ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಆಯೋಜಿಸಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಮಹಾನಗರ ಪಾಲಿಕೆ ಮೇಯರ್ ಎಂ. ಚಂದ್ರೇಗೌಡ ಆಟ ಆಡುವುದರ ಮೂಲಕ ಚಾಲನೆ ನೀಡಿದರು.ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನಿಗೆ ಆರೋಗ್ಯ ಕಾಪಾಡುವುದು ಮುಖ್ಯವಾಗಿರುತ್ತದೆ. ಜಿಲ್ಲಾ ಪತ್ರಕರ್ತರ ಸಂಘದಿಂದ ರಾಜ್ಯಮಟ್ಟದ ಕ್ರೀಡಾಕೂಟ, ಕೆಸರು ಗದ್ದೆ ಆಟೋಟ ಇವೆಲ್ಲಾ ಆಯೋಜಿಸಿರುವುದನ್ನು ನೋಡಿದರೆ ದೇಶಿ ಕ್ರೀಡೆಯನ್ನು ಉಳಿಸಿ ಬೆಳೆಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೀರಿ ಎಂದು ಶ್ಲಾಘಿಸಿದರು. ಸಮಾಜದ ಸ್ವಾಸ್ಥ್ಯ ಕಾಪಾಡಲು ಕ್ರೀಡೆಗೆ ಪತ್ರಕರ್ತರು ಕೊಡುಗೆ ನೀಡುತ್ತಿದ್ದೀರಿ, ಅದೇ ರೀತಿ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಿಂದ ಸಾಧ್ಯ ಎನ್ನುವ ಸಂದೇಶವನ್ನೂ ಕೊಟ್ಟಿದ್ದೀರಿ ಎಂದರು.
ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ, ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಈ ರೀತಿಯ ಕ್ರೀಡಾಕೂಟಗಳನ್ನು ಆಗಾಗ ಆ ಯೋಜನೆ ಮಾಡಿ ತಮ್ಮ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.ಪ್ರತಿ ವರ್ಷ ಪತ್ರಕರ್ತರ ದಿನಾಚರಣೆ ಹಿನ್ನೆಲೆಯಲ್ಲಿ ನಡೆಸುವ ಕ್ರೀಡಾಕೂಟಗಳು ಒಳ್ಳೆಯ ಬೆಳವಣಿಗೆಯಾಗಿದ್ದು, ನಮ್ಮ ಮಹಾನಗರ ಪಾಲಿಕೆ ವತಿಯಿಂದಲೂ ತಮ್ಮ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಿ ಮಾತನಾಡಿ, ಪತ್ರಕರ್ತರು ಎಂದರೆ ಯಾವ ಸಮಯದಲ್ಲೂ ವಿರಾಮವೇ ಇರುವುದಿಲ್ಲ, ದಿನದ ೨೪ ಗಂಟೆಗಳ ಕಾಲ ಕೆಲಸ ಮಾಡುತ್ತಲೇ ಇರುತ್ತಾರೆ, ಯಾವ ಸಂಕಷ್ಟ ಪರಿಸ್ಥಿತಿಯಲ್ಲೂ ಕೆಲಸ ಮಾಡಲೇಬೇಕು. ಇಂತಹ ಒತ್ತಡದಲ್ಲೂ ಕೂಡ ಪ್ರತಿವರ್ಷ ಪತ್ರಿಕಾ ದಿನಾಚರಣೆ ಅಂಗವಾಗಿ ಇಂತಹ ಕ್ರೀಡಾಕೂಟ ಹಮ್ಮಿಕೊಂಡಿರುವುದು ಸಂತೋಷದ ವಿಷಯ. ಎಲ್ಲರೂ ಒಂದು ಕುಟುಂಬದಂತೆ ಕ್ರೀಡಾಕೂಟದಲ್ಲಿ ಭಾಗವಹಿಸಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನೆರವಾಗುವ ಈ ಕ್ರೀಡಾಕೂಟದಲ್ಲಿ ಸಂತೋಷದಿಂದ ಪಾಲ್ಗೊಳ್ಳಿ. ಸೋಲು- ಗೆಲುವನ್ನು ಮನಸ್ಸಿಗೆ ಹೆಚ್ಚು ತೆಗೆದುಕೊಳ್ಳಬಾರದು, ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ರಾಜ್ಯ ಪತ್ರಕರ್ತರ ಸಂಘದ ವಿಶೇಷ ಆಹ್ವಾನಿತರಾದ ರವಿ ನಾಕಲಗೂಡು ಮಾತನಾಡಿ, ಕಳೆದ ೨೦ ವರ್ಷಗಳಿಂದ ಇಂತಹ ಕ್ರೀಡಾಕೂಟ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೆಲ ದಿನಗಳ ಹಿಂದೆ ಕೆಸರು ಗದ್ದೆ ಕ್ರೀಡಾಕೂಟ ಏರ್ಪಡಿಸಿದ್ದು, ಯಶಸ್ವಿಯಾಗಿ ನಡೆದಿದೆ. ಇಂದು ಷಟಲ್ ಬ್ಯಾಡ್ಮಿಂಟನ್ ಏರ್ಪಡಿಸಿದ್ದು, ಮುಂದಿನ ದಿನಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ತೀರ್ಮಾನಿಸಲಾಗಿದೆ. ಮುಂದೆ ಸಭೆ ನಂತರ ತೀರ್ಮಾನಿಸಲಾಗುವುದು ಎಂದರು.ಜುಲೈ ತಿಂಗಳಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಅಂಗವಾಗಿ ಪ್ರತಿವರ್ಷ ಆಚರಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಲೀಲಾವತಿ, ಕೆ.ಆರ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಉಪಾಧ್ಯಕ್ಷ ಮೋಹನ್ ಕುಮಾರ್, ಹರೀಶ್, ಖಜಾಂಚಿ ಕುಮಾರ್, ಕಾರ್ಯದರ್ಶಿ ಪಿ.ಎ. ಶ್ರೀನಿವಾಸ್, ಸಿ.ಬಿ. ಸಂತೋಷ್ ಹಾಗೂ ಜಿಲ್ಲೆಯ ಇತರೆ ತಾಲೂಕಿನ ಅಧ್ಯಕ್ಷರು, ಪದಾಧಿಕಾರಿಗಳು, ಪತ್ರಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.