ಕನ್ನಡಪ್ರಭ ವಾರ್ತೆ ತಿಪಟೂರು
ಕ್ರೀಡೆಯು ಸ್ನೇಹ, ಸೌಹಾರ್ದತೆ ಬೆಳೆಸುವ ಸಾಧನವಾಗಿದ್ದು, ಇದಕ್ಕೆ ಜಾತಿ, ಮತ, ಭಾಷೆಯ ಗಡಿಯಿರುವುದಿಲ್ಲ. ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಿದಾಗ ಒಬ್ಬ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಬಹುದು ಎಂದು ತಿಪಟೂರು ಡಿವೈಎಸ್‌ಪಿ ವಿನಾಯಕ ಎನ್. ಶೆಟಿಗೇರಿ ತಿಳಿಸಿದರು.ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕೆಎಲ್‌ಎ ಸ್ಕೂಲ್ ಅಫ್ ಲಾ ಕಾಲೇಜು ವತಿಯಿಂದ ಆಯೋಜಿಸಿದ್ದ ಅಂತರ ಕಾಲೇಜು ಕೆಎಲ್‌ಎ ಕಪ್- ೨೦೨೫ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು- ಗೆಲುವು ಸಹಜ. ಆದರೆ ಕ್ರೀಡಾಸ್ಫೂರ್ತಿಯೊಂದಿಗೆ ಭಾಗವಹಿಸುವುದು ಮುಖ್ಯ. ವಿದ್ಯಾರ್ಥಿಗಳು ಮೊಬೈಲ್‌ನಲ್ಲಿರುವ ಗೇಮ್‌ಗಳಿಗೆ ದಾಸರಾಗುವ ಬದಲು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಲಾ ಕಾಲೇಜು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಕ್ರೀಡಾಭಾವನೆ ಮೂಡಿಸುತ್ತಿದ್ದು, ವಿದ್ಯಾರ್ಥಿಗಳು ಸೋಲು- ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಎಂದರು.
ಎನ್‌ಎಸ್‌ಎಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಜಿ.ಎನ್. ನಾಗೇಂದ್ರ ಮಾತನಾಡಿ, ಕ್ರೀಡೆ ಮನುಷ್ಯನ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡಾಸ್ಫೂರ್ತಿ ನಿಮ್ಮ ಜೀವನದ ಏಳು- ಬೀಳುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಸುತ್ತದೆ. ನಮ್ಮ ಕಾಲೇಜಿನಲ್ಲಿ ಕ್ರಿಕೆಟ್ ಆಯೋಜನೆಗೆ ವಿದ್ಯಾರ್ಥಿಗಳು ಹಾಗೂ ಬೋಧಕ- ಬೋಧಕೇತರ ವರ್ಗದ ಆಸಕ್ತಿ ಪರಿಶ್ರಮವೇ ಕಾರಣ. ವಿದ್ಯಾರ್ಥಿಗಳಿಗೆ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡುವುದು ಹಾಗೂ ಕ್ರೀಡಾ ಉತ್ಸಾಹದೊಂದಿಗೆ ಮನರಂಜನೆ ಪಡೆಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕೆಎಲ್‌ಎ ಸ್ಕೂಲ್ ಅಫ್ ಲಾ ಕಾಲೇಜು ಪ್ರಾಚಾರ್ಯರಾದ ವಿನೀತಾ, ಸಹಾಯಕ ಪ್ರಾಧ್ಯಾಪಕರಾದ ಪ್ರಸನ್ನ ಕುಮಾರ್, ಎ.ಆರ್. ಪುನೀತ್ ಕುಮಾರ್ ಉಪಸ್ಥಿತರಿದ್ದರು. ತಿಪಟೂರು ಕೆಎಲ್‌ಎ ಸ್ಕೂಲ್ ಅಫ್ ಲಾ ಕಾಲೇಜು ಹಾಗೂ ಹಾಗೂ ಜಿಪಿಟಿ ಕಾಲೇಜು ತುರುವೇಕೆರೆ ವಿರುದ್ಧ ನಡೆದ ನೇರ ಹಣಾಹಣಿಯಲ್ಲಿ ತಿಪಟೂರು ಕೆಎಲ್‌ಎ ಸ್ಕೂಲ್ ಅಫ್ ಲಾ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿತು. ತುರುವೇಕೆರೆ ಜಿಪಿಟಿ ದ್ವಿತೀಯ ಸ್ಥಾನ ಪಡೆದುಕೊಂಡಿತು.