ಉಡುಪಿ ಜಿಲ್ಲೆಯಲ್ಲಿ ಕ್ರೀಡಾ ವಿವಿ ಸ್ಥಾಪನೆ ಚಿಂತನೆ: ಪರಮೇಶ್ವರ್

KannadaprabhaNewsNetwork |  
Published : Sep 19, 2026, 02:30 AM IST
ಡಿಸಿಎಂ ಡಾ. ಪರಮೇಶ್ವರ್ ಬೆಳಪುನಲ್ಲಿ ಕ್ರೀಡಾ ವಿವಿ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಿದರು | Kannada Prabha

ಸಾರಾಂಶ

ರಾಜ್ಯದಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಆರಂಭಿಸುವ ಚಿಂತನೆ ಸರ್ಕಾರದ ಮುಂದಿದೆ. ಅದಕ್ಕೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ಅಗತ್ಯ ಜಮೀನು ಲಭ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದ್ದಾರೆ.

ಕಾಪು: ರಾಜ್ಯದಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಆರಂಭಿಸುವ ಚಿಂತನೆ ಸರ್ಕಾರದ ಮುಂದಿದೆ. ಅದಕ್ಕೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ಅಗತ್ಯ ಜಮೀನು ಲಭ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದ್ದಾರೆ.ಶುಕ್ರವಾರ ಇಲ್ಲಿನ ಬೆಳಪು ಗ್ರಾಮದಲ್ಲಿ ಕ್ರೀಡಾ ವಿ.ವಿ. ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ ಸ್ಥಗಿತಗೊಂಡಿರುವ ಮಂಗಳೂರು ವಿವಿ ‘ಸ್ನಾತಕೋತ್ತರ ಅಧ್ಯಯನ ಮತ್ತು ಅತ್ಯಾಧುನಿಕ ಸಂಶೋಧನಾ ಕೇಂದ್ರ’ದ ಕಟ್ಟಡವನ್ನು ವೀಕ್ಷಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.ಬೆಳಪು ಗ್ರಾಮದಲ್ಲಿ ಕ್ರೀಡಾ ವಿವಿ ಸ್ಥಾಪನೆ ಸಾಧ್ಯವಾಗಬಹುದೇ? ಮತ್ತು ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲ, ಅದರ ಸ್ಥಾಪನೆಯ ಬಗ್ಗೆಯೂ ಪರಿಶೀಲಿಸಲು ಬಂದಿದ್ದೇನೆ ಎಂದು ಹೇಳಿದರು.

