರ್ಕ್ಯೂಟ್‌ ಹೌಸ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ದಿಷ್ಟ ಆರೋಪಕ್ಕೆ ಸಂಬಂಧಿಸಿ ಐದಾರು ಮಂದಿ ಲೋಕಾಯುಕ್ತ ಅಧಿಕಾರಗಳ ವಿರುದ್ಧ ಈ ಹಿಂದೆ ಕ್ರಮ ಕೈಗೊಳ್ಳಲಾಗಿದೆ. ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಆರೋಪಗಳು ಕೇಳಿಬಂದರೆ, ಮೇಲಧಿಕಾರಿಗಳ ಗಮನಕ್ಕೆ ತಂದು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿದ್ದು, ಸರ್ಕಾರದ ಮುಲಾಜು ಇಲ್ಲದೆ ನೇರವಾಗಿ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ. ಜನರ ಸಮಸ್ಯೆ ಇತ್ಯರ್ಥಪಡಿಸುವದೇ ಲೋಕಾಯುಕ್ತದ ಆದ್ಯತೆ ಎಂದರು.

ಎಲ್ಲ ಕಾನೂನಿಗೆ ತಿದ್ದುಪಡಿ ಅವಶ್ಯ: ಲೋಕಾಯುಕ್ತ ಸಹಿತ ಎಲ್ಲ ಕಾನೂನುಗಳಿಗೆ ತಿದ್ದುಪಡಿಯ ಅವಶ್ಯಕತೆ ಇದೆ. ಪ್ರಸಕ್ತ ಇರುವ ಕಾನೂನಿನಡಿ ತ್ವರಿತವಾಗಿ ನ್ಯಾಯ ನೀಡಲು ಸಾಧ್ಯವಾಗುತ್ತಲ್ಲ. ಈಗ ಇರುವ ಕಾನೂನಿನ ಅಂಶಗಳು, ವಿಚಾರಣೆಯ ಪ್ರಕ್ರಿಯೆಯಗಳು ವಿಳಂಬಗತಿಗೆ ಕಾರಣವಾಗುತ್ತಿದೆ. ವಿಚಾರಣಾ ಪ್ರಕ್ರಿಯೆಯಲ್ಲಿನ ಕೆಲವೊಂದು ಲೋಪಗಳಿಂದಾಗಿ ಆರೋಪಿ ಸುಲಭದಲ್ಲಿ ಜಾಮೀನು ಪಡೆದುಕೊಳ್ಳುವಂತಾಗುತ್ತದೆ. ಜನರಿಗೆ ಕಾನೂನು ಗೊತ್ತಿದೆ, ಆದರೆ ಕಾನೂನಿನ ಭಯ ಇಲ್ಲ. ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೆ ತಂದರೂ ಅದರ ಅರಿವು ಇನ್ನಷ್ಟೆ ಆಗಬೇಕಾಗಿದೆ. ಕಾನೂನಿನಡಿ ವಿಚಾರಣೆ ನಡೆದು ಬೇಗನೆ ಶಿಕ್ಷೆಯಾಗಬೇಕಾದರೆ ಲೋಕಾಯುಕ್ತ ಸಹಿತ ಎಲ್ಲ ಕಾನೂನಿಗೆ ಸೂಕ್ತ ತಿದ್ದುಪಡಿಯ ಅಗತ್ಯತೆ ಇದೆ ಎಂದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್‌, ನಗರ ಪೊಲೀಸ್‌ ಕಮಿಷನರ್‌ ಅನುಪಮ ಅಗರ್‌ವಾಲ್‌, ಲೋಕಾಯುಕ್ತ ಉಪ ನಿಬಂಧಕರಾದ ರಾಜಶೇಖರ್‌, ಬಸವರಾಜಪ್ಪ, ಅರವಿಂದ, ಹಿರಿಯ ಸಿವಿಲ್‌ ನ್ಯಾಯಾಧೀಶೆ ಶೋಭಾ, ಲೋಕಾಯುಕ್ತ ದ.ಕ. ಎಸ್ಪಿ ನಟರಾಜ್‌ ಮತ್ತಿತರರಿದ್ದರು.

