ಅಜ್ಜರಕಾಡುವಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರತಿಯೊಬ್ಬರ ದೈಹಿಕ ಸದೃಢತೆಗೆ ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ. ಸದಾ ಕೆಲಸದ ಒತ್ತಡವನ್ನು ಅನುಭವಿಸುವ ಪೊಲೀಸರ ದೈಹಿಕ ಸಾಮರ್ಥ್ಯ ಹಾಗೂ ಸಾಮಾಜಿಕ ಒಲವು ಹೆಚ್ಚಿಸುವ ನಿಟ್ಟಿನಲ್ಲಿ ಕ್ರೀಡಾಕೂಟ ಅಗತ್ಯವಾಗಿದ್ದು, ಯಾವುದೇ ಒತ್ತಡವಿಲ್ಲದೇ ಪೂರ್ಣವಾಗಿ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.ಅವರು ಸೋಮವಾರ ನಗರದ ಅಜ್ಜರಕಾಡುವಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಸೇವೆ ಅಪಾರ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ದೈನಂದಿನ ಕರ್ತವ್ಯವನ್ನು ನಿಭಾಯಿಸಿಕೊಂಡು ಹೋಗುವುದರ ಜೊತೆಗೆ ಕ್ರೀಡಾ ಅಭಿರುಚಿ ಬೆಳೆಸಿಕೊಂಡಿರುವುದು ಉತ್ತಮ ವಿಚಾರ. ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜವಾಗಿದ್ದು, ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯವನ್ನು ಸದೃಢವಾಗಿರಿಸಿಕೊಳ್ಳಿ ಎಂದರು.ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಮಿಥುನ್ ಎಚ್.ಎನ್. ಮಾತನಾಡಿ, ಪೊಲೀಸರು ಹಾಗೂ ಸಿಬ್ಬಂದಿ ಕ್ರೀಡೆಗಳಲ್ಲಿ ಸಕ್ರಿಯವಾಗಿ ಉತ್ಸಾಹದಿಂದ ಪಾಲ್ಗೊಂಡು, ಅದ್ಭುತವಾದ ಪ್ರದರ್ಶನ ನೀಡುವುದರೊಂದಿಗೆ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದು ಹೇಳಿದರು.ಕ್ರೀಡಾಕೂಟದಲ್ಲಿ ವಿವಿಧ ಪೊಲೀಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ನ ಆರ್.ಎಸ್.ಐ. ಅಮೀರ್ ಪಾಷಾ ಪ್ರಮಾಣ ವಚನ ಬೋಧಿಸಿದರು. ಎಪಿಸಿ ಜೀವನ್ ನಾಯ್ಕ್ ಕ್ರೀಡಾ ಜ್ಯೋತಿ ಬೆಳಗಿಸಿದರು. ಈ ಸಂದರ್ಭ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಸ್ವಾಗತಿಸಿದರು. ಯೋಗೇಶ್ ನಾಯ್ಕ್ ನಿರೂಪಿಸಿದರು. ಎಎಸ್‌ಪಿ ಎಸ್.ಟಿ ಸಿದ್ದಲಿಂಗಪ್ಪ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.