ಕನ್ನಡಪ್ರಭ ವಾರ್ತೆ ಆಲಮಟ್ಟಿ
ಈ ಕುರಿತು ಡಿ.6ರಂದು ಕನ್ನಡಪ್ರಭ 100ಕ್ಕೂ ಅಧಿಕ ಬೇವಿನ ಮರಗಳಿಗೆ ರೋಗ ಬಾಧೆ ಎಂಬ ಶೀರ್ಷಿಕೆಯಡಿ ಸಮಗ್ರ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಅರಣ್ಯಾಧಿಕಾರಿಗಳು, ತಜ್ಞರ ಶಿಫಾರಸ್ಸು ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರತಿ ಬಾಧಿತ ಗಿಡಗಳಿಗೆ ಎರಡು ಹಂತದಲ್ಲಿ ಶೀಲಿಂಧ್ರ ನಾಶಕ ಔಷಧ ಸಿಂಪಡಣೆ ಮಾಡುತ್ತಿದ್ದಾರೆ.
ಆಲಮಟ್ಟಿಯ ಪರಿಸರದಲ್ಲಿ ಸುಮಾರು 600ಕ್ಕೂ ಅಧಿಕ ಬೇವಿನ ಮರಗಳು ಟೀ ಮಾಸ್ಕುಟೋ ಬಗ್ ಕಾಯಿಲೆಗೆ ಒಳಗಾಗಿ ನಂತರ ಶಿಲೀಂಧ್ರದ ರೀತಿ ಡೈಬ್ಯಾಕ್ ಎಂಬ ರೋಗಕ್ಕೆ ತುತ್ತಾಗಿದ್ದವು. ಇದರಿಂದ ಮರಗಳ ಎಲೆಗಳು ಸಂಪೂರ್ಣ ಒಣಗಿ ಇಡೀ ಗಿಡಗಳು ಕಳಾಹೀನಗೊಳ್ಳುತ್ತಿದ್ದವು. ಆಲಮಟ್ಟಿ ಕೆಬಿಜೆಎನ್‌ಎಲ್ ಅರಣ್ಯ ಅಧಿಕಾರಿಗಳು ಸಸ್ಯ ತಜ್ಞರನ್ನು ಸಂಪರ್ಕಿಸಿ ಈ ರೋಗಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಅಗತ್ಯ ಸಲಹೆ ಪಡೆದಿದ್ದರು. ಔಷಧ ಸಿಂಪಡಣಾ ಸ್ಥಳಕ್ಕೆ ಡಿಎಫ್ಓ ಎನ್.ಕೆ. ಬಾಗಾಯತ್, ಆರ್‌ಎಫ್ಓ ಮಹೇಶ ಪಾಟೀಲ, ಉಪ ವಲಯ ಅರಣ್ಯಾಧಿಕಾರಿ ಸತೀಶ ಗಲಗಲಿ ಇತರರು ಭೇಟಿ ನೀಡಿ ಪರಿಶೀಲಿಸಿದರು. ಸಸ್ಯ ತಜ್ಞರ ಮಾರ್ಗದರ್ಶನದಲ್ಲಿ ಅಣೆಕಟ್ಟು ವ್ಯಾಪ್ತಿಯ ಸುಮಾರು 1000ಕ್ಕೂ ಅಧಿಕ ಬೇವಿನ ಮರಗಳಿಗೆ ಔಷಧ ಸಿಂಪಡಿಸಲಾಗುತ್ತಿದೆ ಹಾಗೂ ಮರಗಳ ಬಗ್ಗೆ ವಿಶೇಷ ನಿಗಾ ವಹಿಸಲಾಗಿದೆ ಎಂದು ಆರ್‌ಎಫ್ಓ ಮಹೇಶ ಪಾಟೀಲ ಮಾಹಿತಿ ನೀಡಿದರು.