ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗುತ್ತದೆ. ಕಲಿಕೆಯಲ್ಲಿ ಏಕಾಗ್ರತೆ ಹಾಗೂ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಚಿತ್ತ ನಿರ್ಧಾರ ಕೈಗೊಳ್ಳಲು ಕ್ರೀಡೆ ಮಹತ್ವದ ಪಾತ್ರ ಕೈಗೊಳ್ಳುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಅಭಿಪ್ರಾಯಪಟ್ಟರು.ಪಟ್ಟಣದ ಹೇಮಾವತಿ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಶಾಲಾ ಶಿಕ್ಷಣ ಇಲಾಖೆ ಮತ್ತು ದೊಡ್ಡಕಾಡನೂರು ಜೆಎಸ್‌ಎಸ್ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಳ್ಳಿಮೈಸೂರು ಹೋಬಳಿ ಮಟ್ಟದ ೨೦೨೪-೨೫ನೇ ಸಾಲಿನ ಪ್ರೌಢಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಜೆಎಸ್‌ಎಸ್ ಸಂಸ್ಥೆಯು ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುವ ಜತೆಗೆ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದೆ ಎಂದು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತೀರ್ಪುಗಾರರು ಯಾವುದೇ ತಾರತಮ್ಯವಿಲ್ಲದೆ ತೀರ್ಪು ನೀಡುತ್ತಾರೆ. ಜತೆಗೆ ಸೋಲು ಗೆಲುವು ಸಾಮಾನ್ಯ ಮತ್ತು ಸೋಲು ಗೆಲುವಿನ ಮೆಟ್ಟಿಲು ಎಂದು ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು.ದೈಹಿಕ ಶಿಕ್ಷಕ ನಂದೀಶ್ ಎಲ್.ಎಂ. ನೇತೃತ್ವದಲ್ಲಿ ನಡೆದ ಕ್ರೀಡಾಕೂಟದ ವೇದಿಕೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಚಾರು ಮತ್ತು ತಂಡದವರ ಪ್ರಾರ್ಥಿಸಿದರು. ಜೆಎಸ್‌ಎಸ್ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಸುರೇಶ್ ಪಿ. ಸ್ವಾಗತಿಸಿದರು, ಸಹಶಿಕ್ಷಕ ಲೋಕೇಶ್ ವಂದಿಸಿದರು. ಚಿತ್ರಕಲಾ ಶಿಕ್ಷಕ ಸೋಮಶೇಖರಪ್ಪ ನಿರೂಪಣೆ ಮಾಡಿದರು.
ಜೆಎಸ್‌ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಚೌಡಯ್ಯ ಕಟ್ನವಾಡಿ, ನಗರ ಪೊಲೀಸ್ ಠಾಣೆಯ ಎಎಸ್‌ಐ ಕುಮಾರಸ್ವಾಮಿ, ತಾ. ದೈಹಿಕ ಶಿಕ್ಷಣ ಪರಿವೀಕ್ಷಕ ಹಾಗೂ ಸಂಘಟನಾ ಕಾರ್ಯದರ್ಶಿ ಮಹೇಶ್ ಜಿ., ತಾ. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಕಾಂತರಾಜು ಎಚ್.ಎಚ್., ನಿರ್ದೇಶಕ ಸಂಗಪ್ಪ ರಕ್ಕಸಗಿ, ದೊಡ್ಡಕಾಡನೂರು ಸಂಸ್ಕಾರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಪ್ರೇಮಕುಮಾರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ ಪಿ.ಎಲ್, ಕಾರ್ಯದರ್ಶಿ ಪುಟ್ಟರಾಜು, ಪ್ರೈಮರಿ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಯ್ಯ, ಕರ್ನಾಟದ ರಾಜ್ಯ ನೌಕರರ ಸಂಘದ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯದರ್ಶಿ ಸುಜಾತ ಅಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.