ಕಂದಾಯ ಇಲಾಖೆ ನೌಕರರ ಕ್ರೀಡಾಕೂಟಕ್ಕೆ ಚಾಲನೆ, ಜಿಲ್ಲಾ ಆಟದ ಮೈದಾನದಲ್ಲಿ ಎರಡು ದಿನಗಳ ಕ್ರೀಡಾಕೂಟ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ಅದರಿಂದ ಹೊರ ಬರಲು ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.
ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಆರಂಭಗೊಂಡ ಕಂದಾಯ ಇಲಾಖೆ ನೌಕರರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ವರ್ಷವಿಡೀ ಕಂದಾಯ ಇಲಾಖೆ ನೌಕರರು ಅತ್ಯಂತ ಒತ್ತಡದಲ್ಲಿಯೇ ಕೆಲಸ ಮಾಡಬೇಕು. ಯಾವ ನಿಮಿಷದಲ್ಲಿ ಏನಾಗುತ್ತದೆ ಎಂಬುದನ್ನು ನಿರೀಕ್ಷಿಸಲಾಗದ ಸಂದರ್ಭಗಳೂ ಇರುತ್ತವೆ. ಈ ರೀತಿ ಸದಾ ಒತ್ತಡದಲ್ಲಿರುವ ನೌಕರರಿಗೆ ಇಂತಹ ಕ್ರೀಡಾಕೂಟಗಳಿಂದ ಮಾನಸಿಕವಾಗಿ, ದೈಹಿಕವಾಗಿ ವಿಶ್ರಾಂತಿ ಹಾಗೂ ಶಾಂತಿ ದೊರೆಯುತ್ತದೆ ಎಂದು ಹೇಳಿದರು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸೋಲು, ಗೆಲುವು ಮುಖ್ಯವಲ್ಲ. ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ. ಎರಡು ದಿನಗಳ ಕಾಲ ಅಧಿಕಾರಿಗಳು, ನೌಕರರು ಎಂಬ ಭೇದವಿಲ್ಲದೆ ಪಾಲ್ಗೊಂಡು ಉತ್ಸಾಹದಿಂದ ಮುಂದಿನ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವ ಮನೋಸ್ಥೈರ್ಯ ಬೆಳೆಸಿ ಕೊಳ್ಳಬೇಕೆಂದು ಕರೆ ನೀಡಿದರು.ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪ್ರತ್ಯೇಕ ತಂಡಗಳಾಗಿ ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಸೇರಿದಂತೆ ಚೆಸ್, ಬ್ಯಾಟ್‌ಮಿಂಟನ್ ಪಂದ್ಯಾವಳಿಗಳನ್ನು ಏರ್ಪಡಿಸಿ ಕಂದಾಯ ಇಲಾಖೆ ನೌಕರರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಕ್ರೀಡಾಜ್ಯೋತಿ ಸ್ವೀಕರಿಸಿದರು. ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಎಚ್.ಡಿ. ರಾಜೇಶ್, ತರೀಕೆರೆ ಉಪ ವಿಭಾಗಾಧಿಕಾರಿ ಡಾ. ಕಾಂತರಾಜ್ ಮತ್ತು ಜಿಲ್ಲೆಯ ಎಲ್ಲಾ ತಹಸೀಲ್ದಾರ್‌ಗಳು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ಹೇಮಂತ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.9 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಆರಂಭಗೊಂಡ ಕಂದಾಯ ಇಲಾಖೆ ನೌಕರರ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಉದ್ಘಾಟಿಸಿದರು.