ಗದಗ: ಕ್ರೀಡೆಗಳು ಜೀವನದ ಬಹುಮುಖ್ಯ ಭಾಗವಾಗಿದೆ. ದೈಹಿಕ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳು ಹೆಚ್ಚು ಸಹಕಾರಿಯಾಗಿವೆ. ಗ್ರಾಮೀಣ ಕ್ರೀಡೆಯಾಗಿರುವ ಖೋಖೋ ಬೆಳೆಸಲು ವಿವಿಧ ಸವಲತ್ತು ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯ ಉಪಾಧ್ಯಕ್ಷ ಶಿವಯೋಗಿ ಯಲಿ ಹೇಳಿದರು.
ಗದುಗಿನ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ, ಗದಗ ಜಿಲ್ಲಾ ಖೋ-ಖೋ ಸಂಸ್ಥೆ ಸಹಯೋಗದೊಂದಿಗೆ ವ್ಯಕ್ತಿಯ ಸಮಗ್ರ ಬೆಳವಣಿಗೆಯಲ್ಲಿ ಖೋ-ಖೋ ಕ್ರೀಡೆಯ ಪಾತ್ರ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ನೆರವೇರಿತು.ರಾಜ್ಯದಲ್ಲಿ ಖೋಖೋ ಅಸೋಶಿಯೇಷನ್ ಸಂಸ್ಥೆಗೆ ಸರ್ಕಾರದ ಸೂಕ್ತ ಸವಲತ್ತುಗಳು ಸಿಗದಿರುವುದು ಬೇಸರದ ಸಂಗತಿಯಾಗಿದೆ. ಇದರಿಂದ ಖೋ ಖೋ ಕ್ರೀಡೆ ಜನಪ್ರಿಯತೆಯಲ್ಲಿ ಹಿಂದೆ ಉಳಿಯುವಂತಾಗಿದೆ. ಖೋ ಖೋ ಕ್ರೀಡೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಂಸ್ಥೆಯ ರಾಜ್ಯಮಟ್ಟದ ಪದಾಧಿಕಾರಿಗಳು, ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದೇವೆ. ಖೊ-ಖೊ ಒಂದು ಸಂಕೀರ್ಣವಾದ ಮತ್ತು ಕುಶಲತೆಯ ಆಟ. ಇದು ಆಟಗಾರರಲ್ಲಿ ತಂತ್ರಗಾರಿಕೆಯ ನೈಪುಣ್ಯವನ್ನೂ ತೀವ್ರ ದೈಹಿಕ ಚಟುವಟಿಕೆ ಮತ್ತು ಶಕ್ತಿ ಪ್ರಯೋಗ ಕಲಿಸಿ ತಯಾರು ಮಾಡುತ್ತದೆ ಎಂದು ಗದಗ ಜಿಲ್ಲಾ ಖೋ-ಖೋ ಸಂಸ್ಥೆಯ ಅಧ್ಯಕ್ಷ ಸಂಗಮೇಶ ಮೆಣಸಗಿ ತಿಳಿಸಿದರು.
ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎ.ವಿ.ದೇವಾಂಗಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಡೀ ವಿಶ್ವವೇ ದೇಶದ ಕ್ರೀಡೆಗಳನ್ನು ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಿಯ ಖೋ ಖೋ ಕ್ರೀಡೆಗೆ ಹೆಚ್ಚು ಜನಪ್ರಿಯತೆ ಸಿಗಬೇಕಿದೆ. ನಮ್ಮ ಮಹಾವಿದ್ಯಾಲಯದಲ್ಲಿ ಖೋಖೋ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುವುದು. ಖೋಖೋ ಕ್ರೀಡಾಕೂಟ ಸಂಘಟಿಸಲಾಗುತ್ತಿದೆ. ಈಗಾಗಲೇ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿನ ಖೋಖೋ ಕ್ರೀಡಾಪಟುಗಳು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ ಎಂದರು.ಕಾಯಕ್ರಮದಲ್ಲಿ ವಿ.ಎಂ. ಶಿರಗುಂಪಿ, ಎಚ್.ಎಸ್. ಬೆಳಕೊಪ್ಪದ, ಪ್ರವೀಣ ಚೂರಿ, ಪ್ರೋ.ಕಮಲಾ ಜಂಬಗಿ, ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.