ಅರೆಕಾಡುವಿನ ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಷನ್ ಅಸೋಸಿಯೇಷನ್ ನ ವತಿಯಿಂದ ನಿರ್ಮಾಣಗೊಂಡಿರುವ ಬ್ಯಾಡ್ಮಿಂಟನ್ ಅಂಕಣವನ್ನು ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಹಾಗೂ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಪುಷ್ಪ ಕುಟ್ಟಣ್ಣ ಉದ್ಘಾಟಿಸಿದರು.
ಮಡಿಕೇರಿ: ಅರೆಕಾಡುವಿನ ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಷನ್ ಅಸೋಸಿಯೇಷನ್ ನ ವತಿಯಿಂದ ನಿರ್ಮಾಣಗೊಂಡಿರುವ ಬ್ಯಾಡ್ಮಿಂಟನ್ ಅಂಕಣವನ್ನು ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಹಾಗೂ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಪುಷ್ಪ ಕುಟ್ಟಣ್ಣ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಇಂದಿನ ಒತ್ತಡದ ಯುಗದಲ್ಲಿ ಪ್ರತಿಯೊಬ್ಬರಿಗೂ ವ್ಯಾಯಾಮದ ಅಗತ್ಯವಿದೆ. ದೇಹ ಮತ್ತು ಮನಸ್ಸಿನ ಆರೋಗ್ಯದ ವೃದ್ಧಿಗೆ ಕ್ರೀಡಾಕೂಟಗಳು ಹೆಚ್ಚು ಸಹಕಾರಿಯಾಗಿದೆ. ನೂತನ ಬ್ಯಾಡ್ಮಿಂಟನ್ ಅಂಕಣವನ್ನು ಎಲ್ಲರೂ ಸದುಪಯೋಗ ಪಡಿಸಿಕೊಂಡು ಕ್ರೀಡೆಗೆ ಉತ್ತೇಜನ ನೀಡುವಂತೆ ಕರೆ ನೀಡಿದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಇಂದು ನಾವು ಬಿಡುವಿಲ್ಲದ ಜೀವನಕ್ಕೆ ಒಗ್ಗಿ ಹೋಗಿದ್ದೇವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕೂಡ ಸಮಯವಿಲ್ಲದಾಗಿದೆ. ಪ್ರತಿಯೊಬ್ಬರ ಯಶಸ್ಸಿನ ಗುಟ್ಟು ಆರೋಗ್ಯದಲ್ಲೇ ಅಡಗಿರುವುದರಿಂದ ಆರೋಗ್ಯವಂತ ಜೀವನಕ್ಕೆ ಆದ್ಯತೆ ನೀಡಬೇಕೆಂದು ಕಿವಿಮಾತು ಹೇಳಿದರು.ಸಾಮಾಜಿಕ ಕಳಕಳಿಯೊಂದಿಗೆ ಸೇವೆ ಸಲ್ಲಿಸುತ್ತಾ ಸಾಂಸ್ಕೃತಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿರುವ ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಷನ್ ಅಸೋಸಿಯೇಷನ್ ಕ್ರೀಡೆಗಳಿಗೂ ಉತ್ತೇಜನ ನೀಡುತ್ತಿರುವುದು ಹೆಮ್ಮೆ ಎನಿಸಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಷನ್ ಅಸೋಸಿಯೇಷನ್ ನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರು ಬ್ಯಾಡ್ಮಿಂಟನ್ ಅಂಕಣ ನಿರ್ಮಾಣಕ್ಕೆ ಸಹಕರಿಸಿದ ಸರ್ವರನ್ನು ಸ್ಮರಿಸಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ಇದು ಕೇವಲ ಒಂದು ಬ್ಯಾಡ್ಮಿಂಟನ್ ಕೋರ್ಟ್ ಅಲ್ಲ, ಪರಸ್ಪರ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುವ ಸ್ಥಳವಾಗಿದೆ. ಕುಟುಂಬಗಳನ್ನು ಒಗ್ಗೂಡಿಸುವ, ಮಕ್ಕಳಲ್ಲಿ ಹಾಗೂ ಯುವ ಸಮೂಹದಲ್ಲಿ ಶಿಸ್ತು ಮತ್ತು ಕ್ರೀಡಾ ಮನೋಭಾವವನ್ನು ಬೆಳೆಸುವ ಕೇಂದ್ರವಾಗಿದೆ ಎಂದರು.ಹಿರಿಯರಾದ ಬಿದ್ದಂಡ ಮಾದಯ್ಯ, ಅಸೋಸಿಯೇಷನ್ ನ ಪದಾಧಿಕಾರಿಗಳು, ಸದಸ್ಯರು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.