ಕನ್ನಡಪ್ರಭ ವಾರ್ತೆ ನಾಗಮಂಗಲ
ಪ್ರತಿಯೊಬ್ಬ ವ್ಯಕ್ತಿಗೆ ಉತ್ತಮ ಆರೋಗ್ಯ ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದು ನಾಗಮಂಗಲ ಉಪವಿಭಾಗದ ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್ ತಿಳಿಸಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಾಗಮಂಗಲ ಉಪ ವಿಭಾಗದ ಪೊಲೀಸ್ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ತಂಡಗಳ ನಡುವೆ ಈಚೆಗೆ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಬಹಳ ಮುಖ್ಯ. ಕ್ರಿಕೆಟ್ ಸೇರಿದಂತೆ ಇನ್ನಿತರೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.ಪಂದ್ಯಾವಳಿಯಲ್ಲಿ ಎರಡೂ ತಂಡಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ಕೊಟ್ಟಿವೆ. ಪೊಲೀಸ್ ತಂಡ ಗೆಲುವು ಸಾಧಿಸಿದೆ. ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಇಲಾಖೆಗಳ ತಂಡಗಳನ್ನು ಸಂಘಟಿಸಿ ಮತ್ತೊಂದು ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ನಿಟ್ಟಿನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮುಂದಾಳತ್ವ ವಹಿಸಬೇಕು. ಇದಕ್ಕೆ ಪೂರಕವಾಗಿ ಪೊಲೀಸ್ ಇಲಾಖೆ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ, ಯಾವುದೇ ಒಂದು ಹೊಸ ವಾಹನ ನೋಂದಣಿಯಾದ ಎರಡು ವರ್ಷದ ಬಳಿಕ ಪ್ರತಿ ವರ್ಷ ನವೀಕರಿಸುತ್ತೇವೆ. ಆದರೆ, ಪ್ರತಿಯೊಬ್ಬ ಮನುಷ್ಯ ಕೊನೆವರೆಗೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಪೊಲೀಸರು ಮತ್ತು ಪತ್ರಕರ್ತರ ಉತ್ಸಾಹ ನೋಡಿ ಬಹಳ ಸಂತೋಷವಾಗಿದೆ. ಯಾವುದೇ ಒಂದು ಕ್ರೀಡೆಯಲ್ಲಿ ಗೆಲುವಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವಾಗಿರುತ್ತದೆ ಎಂದರು.
ಆರಕ್ಷಕ ವೃತ್ತ ನಿರೀಕ್ಷಕ ನಿರಂಜನ್, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರವಿಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ್, ತಾಲೂಕು ಅಧ್ಯಕ್ಷ ಕೆ.ಸೀತಾರಾಮು ಮಾತನಾಡಿದರು.ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ಪೊಲೀಸರ ತಂಡ ಹಾಗೂ ದ್ವಿತೀಯ ಸ್ಥಾನ ಪಡೆದ ಪತ್ರಕರ್ತರ ತಂಡಕ್ಕೆ ಟ್ರೋಪಿ ನೀಡಿ ಪ್ರೋತ್ಸಾಹಿಸಲಾಯಿತು. ಇದಕ್ಕೂ ಮುನ್ನ ಡಿವೈಎಸ್‌ಪಿ ಲಕ್ಷ್ಮೀನಾರಾಯಣಪ್ರಸಾದ್ ಅವರು ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ಕೊಟ್ಟರು.
ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ಬಿಂಡಿಗನವಿಲೆ ಠಾಣೆ ಪಿಎಸ್‌ಐ ರಾಜೇಂದ್ರ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಣ್ಣಗೌಡ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪಿ.ಜೆ.ಜಯರಾಮು, ಉಪಾಧ್ಯಕ್ಷ ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಖಜಾಂಚಿ ಬಿ.ಸಿ.ಮೋಹನ್‌ಕುಮಾರ್ ಸೇರಿದಂತೆ ಎಲ್ಲ ಪತ್ರಕರ್ತರು ಹಾಗೂ ಪೊಲೀಸ್ ಕ್ರೀಡಾಪಟುಗಳು ಇದ್ದರು.