2 ದಿನದಲ್ಲಿ 81 ದೂರು ಇತ್ಯರ್ಥ

ಮಂಗಳೂರಿನಲ್ಲಿ ಕಳೆದ ಎರಡು ದಿನಗಳ ಕಾಲ ನಡೆದ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ವಿಚಾರಣೆಯಲ್ಲಿ ಒಟ್ಟು 193 ದೂರು ಸ್ವೀಕರಿಸಲಾಗಿದ್ದು, 81 ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ. ಇದು ಲೋಕಾಯುಕ್ತ ವಿಚಾರಣೆಯಲ್ಲಿ ಮೂರನೇ ದೊಡ್ಡ ವಿಲೇವಾರಿಯಾಗಿದೆ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.ಶಿರಾಡಿಗೆ ಆ್ಯಂಬುಲೆನ್ಸ್‌:

ರಾಷ್ಟ್ರೀಯ ಹೆದ್ದಾರಿ 76 ಹಾದುಹೋಗುವ ಶಿರಾಡಿ ಘಾಟ್‌ನಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಲೋಕಾಯುಕ್ತಗೆ ಬೇಡಿಕೆ ಸಲ್ಲಿಸಿದ್ದರು. ಈ ಬಗ್ಗೆ ಸೋಮವಾರ ವಿಚಾರಣೆ ವೇಳೆ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್‌ ಸೌಲಭ್ಯ ಒದಗಿಸುವಂತೆ ಸೂಚನೆ ನೀಡಿದ್ದೆ. ಕೇವಲ ಅರ್ಧ ಗಂಟೆಯಲ್ಲೇ ಜಿಲ್ಲಾ ಆರೋಗ್ಯ ಇಲಾಖೆ ಆ್ಯಂಬುಲೆನ್ಸ್‌ ಸೌಲಭ್ಯ ಕಲ್ಪಿಸಿದೆ ಎಂದರು.

