ಕ್ರೀಡೆಯಿಂದ ಆರೋಗ್ಯದ ಜೊತೆಗೆ ಉದ್ಯೋಗ ಸೃಷ್ಟಿ

KannadaprabhaNewsNetwork | Published : May 14, 2025 12:01 AM
Follow Us

ಸಾರಾಂಶ

ಗುಂಡ್ಲುಪೇಟೆ ಜೆಎಸ್‌ಎಸ್‌ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರೊ.ಮೊರಬದ ಮಲ್ಲಿಕಾರ್ಜುನ ಬಹುಮಾನ ವಿತರಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಅಂತಿಮ ವರ್ಷದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಹೋಗುತ್ತೀರಿ, ನಿಮಗೆಲ್ಲ ಒಳ್ಳೆಯದಾಗಲಿ ಎಂದು ಕೊಳ್ಳೇಗಾಲದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಡಾ.ಜಯಶಂಕರ ಹೇಳಿದರು. ಪಟ್ಟಣದ ಜೆಎಸ್‌ಎಸ್‌ ಅನುಭವ ಮಂಟಪದಲ್ಲಿ ಜೆಎಸ್‌ಎಸ್‌ ಮಹಾವಿದ್ಯಾಪೀಠ ಹಾಗೂ ಜೆಎಸ್‌ಎಸ್‌ ಕಲಾ ಮತ್ತು ವಾಣಿಜ್ಯ ಕಾಲೇಜು ಆಯೋಜಿಸಿದ್ದ ೨೦೨೪-೨೫ ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕ್ರೀಡೆಯಿಂದ ಆರೋಗ್ಯದ ಜೊತೆಗೆ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದರು. ಶಿಕ್ಷಣ ಎಂದರೆ ಕೇವಲ ಹಾಜರಾತಿ, ಪರೀಕ್ಷೆ, ಆಂತರಿಕ ಅಂಕಗಳು ಇಷ್ಟಕ್ಕೆ ಸೀಮಿತವಾಗಬಾರದು. ತಂದೆ ತಾಯಿ ಕಷ್ಟಪಟ್ಟು ಓದಿಸುತ್ತಾರೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಪ್ರಾಂಶುಪಾಲ ಡಾ.ಮಹದೇವಮ್ಮ ಪಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪದವಿ ಮುಖ್ಯವಾದ ಘಟ್ಟ, ಈ ಅವಧಿಯಲ್ಲಿ ಕ್ರೀಡೆಯಲ್ಲಿ ಭಾಗವಹಿಸುವುದರ ಜೊತೆಗೆ ಸಂಸ್ಕೃತಿ ಕೂಡ ಇರಬೇಕು. ಪರೀಕ್ಷೆಗಾಗಿ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಮಾನವ ಸಂಪನ್ಮೂಲ ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಕಳೆದ ಸಮಯ ಮತ್ತೆ ಬರುವುದಿಲ್ಲ ಎಂದರು. ೨೦೨೪-೨೫ ನೇ ಸಾಲಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಅನಿತಾ ಬಿ.ಎಸ್, ಕ್ರೀಡಾ ವೇದಿಕೆ ಸಂಚಾಲಕ ಮಲ್ಲುಸ್ವಾಮಿ ಎನ್, ವಾಣಿಜ್ಯ ಶಾಸ್ತ್ರ ವಿಭಾಗದ ಜೀವಿತಾ ಜಿ.ಎಸ್,ಸಾಂಸ್ಕೃತಿಕ ವೇದಿಕೆ ಸಂಚಾಲಕ ಪಂಕಜ ಎಚ್.ಎಸ್, ಗ್ರಂಥಪಾಲಕ ಗಿರೀಶ್ ಕುಮಾರ್ ಡಿ.ಬಿ ಹಾಗೂ ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಿಜವಾದ ಮಾನವೀಯ ನೆಲೆಯಲ್ಲಿ

ಆಲೋಚಿಸಿ: ಪ್ರೊ.ಮಲ್ಲಿಕಾರ್ಜುನ

ಬುದ್ಧ, ಬಸವಣ್ಣ, ಅಂಬೇಡ್ಕರ್‌ರಂತಹ ಮಹಾನ್ ದಾರ್ಶನಿಕರ ಒಟ್ಟು ಬದುಕು ವರ್ತಮಾನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಜೆಎಸ್ಎಸ್ ಮಹಾ ವಿದ್ಯಾಪೀಠ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜನ ಹೇಳಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದುಕಿನಲ್ಲಿ ನಿಜವಾದ ಮಾನವೀಯ ನೆಲೆಯಲ್ಲಿ ಆಲೋಚನೆ ಮಾಡಬೇಕು. ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರೆ, ಸ್ಫೂರ್ತಿ ನೀಡುತ್ತದೆ ಎಂದರು. ಶಿಕ್ಷಣದಿಂದ ನಮ್ಮ ಜ್ಞಾನ ತಿಳಿವಳಿಕೆ ಅರಿವು ಹೆಚ್ಚಾಗುತ್ತದೆ. ಮೊಬೈಲ್‌ನಿಂದ ನಮ್ಮ ವಿವೇಕ ಅಂಧಃಪತನ ಕಡೆ ಹೋಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.