ಕನ್ನಡಪ್ರಭ ವಾರ್ತೆ, ಹುಮನಾಬಾದ್
ನಿತ್ಯ ಜೀವನಕ್ಕೆ ಅನುಕೂಲವಾಗುವಂತಹದ್ದು ಹಾಗೂ ಬೌದ್ಧಿಕ ಮತ್ತು ದೈಹಿಕ ಬೆಳೆವಣಿಗೆಗೆ ದೇಶಿ ಕ್ರೀಡೆ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಿಂದ 14 ಹಾಗೂ 17 ವರ್ಷದೊಳಗಿನ ಶಾಲಾ ಮಟ್ಟದ ವಿದ್ಯಾರ್ಥಿಗಳಿಗೆ ದೇಶಿ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯ ದತ್ತಿ ರಮೇಶ ಗಾದಾ ಮಾಹಿತಿ ನೀಡಿದರು.ಪಟ್ಟಣದ ರಾಮ್ ಆ್ಯಂಡ್ ರಾಜ್ ಪದವಿ ಪೂರ್ವ ಕಾಲೇಜಿನ ಸಭಾಮಂಟಪದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಡಿ.28ರಿಂದ 30ರವರೆಗೆ ಕಾಲೇಜಿನ ಆವರಣದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆ ಹುಮನಾಬಾದ್ ಅಡಿಯಲ್ಲಿ ಆಯೋಜಿಸಲಾಗಿರುವ ಹುಮನಾಬಾದ್ ಪಟ್ಟಣ ಸೇರಿದಂತೆ ಹುಡಗಿ ಮತ್ತು ಗಡವಂತಿ ವಲಯದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಟ್ಟದ ಸಾಂಪ್ರದಾಯಿಕ ದೇಶಿ ಕ್ರೀಡಾಕೂಟಗಳು ಜರುಗಲಿದೆ ಎಂದರು.
14 ವರ್ಷದೊಳಗಿನ ಹೆಣ್ಣು ಮಕ್ಕಳಿಗಾಗಿ ಚಕಾರ ಆಟ, ಹಾಫ್ ಜಂಪ್, ಕುಂಟೆ ಬಿಲ್ಲೆ ಆಟ, ತಲ್ಲಾಣಿ ಪಿಲ್ದಾಣಿ ಆಟ, ಬಳಿಚೂರ ಆಟ. ಈ ಆಟಗಳಿಗೆ ತಲಾ ಒಬ್ಬ ವಿದ್ಯಾರ್ಥಿ ಹಾಗೂ ಮಡಿಕೆ (ಗಡಿಗೆ) ಆಟಕ್ಕೆ ನಾಲ್ಕು ಆಯೋಜಿಸಲಾಗಿದೆ.14 ವರ್ಷದೊಳಗಿನ ಗಂಡು ಮಕ್ಕಳಿಗಾಗಿ ಗೋಣಿ ಚೀಲ, ಸೈಕಲ್ ಟೈರ್, ಗೋಟಿ, ಬುಗರಿ, ಕಪ್ಪೆ, ಬಿಲ್ಲು ಬಾಣ ಪ್ರತಿ ಆಟಕ್ಕೆ ಒಬ್ಬ ವಿದ್ಯಾರ್ಥಿ17 ವರ್ಷದೊಳಗಿನ ಹೆಣ್ಣು ಮಕ್ಕಳಿಗಾಗಿ ಅಳಿ ಗುಳಿ, ಪಗಡೆ, ಹುಲಿ ಕಟ್ಟು ಆಟಕ್ಕೆ ಒಬ್ಬ ವಿದ್ಯಾರ್ಥಿ, ಕಣ್ಣಾಮುಚ್ಚಾಲೆ, ಮಡಿಕೆ (ಗಡಿಗೆ) ತಲಾ ಆಟಕ್ಕೆ 4 ಜನ, ಲಗೋರಿ, ಹಗ್ಗ ಜಗ್ಗದಾಟಕ್ಕೆ ತಲಾ 5 ಜನ ವಿದ್ಯಾರ್ಥಿಗಳನ್ನು ಹಾಗೂ 17 ವರ್ಷದೊಳಗಿನ ಗಂಡು ಮಕ್ಕಳಿಗಾಗಿ ಮಡಿಕೆ (ಗಡಿಗೆ), ಗುಲೇಲ್ ಆಟಗಳಿಗೆ ಒಬ್ಬ ವಿದ್ಯಾರ್ಥಿ, ಉಪ್ಪಿನ ಚೀಲ 2 ಜನ, ಐದು ಕಾಲಿನ ಓಟಕ್ಕೆ 3 ಜನ, ಗಿಲ್ಲಿ ದಾಂಡು 4 ಜನ, ಲಗೋರಿ 5 ಜನ, ಹಗ್ಗ ಜಗ್ಗದಾಟಕ್ಕೆ 5 ಜನ ವಿದ್ಯಾರ್ಥಿಗಳನ್ನು ಆಯಾ ಶಾಲೆಯಿಂದ ಆಯ್ಕೆ ಮಾಡಿ ಕಳುಹಿಸಬೇಕು ಎಂದು ಮಾಹಿತಿ ನೀಡಿದರು.
ವೆಂಕಟೇಶ ಜಾಜಿ, ನಾಗರಾಜ ವಾಸಗಿ, ನಾರಾಯಣರಾವ್ ಜಾಜಿ, ಶುಭಂ ವಳಸೆ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಇದ್ದರು.