ಕನ್ನಡಪ್ರಭ ವಾರ್ತೆ ಕಾಪು
ಅಕ್ಷರಾಭ್ಯಾಸವೇ ಸರ್ವಸ್ವ ಅಲ್ಲ. ಜೀವನಕ್ಕೆ ಸ್ಫೂರ್ತಿ ತುಂಬುವ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕು. ಜೀವನಕ್ಕೆ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರೀಡೆಗಳು ಪ್ರೇರಣೆ ನೀಡುತ್ತವೆ. ಸತತ ಅಭ್ಯಾಸ, ಪರಿಶ್ರಮದ ಜೊತೆಗೆ ಗೆಲ್ಲಲೇಬೇಕೆಂಬ ಛಲ ರೂಡಿಸಿಕೊಂಡು ಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡಾಗ ಯಶಸ್ಸು ನಿಶ್ಚಿತ. ಕ್ರೀಡೆಗಳು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ವೃದ್ಧಿಗೆ ಪೂರಕ ಎಂದು ಕಾಪು ತಾಲೂಕು ತಹಸೀಲ್ದಾರ್ ಡಾ. ಪ್ರತಿಭಾ ಆರ್. ಹೇಳಿದರು.ಅವರು ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ೨೦೨೪-೨೫ನೇ ಸಾಲಿನ ಮಂಗಳೂರು ವಲಯ ಮಟ್ಟದ ತಾಂತ್ರಿಕ ಮಹಾವಿದ್ಯಾಲಯಗಳ ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.ಮಹಿಳೆಯರು ತಮ್ಮ ಜೀವನದ ಅನೇಕ ಪಾತ್ರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದರೂ ಸಹ, ಸಾಸಿವೆಯಷ್ಟು ಗೆಲುವನ್ನು ಪಡೆಯಲು ಸಮುದ್ರದಷ್ಟು ಶ್ರಮಪಡಬೇಕು. ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದಕ್ಕಾಗಿ ಅಭಿನಂದಿಸಿದರು.ಗೌರವ ಅತಿಥಿಗಳಾಗಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಹರೀಶ್ ಬೆಳ್ಮಣ್ ಭಾಗವಹಿಸಿದ್ದರು.
ಸಂಸ್ಥೆಯ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಡಾ. ಪ್ರತಿಭಾ ಆರ್. ಅವರನ್ನು ಮಾದರಿಯಾಗಿ ಪರಿಗಣಿಸಿ ಉತ್ತಮ ಸಾಧನೆಯನ್ನು ಮಡುವಂತೆ ತಿಳಿಸಿದರು ಹಾಗೂ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಪ್ರಾರಂಭದಲ್ಲಿ ವಿದ್ಯಾರ್ಥಿನಿ ಚಿತ್ಕಲಾ ಪ್ರಾರ್ಥಿಸಿದರು. ಪ್ರೊ.ಸೌಂದರ್ಯ ಸ್ವಾಗತಿಸಿದರು. ಪ್ರೊ.ಸಚಿನ್ ಪ್ರಭು ಪರಿಚಯಿಸಿದರು. ಪ್ರೊ.ಪ್ರೀತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ವಿವಿಧ ಎಂಜಿನಿಯರಿಂಗ್ ಕಾಲೇಜಿನ ಒಟ್ಟು ಒಂಭತ್ತು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಈ ಪಂದ್ಯಾವಳಿಯಲ್ಲಿ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಮಂಗಳೂರಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ, ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ಮಂಗಳೂರಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು. ಪಂದ್ಯದಲ್ಲಿ ವಿಜೇತರಾದವರಿಗೆ ಸಂಸ್ಥೆಯ ಪ್ರಾಂಶುಪಾಲರು ಬಹುಮಾನ ನೀಡಿ ಗೌರವಿಸಿದರು.
ಈ ಸಂದರ್ಭ ದೈಹಿಕ ಶಿಕ್ಷಣ ನಿರ್ದೇಶಕ ಪೌಲ್ ಸೂರಜ್ ಮತ್ತು ಶುಭಶ್ರೀ ಉಪಸ್ಥಿತರಿದ್ದರು.