ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಪ್ರಾತಃಕಾಲ ಶ್ರೀಕರ್ತೃ ಗದ್ದುಗೆಗೆ ಪೂಜೆ, ಪಂಚಾಮೃತಾಭಿಷೇಕ, ಅಲಂಕಾರಿಕ ಪೂಜೆ, ತುಪ್ಪದಾರುತಿ, ಭಕ್ತಿ ಸಂಗೀತ ಸೇವೆ, ತಾಳ, ಮದ್ದಳೆ, ತಮಟೆ, ನಗಾರಿ, ಜಾಂಗಟೆ ಮುಂತಾದ ಸೇವೆಗಳೊಂದಿಗೆ ಶಾಸ್ತ್ರೋಕ್ತ ಪೂಜಾ ಕೈಂಕರ್ಯಗಳು ಅರ್ಚಕರಾದ ಅಲ್ಲಯ್ಯ, ಪರಯ್ಯ ಹಾಗೂ ಚನ್ನಯ್ಯ ತೆಳಗಿನಮನಿ ಇವರಿಂದ ಜರುಗಿದವು.
ಸಾಂಪ್ರದಾಯಿಕ ಪದ್ಧತಿಯಂತೆ ಛತ್ರಿ, ಚವರಿ, ಚಾಮರ, ಅಪ್ತಾಗಿರಿ, ತಾಳ, ಮದ್ದಳೆ, ಘಂಟೆ, ಜಾಂಗಟೆ, ಭಕ್ತ ಜನತೆಯ ಗೀತ ಸಂಗೀತದೊಂದಿಗೆ ಶ್ರೀಪ್ರಭುದೇವರ ಪಲ್ಲಕ್ಕಿ ಉತ್ಸವ ಜರುಗಿತು.೨೦೦೦ ಅಧಿಕ ಮಾತೆಯರಿಂದ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಾಗೂ ಪಟ್ಟಣದ ಕುಸುರಿ ಕಲಾವಿದ ಶಂಭು ಪೋತದಾರ ಮಕ್ಕಳಾದ ರಮೇಶ ಹಾಗೂ ಮೌನೇಶ ಅವರಿಂದ ಸಮೀಪದ ಹಳಿಂಗಳಿ ಗ್ರಾಮದ ಬನಹಟ್ಟಿ ಮಹಾವೀರ ಸ್ವೀಟ್ಸ್ ಅಂಗಡಿಯ ಪ್ರಕಾಶ ದೇಸಾಯಿ ಅವರು ಮಾಡಿಸಿದ ೬.೫ ಕೆ.ಜಿ ಅಪ್ಪಟ ಪೂರ್ಣ ಬೆಳ್ಳಿಯ ತೊಟ್ಟಿಲಿನಲ್ಲಿ ಪ್ರಭುವಿನ ಪ್ರತಿರೂಪವಾಗಿ ಪೂರ್ಣ ತೆಂಗನ್ನಿಟ್ಟು ಪೂಜಿಸಿ, ನಾಮಕರಣ ಮಾಡಿ, ಮಾತೆಯರು ಜೋಗುಳ ಹಾಡಿ, ಭಕ್ತಿ ಗೀತೆಗಳ ಸೇವೆ ಮಾಡುವುದರ ಮೂಲಕ ಜಯಂತಿ ಕಾರ್ಯಕ್ರಮ ನಡೆಸಿಕೊಟ್ಟರು. ದೇವ ಸ್ವರೂಪಿ ಪೂರ್ಣ ತೆಂಗನ್ನು ಭಕ್ತಿಯಿಂದ ಉಡಿಯೊಡ್ಡಿ ಪಡೆದುಕೊಂಡು, ಪೂಜಿಸಿದ ಭಕ್ತ ಮಾತೆಯರಿಗೆ ಒಂದೇ ವರುಷದಲ್ಲಿ ಸಂತಾನ ಭಾಗ್ಯ ಲಭಿಸುವದೆಂಬ ಬಲವಾದ ನಂಬಿಕೆ ಎಂದೂ ಹುಸಿಯಾಗಿಲ್ಲ. ಹಾಗೇಯೇ ಈ ಭಾರಿ ೨೫ಕ್ಕೂ ಹೆಚ್ಚಿನ ಮಹಿಳೆಯರು ಕಾಯಿಫಲ ಉಡಿ ತುಂಬಿಸಿಕೊಂಡರು.ಮಹಾದೇವಿ ದೊಡಮನಿ, ಶಾಂತವ್ವ ತೆಳಗಿನಮನಿ, ಮುತ್ತಕ್ಕ ಕುಂಬಾರ, ಕಸ್ತೂರಿ ಭಾವಿ, ಸುಜ್ಞಾನಿ ತೆಳಗಿನಮನಿ, ಸರೋಜನಿ ಹಿರೇಮಠ, ಕಮಲಕ್ಕ ವಾಲಿ, ಯಲ್ಲವ್ವ ಬಜಂತ್ರಿ, ಶ್ರೀದೇವಿ ತೆಳಗಿನಮನಿ ಮುಂತಾದವರು ಜೋಗುಳ ಪದಗಳನ್ನು ಹಾಡಿದರು. ಕೊನೆಯಲ್ಲಿ ಮಹಾಪ್ರಸಾದ ವಿತರಣೆ ಜರುಗಿತು. ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ, ಮಹಾರಾಷ್ಟçದ ಅಪಾರ ಭಕ್ತ ಜನ ಹಾಜರಿದ್ದರು.