ಬಳ್ಳಾರಿ: ರಂಗತೋರಣ ಸಂಸ್ಥೆ ಪ್ರತಿವರ್ಷ ಕೊಡಮಾಡುವ ರಾಜ್ಯಮಟ್ಟದ ‘ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ’ಕ್ಕೆ 2024ನೇ ಸಾಲಿಗೆ ಹಿರಿಯ ರಂಗಭೂಮಿ ನಟಿ ವೀಣಾ ಆದವಾನಿ, 2025ನೇ ಸಾಲಿಗೆ ವೃತ್ತಿ ರಂಗಭೂಮಿಯ ಹಿರಿಯ ನಟ ವಿಜಯಪುರದ ಶ್ರೀಧರ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ, ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ತಿಳಿಸಿದರು.
ತಾಲೂಕಿನ ಜೋಳದರಾಶಿಯ ದೊಡ್ಡನಗೌಡರು ನಮ್ಮ ನಾಡಿನ ಸಾಂಸ್ಕೃತಿಕ ಮೇರು ವ್ಯಕ್ತಿಯಾಗಿದ್ದಾರೆ. ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಿದ ಬಳ್ಳಾರಿ ರಾಘವ ಅವರ ಶಿಷ್ಯರಾಗಿದ್ದವರು. ನಾಟಕಕಾರರಾದ ಕೈಲಾಸಂ, ಶ್ರೀರಂಗ, ಉದ್ದಾಮ ಸಾಹಿತಿಗಳಾದ ಕುವೆಂಪು, ಮಾಸ್ತಿ, ಬಿಎಂಶ್ರೀ, ಅನಕೃ, ಡಿವಿಜಿ ಅಂಥವರಿಂದ ಪ್ರಾಚೀನ, ಆಧುನಿಕ ಕಾವ್ಯಗಳ ರಸಭರಿತ ಗಮಕಕ್ಕಾಗಿ ಸೈ ಎನ್ನಿಸಿಕೊಂಡವರು. ಕನ್ನಡ, ತೆಲುಗು ಉಭಯ ಭಾಷೆಗಳಲ್ಲಿ ನಾಟಕ, ಭಕ್ತಿಗೀತೆ, ವಚನಗಳು, ಲಾವಣಿ, ಭಜನೆಗಳು ಹೀಗೆ ಸಾಹಿತ್ಯ ರಚಿಸಿದವರು. ನಟ-ನಾಟಕಕಾರ, ಗಮಕ, ವಚನ ವಾಗ್ಗೇಯಕಾರ, ಲಾವಣಿಕಾರ, ಕವಿ, ಸಾಹಿತಿ-ಸಂಘಟಕ, ಗ್ರಾಮಾಭಿವೃದ್ಧಿಯ ಹರಿಕಾರ, ಪ್ರವಚನ ಶಿರೋಮಣಿ ಎನಿಸಿಕೊಂಡವರು. ಹೀಗೆ ಜೋಳದರಾಶಿ ದೊಡ್ಡನಗೌಡರು ಈ ನಾಡು ಕಂಡ ನಿಜದ ಅಚ್ಚರಿ, ಬಳ್ಳಾರಿಗೆ ಹೆಮ್ಮೆಯ ಗರಿಯಾಗಿದ್ದಾರೆ. ಅವರ ಹೆಸರಿನಲ್ಲಿ ರಂಗತೋರಣ ಸಂಸ್ಥೆ 2016ರಿಂದಲೂ ಹಿರಿಯ ರಂಗಭೂಮಿ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಪ್ರತಿದಿನ ಕಂಪನಿ ನಾಟಕಗಳಿಂದ ಸಾಮಾಜಿಕ ನಾಟಕಗಳ ಪ್ರದರ್ಶನ ಇರಲಿದೆ ಎಂದು ತಿಳಿಸಿದರು.
ಹಿರಿಯ ಬಯಲಾಟ ಕಲಾವಿದ ಮುದ್ದಟನೂರು ಎಚ್. ತಿಪ್ಪೇಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.ಪ್ರಶಸ್ತಿ ಪುರಸ್ಕೃತರ ಪರಿಚಯ:
ಹಾಸ್ಯಪಾತ್ರದಿಂದ ಹಿಡಿದು ನಾಯಕ, ಖಳನಾಯಕ, ಪೋಷಕ ಪಾತ್ರ, ಸ್ತ್ರೀ ಪಾತ್ರವನ್ನೂ ಯಶಸ್ವಿಯಾಗಿ ನಿಭಾಯಿಸಿರುವ ಶ್ರೀಧರ ಹೆಗಡೆ ನೂರಾರು ಸಹಕಲಾವಿದರಿಗೆ ನಟನೆಯ ಸೂತ್ರಗಳನ್ನು ಕಲಿಸಿದ ಗುರುವಾಗಿದ್ದಾರೆ. ನಾಟಕಗಳ ನಿರ್ದೇಶಕ, ಕಂಪನಿ ಕಟ್ಟಿ ನಡೆಸಿದ ಮಾಲೀಕ, ಬೇರೆಯವರ ಕಂಪನಿಯ ಸಂಘಟಕ, ನಾಟಕಗಳ ಸಂಚಾಲಕ ಹೀಗೆ ರಂಗಭೂಮಿಯ ಎಲ್ಲ ಮಜಲುಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದವರು. ಶ್ರೀಧರ ಇಡೀ ಬದುಕನ್ನು ರಂಗಭೂಮಿಗೆ ಸಮರ್ಪಿಸಿಕೊಂಡವರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೆರೆಹೊಂಡ ಗ್ರಾಮದ ಶ್ರೀಧರ ಹೆಗಡೆ ಸದ್ಯ ವಿಜಯಪುರದಲ್ಲಿ ವಾಸವಾಗಿದ್ದಾರೆ.
ಬಳ್ಳಾರಿ ಗಡಿನಾಡು ಅಆದವಾನಿಯ ಅಪ್ಪಟ ಕನ್ನಡ ಕಲಾವಿದೆ ಬಿ.ವೀಣಾಕುಮಾರಿ ಬಾಲ್ಯದಲ್ಲಿಯೇ ನಾಟಕ ರಂಗಕ್ಕೆ ಬಂದವರು. ನಾಯಕಿ, ಖಳನಾಯಕಿ, ಹಾಸ್ಯ ನಟಿಯಾಗಿ 70 ವರ್ಷಗಳು ಮೀರಿದ ಪ್ರಾಯದಲ್ಲೂ ಬೇಡಿಕೆ ಇರಿಸಿಕೊಂಡಿರುವ ನಟಿ. ಇವರು ಆದವಾನಿ ವೀಣಾ ಎಂದೇ ಪ್ರಸಿದ್ಧರು. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕ ಸೇರಿದಂತೆ 3,500ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಪಾತ್ರ ವಹಿಸಿದ್ದಾರೆ. ಕೊರೋನ ಕಾಲದಲ್ಲಿ ತೆರೆ ಹಿಂದೆ ಸರಿದ ಗಾಯಕಿ ಅನುಪಮಾ ಅಭಿನೇತ್ರಿ ಸುಭದ್ರಮ್ಮ ಮನ್ಸೂರು ಅವರ ಸ್ಥಾನವನ್ನು ಸುಲಲಿತವಾಗಿ ತುಂಬಿರುವುದು ಇವರ ನಟನೆಯ ಶ್ರದ್ಧೆಯೇ ಸಾಕ್ಷಿಯಾಗಿದೆ.