ಉತ್ತಮ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆ ಸಹಕಾರಿ: ವೀರೇಶ್ ಮಲಶೆಟ್ಟಿ

KannadaprabhaNewsNetwork | Published : Dec 18, 2024 12:46 AM

ಸಾರಾಂಶ

ಸಂಡೂರಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ೨೦೨೪-೨೫ನೇ ಸಾಲಿನ ಎರಡು ದಿನಗಳ ಅಂತರ್ ಮಹಾವಿದ್ಯಾಲಯದ ಖೋಖೋ ಪುರುಷ ಹಾಗೂ ಮಹಿಳಾ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆಯ ಸ್ಪರ್ಧೆಗಳನ್ನು ಉದ್ಘಾಟಿಸಲಾಯಿತು.

ಸಂಡೂರು: ಸದೃಢ ದೇಹದಲ್ಲಿ ಸದೃಢ ಮನಸ್ಸು ಇರಲಿದೆ. ಕ್ರೀಡಾ ಚಟುವಟಿಕೆ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿವೆ ಎಂದು ಸಂಡೂರು ಪೊಲೀಸ್ ಠಾಣೆಯ ಉಪ ನಿರೀಕ್ಷಕ ವೀರೇಶ್ ಮಲಶೆಟ್ಟಿ ಅಭಿಪ್ರಾಯಪಟ್ಟರು.

ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ಎರಡು ದಿನಗಳ ಅಂತರ್ ಮಹಾವಿದ್ಯಾಲಯದ ಖೋಖೋ ಪುರುಷ ಹಾಗೂ ಮಹಿಳಾ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆಯ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾ ಚಟುವಟಿಕೆ ಕ್ರೀಡಾಪಟುಗಳ ಉತ್ಸಾಹ, ಸ್ಫೂರ್ತಿ, ಸ್ಪರ್ಧೆ ಹಾಗೂ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ. ಇಂದಿನ ದಿನಗಳಲ್ಲಿ ವಿದ್ಯಾರ್ಜನೆಯ ಜತೆಗೆ ಕ್ರೀಡೆಗಳಲ್ಲಿ ಭಾಗವಹಿಸುವುದು ಅಗತ್ಯವಿದೆ ಎಂದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ಮುಖ್ಯಸ್ಥ ಶಶಿಧರ ಕೆಲ್ಲೂರ್ ಮಾತನಾಡಿ, ಖೋಖೋ ಆಟವು ಭಾರತದ ಮೂಲ ಗ್ರಾಮೀಣ ಕ್ರೀಡೆಯಾಗಿದ್ದು, ಈ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ನಾತಕೋತ್ತರ ಕೇಂದ್ರದ ಖನಿಜ ಸಂಸ್ಕರಣ ವಿಭಾಗದ ಮುಖ್ಯಸ್ಥ ಡಾ.ಎಸ್.ಎಂ. ಶಶಿಧರ, ಖೋಖೋ ಆಟದ ಉಲ್ಲೇಖ ಮಹಾಭಾರತದಲ್ಲಿದೆ ಎಂದು ಹೇಳಲಾಗಿದೆ. ಇದೊಂದು ಭಾರತದ ಪ್ರಾಚೀನ ಕ್ರೀಡೆ. ೧೯೧೪ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರು ಈ ಕ್ರೀಡೆಯ ಮೊದಲ ನಿಯಮಗಳ ಪುಸ್ತಕ ರಚಿಸಿದ ಹೆಗ್ಗಳಿಕೆ ಇದೆ. ಖೋಖೋ ಒಲಿಂಪಿಕ್ಸ್‌ ಕ್ರೀಡೆಗಳಲ್ಲೂ ಸೇರಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಪಂದ್ಯಾವಳಿಯಲ್ಲಿ ೮ ಪುರುಷರ ಹಾಗೂ ೪ ಮಹಿಳಾ ತಂಡಗಳು ಭಾಗವಹಿಸಿವೆ. ರೇಖಾ ಪ್ರಾರ್ಥಿಸಿದರು. ಕೇಂದ್ರದ ಕ್ರೀಡಾ ಸಹಾಯಕ ನಿರ್ದೇಶಕ ಶಿವರಾಮಪ್ಪ ರಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ಡಾ. ಚೌಡಪ್ಪ ವಿ.ಎ. ಕಾರ್ಯಕ್ರಮ ನಿರೂಪಿಸಿದರು. ಡಾ. ಬಸವರಾಜ ಹಟ್ಟಿ ಸ್ವಾಗತಿಸಿದರು. ಜಿ. ಹನುಮಂತಪ್ಪ ವಂದಿಸಿದರು. ವಿವಿಧ ಮಹಾವಿದ್ಯಾಲಯಗಳ ತಂಡಗಳ ವ್ಯವಸ್ಥಾಪಕರು, ಕೇಂದ್ರದ ಕ್ರೀಡಾ ಸಹಾಯಕ ಪಾಪಯ್ಯ, ಕೇಂದ್ರದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Share this article