ಆಟ- ಪಾಠ ವಿದ್ಯಾರ್ಥಿ ಜೀವನದ ಎರಡು ಕಣ್ಣುಗಳಿದ್ದಂತೆ: ವಿಲಾಸ್ ರಾಜ್ ಪ್ರಸನ್ನ

KannadaprabhaNewsNetwork |  
Published : Sep 19, 2026, 02:30 AM IST
ಹಳಿಯಾಳ- ದಾಂಡೇಲಿ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ವಿದ್ಯಾರ್ಥಿಯನ್ನು ಓದು ಬುದ್ಧಿವಂತವನ್ನಾಗಿಸಿದರೆ ಆಟ ಆರೋಗ್ಯವಂತನ್ನಾಗಿಸುತ್ತದೆ. ಈ ಎರಡೂ ಸೇರಿದರೆ ಅವನು ಪರಿಪೂರ್ಣ ವ್ಯಕ್ತಿಯಾಗುತ್ತಾನೆ.

ಹಳಿಯಾಳ: ಓದಿನಿಂದ ಮೆದುಳಿಗೆ ಆಹಾರ ಸಿಕ್ಕರೆ, ಆಟದಿಂದ ದೇಹ ಮತ್ತು ಮನಸ್ಸಿಗೆ ಶಕ್ತಿ ಸಿಗುತ್ತದೆ. ಒಬ್ಬ ಆದರ್ಶ ವಿದ್ಯಾರ್ಥಿ ಬೆಳಗ್ಗೆ ಓದಿನಲ್ಲಿ ಮುಳುಗಿದರೆ ಸಂಜೆ ಆಟದ ಮೈದಾನದಲ್ಲಿ ಬೆವರು ಹರಿಸಬೇಕು. ಓದು ಮತ್ತು ಆಟ ವಿದ್ಯಾರ್ಥಿ ಜೀವನದ ಎರಡು ಕಣ್ಣುಗಳು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸ್ ರಾಜ್ ಪ್ರಸನ್ನ ಹೇಳಿದರು.

ಶುಕ್ರವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2026- 27ನೇ ಸಾಲಿನ ಹಳಿಯಾಳ- ದಾಂಡೇಲಿ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಯನ್ನು ಓದು ಬುದ್ಧಿವಂತವನ್ನಾಗಿಸಿದರೆ ಆಟ ಆರೋಗ್ಯವಂತನ್ನಾಗಿಸುತ್ತದೆ. ಈ ಎರಡೂ ಸೇರಿದರೆ ಅವನು ಪರಿಪೂರ್ಣ ವ್ಯಕ್ತಿಯಾಗುತ್ತಾನೆ ಎಂದರು.

ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ ಭಾವಿಕೇರಿ ಮಾತನಾಡಿ, ಓದು ಜ್ಞಾನದ ಬುನಾದಿಯಾಗಿದೆ. ಆಟವು ಆರೋಗ್ಯದ ಆಧಾರವಾಗಿದೆ. ಕ್ರೀಡಾಕ್ಷೇತ್ರದಲ್ಲೂ ಉತ್ತಮ ಸಾಧನೆಯನ್ನು ಮಾಡಿದರೆ ಉಜ್ವಲ ಭವಿಷ್ಯವನ್ನು ರೂಪಿಸುವ ಅವಕಾಶವು ಲಭಿಸುತ್ತದೆ. ಕ್ರೀಡಾಪಟುಗಳಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನವಿದೆ. ಹಳಿಯಾಳ ತಾಲೂಕು ಕ್ರೀಡಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದು, ಇಲ್ಲಿನ ಕ್ರೀಡಾಪಟುಗಳು ಕ್ರೀಡಾಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಾ ತಾಲೂಕಿನ ಹಾಗೂ ಪಾಲಕರ ಹೆಸರಿಗೆ ಕೀರ್ತಿಯನ್ನು ತರುತ್ತಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಇಒ ಪ್ರಮೋದ ಮಹಾಲೆ ಮಾತನಾಡಿ, ಓದು ವಿದ್ಯಾರ್ಥಿ ಜೀವನದ ಕರ್ತವ್ಯ. ಆದರೆ ಓದು ಮಾತ್ರ ಇದ್ದರೇ ವಿದ್ಯಾರ್ಥಿಯು ಯಂತ್ರದಂತೆ ಆಗುತ್ತಾನೆ. ಅದಕ್ಕಾಗಿ ಕ್ರೀಡೆಯೂ ಅವಶ್ಯಕ. ಇದರಿಂದ ವಿದ್ಯಾರ್ಥಿಗಳಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ಮಾನಸಿಕ ಲಾಭಗಳು ಸಹ ಆಗುತ್ತವೆ ಎಂದರು.

ಸನ್ಮಾನ: 2026- 27ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚಿಬ್ಬಲಗೇರಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಿದ್ದಪ್ಪ ಬಿರಾದಾರ ಹಾಗೂ ರಾಜ್ಯಮಟ್ಟದಲ್ಲಿ ಉತ್ತಮ ಶಾಲೆ ಪ್ರಶಸ್ತಿ ಪಡೆದ ಹಳಿಯಾಳದ ಶಾಸಕರ ಮಾದರಿ ಶಾಲೆಯ ಮುಖ್ಯೋಧ್ಯಾಪಕ ಸುನೀಲ ಗಾಂವಕರ ಅವರನ್ನು ತಾಲೂಕಾಡಳಿತ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಸಂಘ ಪರವಾಗಿ ಸನ್ಮಾನಿಸಲಾಯಿತು.

ರಾಷ್ಟ್ರೀಯ ಮಟ್ಟದ ಕುಸ್ತಿಪಟು ಶಾಲಿನಿ ಸಿದ್ಧಿ ಮುಂದಾಳತ್ವದಲ್ಲಿ ಕ್ರೀಡಾಪಟುಗಳ ತಂಡವು ಕ್ರೀಡಾಜ್ಯೋತಿಯನ್ನು ತಂದು ಕ್ರೀಡಾಕೂಟಕ್ಕೆ ಶುಭಾರಂಭವನ್ನು ಕೋರಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ಗೋಪಾಳ ಲಮಾಣಿ ಕ್ರೀಡಾಪ್ರತಿಜ್ಞೆಯನ್ನು ಬೋಧಿಸಿದರು. ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ ಸನದಿಯವರ ಮುಂದಾಳತ್ವದಲ್ಲಿ ಕ್ರೀಡಾಪಟುಗಳ ಪರೇಡ್ ನಡೆಯಿತು.

ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್ ನಾಯ್ಕ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ, ಪದಾಧಿಕಾರಿಗಳಾದ ಉದಯ ನಾಯ್ಕ, ಆನಂತ ತೋರ್ಲೆಕರ, ರಮೇಶ ಪಾಟೀಲ, ರಾಧಾ ದೇಶಬಂಡಾರಿ, ಹವಾಲ್ದಾರ್, ಅಕ್ಷರ ದಾಸೋಹ ಅಧಿಕಾರಿ ಎಸ್.ಎಸ್. ನೂಲಿನ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾಕೀರ ಜಂಗೂಬಾಯಿ, ಜ್ಯೋತಿಪ್ರಭಾ ಹಾಗೂ ಇತರರು ಇದ್ದರು. ಜಿ.ಎಸ್. ಮಠಪತಿ ಹಾಗೂ ಗಣಪತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಯಿಂದ ದೈಹಿಕ, ಮಾನಸಿಕ ಬೆಳವಣಿಗೆ: ಶಿವಶೇಖರ್
ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 77.45 ಲಕ್ಷ ರು. ಲಾಭ