ಮಂಗಳೂರು: ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಹಿರಿಯ ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರಿಗೆ ಪ್ರತಿಷ್ಠಿತ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ನೀಡಿ ಬೆಂಗಳೂರಿನಲ್ಲಿ ಗೌರವಿಸಲಾಯಿತು.
ಬೆಂಗಳೂರು ಆರ್‌ಎನ್ಎಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ರವಿಶಂಕರ್ ಬಿ.ವಿ. ಅಧ್ಯಕ್ಷತೆ ವಹಿಸಿ ಎಸ್.ಜಗದೀಶ್ಚಂದ್ರ ಅಂಚನ್ ಅವರಿಗೆ ಬೆಳ್ಳಿ ಹಾಗೂ ಚಿನ್ನದ ಪದಕದೊಂದಿಗೆ ‘ಬಸವಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿದರು.
ಕ್ರೀಡಾ ಕ್ಷೇತ್ರದ ಬೆಳವಣಿಗೆ, ಕ್ರೀಡಾಪಟುಗಳ ಸಾಧನೆ ಹಾಗೂ ಕ್ರೀಡೆಗೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ತಮ್ಮ ಅಂಕಣ ಬರಹಗಳ ಮೂಲಕ ನಿರಂತರವಾಗಿ ದಾಖಲಿಸುತ್ತಿರುವ ಎಸ್.ಜಗದೀಶ್ಚಂದ್ರ ಅಂಚನ್ ಅವರ ಸೇವೆಯನ್ನು ಸಮಾರಂಭದಲ್ಲಿ ಶ್ಲಾಘಿಸಲಾಯಿತು. ಬೆಂಗಳೂರು ಆರ್‌ಎನ್‌ಎಸ್ ಕಾಲೇಜು ಹಾಗೂ ಮುಡಿಪುವಿನ ಜ್ಞಾನಶ್ರೀ ವಿದ್ಯಾಲಯದ ವತಿಯಿಂದಲೂ ಎಸ್.ಜಗದೀಶ್ಚಂದ್ರ ಅಂಚನ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.ಬಸವ ವೇದಿಕೆ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಶ್ರೀ ವಚನ ಜ್ಯೋತಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ದಾನಪ್ರಕಾಶ ಎನ್.ತಿಮ್ಮಪ್ಪ, ಬೆಂಗಳೂರು ಎಂಎನ್‌ಆರ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಮೋಹನ್ ಕುಮಾರ್ ಆರ್., ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಶೇಖರ, ಜ್ಞಾನ ಮಂದಾರ ಟ್ರಸ್ಟ್‌ನ ಸಂಸ್ಥಾಪಕ ಸೋಮಶೇಖರ್, ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ ಹಾಗೂ ಚಲನಚಿತ್ರ ನಟಿ ಎಂ.ಎಸ್.ಆರತಿ ಸುರೇಶ್, ಪ್ರೊ.ಕಾಂತಪ್ಪ, ಸಾಹಿತಿ ವಿಜಯಲಕ್ಷ್ಮಿ ಕೌಟಗೆ, ರಂಗ ಸಮಾಜ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಕಾರ್ಯದರ್ಶಿ ತಿಲಕ್‌ರಾಜ್ ಎಸ್. ಮತ್ತಿತರರು ಇದ್ದರು.