ಧೈರ್ಯ, ಸಾಹಸಕ್ಕೆ ಕ್ರೀಡೆಗಳು ಸಹಕಾರಿ: ಶಿವರಾಜ ಕಣಜಿ

KannadaprabhaNewsNetwork | Published : Dec 6, 2023 1:15 AM

ಸಾರಾಂಶ

ಪಟ್ಟಣದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಸಂಸದರ ಕ್ರೀಡಾ ಮಹಾ ಮೇಳದಲ್ಲಿ ಅವರು ಮಾತನಾಡಿದರು.

ಕಮಲನಗರ: ವೈಯಕ್ತಿಕ ಓರೆ-ಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವ ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ಹಾಗೆಯೇ ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಾಯ ಮಾಡುತ್ತದೆ. ಅಲ್ಲದೇ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ ಎಂದು ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಕಣಜಿ ಹೇಳಿದರು.

ಪಟ್ಟಣದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಸಂಸದರ ಕ್ರೀಡಾ ಮಹಾ ಮೇಳದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಅಂತಹ ಪ್ರತಿಭೆಗಳನ್ನು ಗುರುತಿಸುವ ಕೆಲಸ ಸಂಸದರ ಕ್ರೀಡಾ ಮಹಾಮೇಳದ ಮೂಲಕ ಮಾಡಲಾಗುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ನಡುವೆ ಸಹೋದರತ್ವ ಸಂಬಂಧಗಳು ವೃದ್ಧಿಸಲಿವೆ. ಆದ್ದರಿಂದ ಕಡ್ಡಾಯವಾಗಿ ಎಲ್ಲಾ ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಶಿಕುಮಾರ ಬಿಡವೆ ಮಾತನಾಡಿ, ಕ್ರೀಡಾಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವ ಬೆಳೆಸುತ್ತದೆ. ನಿರಂತರವಾದ ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಸೋಲು ಕೊನೆಯಲ್ಲ, ಸೋಲೇ ಗೆಲುವಿನ ಸೋಪಾನ. ಕ್ರೀಡೆಯಲ್ಲಿ ಪರಿಣಿತರಾದವರಿಗೆ ಶ್ಯೆಕ್ಷಣಿಕ ಕ್ಷೇತ್ರದಲ್ಲೂ ಹಲವಾರು ಅವಕಾಶಗಳಿವೆ ಎಂದರು.

ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ ಉದ್ಘಾಟಿಸಿದರು. ತಾಪಂ ಅಧಿಕಾರಿ ಮಾಣಿಕರಾವ್‌ ಪಾಟೀಲ್‌ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಾಜಿರಾವ್‌ ಬೆಂಜರವಾಡೆ, ಅಮರ ಹಿರೇಮಠ, ಪಿಡಿಒ ರಾಜಕುಮಾರ ತಂಬಾಕೆ, ಪ್ರಾಚಾರ್ಯ ಒಕೆ ಪಾಟೀಲ್‌, ಪ್ರಾಂಶುಪಾಲ ಶಿವಾಜಿ ಆರ್‌ಎಸ್‌, ಸಿಪಿಐ ಅಮರೆಪ್ಪ ಎಸ್‌, ಪಿಎಸ್‌ಐ ಚಂದ್ರಶೇಖರ ನಿರ್ಣೆ, ಯಶವಂತ ಬಿರಾದಾರ, ಲಿಂಗಾನಂದ ಮಹಾಜನ, ರಾಮರಾವ್‌ ಜಾಧವ, ಸೂರ್ಯಕಾಂತ ಬಿರಾದಾರ, ಬಸವರಾಜ ಪಾಟೀಲ್‌, ಬಾಲಾಜಿ ತೇಲಂಗ್‌, ರಾಕೇಶ ಪಾಟೀಲ್‌, ವೈಜಿನಾಥ ಗುಡ್ಡಾ, ರಾಜಕುಮಾರ ಗಾಯಕವಾಡ ಇತರರಿದ್ದರು.

ಜ್ಞಾನೇಶ್ವರ ಚಾಂಡೇಶ್ವರೆ ಸ್ವಾಗತಿಸಿದರೆ ಮಾದಪ್ಪ ಮಡಿವಾಳ ನಿರೂಪಿಸಿ ರಾಮೇಶ್ವರಿ ಬಾವಗೆ ವಂದಿಸಿದರು. ಸಂಸದರ ಕ್ರೀಡಾ ಮಹಾಮೇಳದಲ್ಲಿ ತಾಲೂಕಿನ ಕಮಲನಗರ, ಠಾಣಾಕುಶನೂರ, ಖೇಡ-ಸಂಗಮ, ಸೋನಾಳ, ಬೆಳಕುಣಿ, ಖತಗಾಂವ ಗ್ರಾಮದ ಸುಮಾರು 15 ಶಾಲಾ ತಂಡಗಳು ಭಾಗವಹಿಸಿದ್ದವು.

Share this article