ಮಾನಸಿಕ, ದೈಹಿಕವಾಗಿ ದೇಹ ದಂಡಿಸುವ ಕ್ರೀಡೆ, ವ್ಯಾಯಾಮ ಮುಖ್ಯ: ಡಾ.ಕುಮಾರ

KannadaprabhaNewsNetwork |  
Published : Mar 12, 2025, 12:51 AM IST
10ಕೆಎಂಎನ್ ಡಿ28 | Kannada Prabha

ಸಾರಾಂಶ

ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರೂ ಸದೃಢತೆ ಕಾಪಾಡಿಕೊಳ್ಳಬೇಕು. ಎಲ್ಲರೂ ತಮ್ಮ ದಿನನಿತ್ಯದ ಜೀವನದಲ್ಲಿ ಯೋಗ, ಧ್ಯಾನ, ಕ್ರೀಡೆಯಂತಹ ಉತ್ತಮ ಚಟುವಟಿಕೆಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಾಗೂ ಪ್ರತಿದಿನ‌ ಕೆಲಸ ನಿರ್ವಹಿಸಲು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ನೌಕರರಿಗೆ ದೇಹವನ್ನು ದಂಡಿಸುವ ಕ್ರೀಡೆ ಹಾಗೂ ವ್ಯಾಯಾಮ ಮುಖ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಪಟ್ಟಣದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟದಲ್ಲಿ ವಿವಿಧ ಕ್ರೀಡಾ ಚಟುವಟಿಕೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತ ಕ್ರೀಡೆ ಪಾಲ್ಗೊಳ್ಳುವುದು ಅತಿ ಮುಖ್ಯ ಎಂದರು.

ಜಿಲ್ಲಾ ಮಟ್ಟದ ವಿಜೇತರು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಈಗಾಗಲೇ ಅನೇಕ ನೌಕರರು ತಮ್ಮ ಕೆಲಸ ಕಾರ್ಯಗಳ ಜೊತೆಗೆ ಕ್ರೀಡೆಯಲ್ಲಿ ಅನೇಕ ಸಾಧನೆ ಮಾಡಿದ್ದಾರೆ. ಕ್ರೀಡಾಕೂಟಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿರುವ ಎಲ್ಲಾ ಸರ್ಕಾರಿ ನೌಕರರಿಗೆ ಶುಭ ಕೋರಿದರು.

ಕೇವಲ ಕ್ರೀಡೆಯಲ್ಲದೆ ಸರ್ಕಾರಿ ನೌಕರರಲ್ಲಿ ಇರುವ ವಿಶೇಷ ಪ್ರತಿಭೆ ಅನಾವರಣಗೊಳಿಸಲು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರಿ ನೌಕರರ ಸಂಘ ಮತ್ತು ಜಿಲ್ಲಾಡಳಿತ ನಿಮ್ಮೆಲ್ಲರಿಗೂ ಉತ್ತಮ ವೇದಿಕೆ ಕಲ್ಪಿಸಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ನಿಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದರು.

ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಕ್ರೀಡಾ ಜ್ಯೋತಿ ಹಸ್ತಾಂತರ ಮಾಡಿ ಮಾತನಾಡಿ, ಆರೋಗ್ಯ ದೃಷ್ಟಿಯಿಂದ ಪ್ರತಿಯೊಬ್ಬರೂ ಸದೃಢತೆ ಕಾಪಾಡಿಕೊಳ್ಳಬೇಕು. ಎಲ್ಲರೂ ತಮ್ಮ ದಿನನಿತ್ಯದ ಜೀವನದಲ್ಲಿ ಯೋಗ, ಧ್ಯಾನ, ಕ್ರೀಡೆಯಂತಹ ಉತ್ತಮ ಚಟುವಟಿಕೆಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ವೃತ್ತಿಜೀವನದಲ್ಲಿ ಹಾಗೂ ವೈಯಕ್ತಿಕ ಜೀವನ ಸುಸ್ಥಿರರಾಗಿ ಕಾರ್ಯ ನಿರ್ವಾಹಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಉಪ ನಿರ್ದೇಶಕ ಓಂ ಪ್ರಕಾಶ್, ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕಿ ವರಲಕ್ಷ್ಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಕ.ರಾ‌.ಸ.ನೌ.ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಶಂಭುಗೌಡ, ಖಜಾಂಚಿ ಹೇಮಣ್ಣ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