ಸ್ವಯಂ ಪ್ರೇರಿತ ದೂರು ದಾಖಲು: ಒಟ್ಟು ಮೂರು ದಿನಗಳ ಭೇಟಿ ವೇಳೆ ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ತೆರಳಿ 90 ಟನ್‌ ಪೈಕಿ 10 ಟನ್‌ ಮಾತ್ರ ಕಸ ವಿಲೇವಾರಿಯಾಗಿರುವುದು ಗಮನಕ್ಕೆ ಬಂದಿತ್ತು. ಉಳಿದ ಕಸ ವಿಲೇವಾರಿಗೆ ಮಾಡದ ಕಾರಣ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ. ಅಲ್ಲದೆ ಅಲ್ಲಿನ ನೀರು, ಹಾಲು, ವಸತಿಗಳಲ್ಲಿ ಕಲುಷಿತ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು. ನಗರದ ಪಿವಿಎಸ್‌ನಲ್ಲಿರುವ ಕುದ್ಮಲ್ ರಂಗರಾವ್‌ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿದ್ದ ಓದುವ ಕೊಠಡಿ ಸಮಸ್ಯೆಯನ್ನು ನಿವಾರಿಸಲಾಗಿದೆ. ಉಟೋಪಚಾರದಲ್ಲಿ ತಾರತಮ್ಯ ಎಸಗದಂತೆ ಸೂಚನೆ ನೀಡಲಾಗಿದೆ. ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದಲ್ಲಿ ದೇಶಭಕ್ತಿ ಹಾಗೂ ಭ್ರಷ್ಟಾಚಾರ ಜಾಗೃತಿ ಬಗ್ಗೆ ತಿಳಿವಳಿಕೆ ನೀಡಲಾಗಿದೆ. ಹಳೆಯಂಗಡಿ ಗ್ರಾಮ ಪಂಚಾಯ್ತಿಯಲ್ಲಿ ಕಡತ ವಿಲೇವಾರಿ ವಿಳಂಬ ಬಗ್ಗೆ ಕೇಸು ದಾಖಲಿಸಲಾಗಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ದೂರು ನೀಡುವ ಕುರಿತಂತೆ ಮಾಹಿತಿ ಫಲಕ ಅಳವಡಿಕೆಗೆ ಸೂಚನೆ ನೀಡಲಾಗಿದೆ ಎಂದರು. ನಿಡ್ಡೋಡಿಯ ಕಲ್ಲು ಕ್ವಾರಿಗೆ ಭೇಟಿ ನೀಡಿದ್ದು, ಆ ವೇಳೆ ಪರಾರಿಯಾದ ಹಿಟಾಚಿ, ಜೆಸಿಬಿ ಮತ್ತಿತರ ಪರಿಕರಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಕ್ವಾರಿಗೆ ಇರುವ ಅನುಮತಿ ಪತ್ರ ಪರಿಶೀಲಿಸಿ ನಿಯಮ ಉಲ್ಲಂಘಿಸಿರುವಲ್ಲಿ ಕ್ರಮ ವಹಿಸುವಂತೆ ಗಣಿ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಪೊಲೀಸ್‌ ಕಮಿಷನರ್‌ಗೆ ಸೂಚನೆ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಕೀಮ್‌ ವ್ಯವಹಾರದಲ್ಲಿ ನಾನಾ ರೀತಿ ಆಮಿಷ ತೋರಿಸಿ ಕೋಟ್ಯಂತರ ರು. ಹಣ ಸಂಗ್ರಹಿಸುವ ಬಗ್ಗೆ ನಾಗರಿಕರೊಬ್ಬರು ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಕೇಸು ದಾಖಲಿಸುವ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ಗೆ ಸೂಚನೆ ನೀಡಲಾಗಿದೆ ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಹೇಳಿದರು.ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದ ಪ್ರಶ್ನೆಗೆ ಅವರು ಉತ್ತರಿಸಿ, ಮೋಸಗೊಳ್ಳುವವರು ಇರುವತನಕ ಮೋಸಗೋಳಿಸುವವರು ಇರುತ್ತಾರೆ. 1 ಸಾವಿರ ರುಪಾಯಿಗೆ ತಿಂಗಳಿಗೊಂದು ಫ್ಲ್ಯಾಟ್‌, ಗಾಡಿ ಕೊಡಲು ಸಾಧ್ಯವೇ? ಜನರು ಈ ಬಗ್ಗೆ ಜಾಗೃತರಾಬೇಕು. ಪದೇ ಪದೇ ಮೋಸ ಹೋಗುವುದು ಸರಿಯಲ್ಲ. ನನಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸ್‌ ಕಮಿಷನರ್‌ ಕ್ರಮಕೈಗೊಳ್ಳಲಿದ್ದಾರೆ ಎಂದರು.ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ಪ್ರತಿಕ್ರಿಯಿಸಿ, ಸ್ಕೀಮ್‌ ಆರೋಪಕ್ಕೆ ಸಂಬಂಧಪ್ಟಂತೆ ಲೋಕಾಯುಕ್ತರ ಸೂಚನೆಯಂತೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು. ಈವರೆಗೆ ಯಾರೂ ಅಧಿಕೃತವಾಗಿ ದೂರು ನೀಡದ ಕಾರಣ ಪ್ರಕರಣ ದಾಖಲಿಸಲು ಸಾಧ್ಯವಾಗಿಲ್ಲಘಿ. ಲೋಕಾಯುಕ್ತರ ಶಿಫಾರಸು ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಯೋಗೇಶ್ವರ್‌
ಕೋಗಿಲು ಕ್ರಾಸ್‌ ಸಂತ್ರಸ್ತರಲ್ಲಿ 26 ಮಂದಿ ಬಳಿಯಷ್ಟೇ ಸೂಕ್ತ ದಾಖಲೆ