2014 - 15ರಲ್ಲಿ ಕೇಂದ್ರ ಸರ್ಕಾರದ ರೂಸಾ ಯೋಜನೆಯಡಿ ಸುಮಾರು 53.85 ಕೋಟಿ ರು. ವೆಚ್ಚದಲ್ಲಿ ಮಂಗಳೂರು ವಿವಿಯ ಸ್ನಾತಕೋತ್ತರ ಅಧ್ಯಯನ ಮತ್ತು ಅತ್ಯಾಧುನಿಕ ಸಂಶೋಧನಾ ಕೇಂದ್ರಕ್ಕಾಗಿ ನಿರ್ಮಿಸಲಾಗಿರುವ ಈ ಬೃಹತ್ ಕಟ್ಟಡವು ಬಳಕೆಯಾಗದೆ ಪಾಳು ಬಿದ್ದಿದೆ. ರಾಜ್ಯದಲ್ಲಿ ಉದ್ದೇಶಿತ ಎರಡು ವಿಜ್ಞಾನ ಕೇಂದ್ರಗಳಲ್ಲಿ ಇದೂ ಒಂದಾಗಿದ್ದು, ಈಗಾಗಲೇ 50 - 60 ಕೋಟಿ ರು. ವೆಚ್ಚ ಮಾಡಲಾಗಿದೆ. ಆದರ ರೂಸಾ ಯೋಜನೆ ಸ್ಥಗಿತಗೊಂಡಿದ್ದು, ಮಂಗಳೂರು ವಿವಿಯಿಂದಲೂ ಅನುದಾನ ಸಿಗದೇ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದೀಗ ವಿಜ್ಞಾನ ಕೇಂದ್ರಕ್ಕೆ ಚಾಲನೆ ನೀಡುವ ಕುರಿತು ಉನ್ನತ ಶಿಕ್ಷಣ ಸಚಿವರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.ಈ ವಿಚಾರಗಳನ್ನು ಪರಿಶೀಲಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಇಲ್ಲಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಅಭಿವೃದ್ಧಿಪಡಿಸಿರುವ ಕ್ಯಾಂಪಸನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ ಎಂದವರು ಹೇಳಿದರು.ಕರಾವಳಿ ಭಾಗದಲ್ಲಿ ಉತ್ತಮ ಕ್ರೀಡಾಂಗಣ ಅಗತ್ಯವಿದೆ. ಉಡುಪಿಯ ಮಹಾತ್ಮಗಾಂಧಿ ಸ್ಟೇಡಿಯಂ, ಮಂಗಳೂರಿನ ಮಂಗಳ ಸ್ಟೇಡಿಯಂಗಳ ಅಭಿವೃದ್ಧಿಗೆ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಡಿಸಿಎಂ ತಿಳಿಸಿದರು.ಸಚಿವ ಸಂಪುಟ ಸಭೆಯ ಬಗ್ಗೆ ಟೀಕೆಗಳು ಇದ್ದೇ ಇರುತ್ತವೆ, ಅದನ್ನೆಲ್ಲ ನಾವು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆ, ಸಂಪುಟ ಸಭೆ ತೀರ್ಮಾನವೆಂದರೆ ಅದು ಇಡೀ ಸರ್ಕಾರದ ತೀರ್ಮಾನವಾಗಿದೆ. ಅವುಗಳನ್ನು ಅನುಷ್ಠಾನಗೊಳಿಸಬೇಕಾಗುತ್ತದೆ. ಇಲ್ಲವಾದರೆ ಸಚಿವ ಸಂಪುಟಕ್ಕೆ ಯಾವುದೇ ವಿಚಾರಗಳನ್ನು ತರುವ ಅವಶ್ಯಕತೆಯೇ ಇರುವುದಿಲ್ಲ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸೆ.21ರಿಂದ ವಿಶೇಷ ಅಧಿವೇಶನ: ಸೆ. 21, 22 ಮತ್ತು 23ರಂದು ವಿಶೇಷ ಅಧಿವೇಶನ ಕರೆಯಲಾಗಿದೆ. ಅದರಲ್ಲಿ ವಿಶೇಷವಾಗಿ ಕಸ್ತೂರಿ ರಂಗನ್ ವರದಿ ಚರ್ಚೆಯಾಗುತ್ತದೆ, ರಾಜ್ಯದ ಬರ ಪರಿಸ್ಥಿತಿ - ಪರಿಹಾರದ ಬಗ್ಗೆಯೂ ಚರ್ಚಿಸಲಾಗುವುದು. ಈ ವಿಶೇಷ ಅಧಿವೇಶನವನ್ನು ರೈತರ ಹಿತದೃಷ್ಟಿಯಿಂದ ಕರೆಯಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಮಂಗಳೂರು ವಿವಿ ರಿಜಿಸ್ಟ್ರಾರ್ ಸಂತೋಷ್ ಬಿ. ಜಗಲಾಸರ್, ಕರ್ನಾಟಕ ಗೃಹ ಮಂಡಳಿ ಇಂಜಿನಿಯರ್ ಸಹನಾ, ಬೆಳಪು ಪಂಚಾಯಿತಿ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮುಂತಾದವರಿದ್ದರು.

ಚಿತ್ರ : ಗ್ರಾಮದಲ್ಲಿ ಕ್ರೀಡಾ ವಿವಿ ಸ್ಥಾಪನೆಗೆ ಡಿಸಿಎಂ ಪರಮೇಶ್ವರ್ ಸ್ಥಳ ಪರಿಶೀಲನೆ ನಡೆಸಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಯಿಂದ ದೈಹಿಕ, ಮಾನಸಿಕ ಬೆಳವಣಿಗೆ: ಶಿವಶೇಖರ್
ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 77.45 ಲಕ್ಷ ರು. ಲಾಭ