ಹೊಸ ಮನ್ವಂತರಕ್ಕೆ ಬಸವಣ್ಣನವರು ಕಾರಣ

KannadaprabhaNewsNetwork | Published : Mar 24, 2025 12:37 AM

ಸಾರಾಂಶ

ಜಗತ್ತನ್ನು ನಡೆಸುತ್ತಿರುವ ಮಹಾಶಕ್ತಿಯಾದ ಭಗವಂತನ ದರ್ಶನಕ್ಕೆ ಶರಣ ಸಿದ್ಧಾಂತ ಸುಲಭ ಮಾರ್ಗ.

ಕನ್ನಡಪ್ರಭ ವಾರ್ತೆ ಮೈಸೂರುಧಾರ್ಮಿಕ ಇತಿಹಾಸದಲ್ಲಿಯೇ ಹೊಸ ಮನ್ವಂತರಕ್ಕೆ ಕಾರಣರಾದವರು ಬಸವಣ್ಣನವರು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯ ಶ್ರೀ ಬಸವನಗುಡಿಯ ಸಂಪ್ರೋಕ್ಷಣ, ನೂತನ ಗೋಪುರದ ಕಳಸಾರೋಹಣದ ಧಾರ್ಮಿಕ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ತಮ್ಮ ಮನೆಯಲ್ಲಿ ಇದ್ದ ಕರ್ಮಠತನ ಮತ್ತು ಅಸಮಾನತೆ ವಿರುದ್ಧ ಧ್ವನಿ ಎತ್ತಿ ಮನೆಯಿಂದ ಹೊರನಡೆದು ಕ್ರಾಂತಿಕಾರಕ ಬದಲಾವಣೆ ತಂದರು. ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ ಅಲ್ಲಮಪ್ರಭುಗಳನ್ನು ಅಧ್ಯಕ್ಷರನ್ನಾಗಿ ಮಾಡಿ ಎಲ್ಲರಿಗೂ ಅವಕಾಶ ನೀಡಿದುದರ ಫಲವಾಗಿ ಅವರು ಜಗಜ್ಯೋತಿ ಆಗಿದ್ದಾಗಿ ಅವರು ಹೇಳಿದರು.ತುಮಕೂರು ಶ್ರೀ ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಜಗತ್ತನ್ನು ನಡೆಸುತ್ತಿರುವ ಮಹಾಶಕ್ತಿಯಾದ ಭಗವಂತನ ದರ್ಶನಕ್ಕೆ ಶರಣ ಸಿದ್ಧಾಂತ ಸುಲಭ ಮಾರ್ಗ. ಹಣ ಸಂಪಾದನೆ ಮುಖ್ಯವಾಗದೆ ಗುಣ ಸಂಪಾದನೆ ಮುಖ್ಯವಾಗಬೇಕು. ಧಾರ್ಮಿಕ ಸಭೆಗಳು ಆಧ್ಯಾತ್ಮಿಕ ಜ್ಞಾನವನ್ನು ಉಂಟು ಮಾಡಿ ನಮ್ಮಲ್ಲಿರುವ ದುರ್ಗುಣಗಳನ್ನು ಕಳೆದು ಸುಜ್ಞಾನವನ್ನು ಉಂಟುಮಾಡಿ ನಮ್ಮ ಜೀವನವನ್ನು ಪಾವನ ಮಾಡುತ್ತವೆ ಎಂದರು.ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಉಪನ್ಯಾಸ ನೀಡಿ, ಮನದ ಮೈಲಿಗೆಯನ್ನು ತೊಳೆದುಕೊಳ್ಳಲು ಶರಣರ ವಚನಗಳು ಸಹಕಾರಿ. ಜೀವಿತದ ಅವಧಿಯಲ್ಲಿಯೇ ನಾವು ಕಳೆಯುವ ಸಂತಸದ ಕ್ಷಣಗಳೇ ಸ್ವರ್ಗ, ದುಃಖದ ಸಂದರ್ಭಗಳೇ ನರಕ. ಲೇಸೆನಿಸಿಕೊಂಡು ಎಷ್ಟು ವರ್ಷ ಬದುಕುತ್ತೇವೆಯೋ ಅದೇ ಮನುಷ್ಯನ ನಿಜವಾದ ವಯಸ್ಸು ಎಂಬುದನ್ನು ಅನೇಕ ದೃಷ್ಟಾಂತಗಳ ಮೂಲಕ ಮನದಟ್ಟು ಮಾಡಿಸಿದರು. ಜಗತ್ತು ಎಂಬುದು ದೇವನ ಜಾತ್ರೆಯಾಗಿದ್ದು, ದೇವರು ನಮಗೆ ಇಲ್ಲಿ ಆಮಂತ್ರಣ ನೀಡಿದ್ದು, ನಾವು ಅತಿಥಿಯಾಗಿ ಬಂದು ಅತಿಥಿಯಾಗಿ ಹೋದಾಗ ಮಾತ್ರ ನಮ್ಮ ಜೀವಕ್ಕೆ ಬೆಲೆ ಬರುತ್ತದೆ ಎಂದರು.ಯಾರ ಹೃದಯದಲ್ಲಿ ಪ್ರೇಮ ತುಂಬಿದೆಯೋ, ಯಾರ ಸನಿಹ ಬಂದಾಗ ಪ್ರೇಮದ ತರಂಗಗಳು ಏಳುತ್ತವೆಯೋ ಅವರೇ ಸದ್ಗುರು. ಅಂತಹ ಸದ್ಗುರುಗಳ ದರ್ಶನವನ್ನು ಸಾವಿರಾರು ಮಂದಿಗೆ ಮಾಡಿಸಿದಂತಹ ಕಾಗಲವಾಡಿ ಗ್ರಾಮಸ್ಥರ ಆದರ್ಶ ಇತರ ಗ್ರಾಮಗಳಿಗೆ ಅನುಕರಣೀಯ ಎಂದರು.ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಕನಕಪುರ ದೇಗುಲ ಮಠದ ಶ್ರೀ ಇಮ್ಮಡಿ ನಿರ್ವಾಣ ಸ್ವಾಮೀಜಿ, ಕಾರಾಪುರ ಮಠದ ಶ್ರೀ ಬಸವರಾಜಸ್ವಾಮೀಜಿ, ಹರವೆ ಮಠದ ಶ್ರೀ ಸರ್ಪಭೂಷಣಸ್ವಾಮೀಜಿ, ಮುಡಕನಪುರ ಮಠದ ಶ್ರೀ ಷಡಕ್ಷರಿ ದೇಶಿಕೇಂದ್ರಸ್ವಾಮೀಜಿ, ಮುಡಿಗುಂಡ ಮಠದ ಶ್ರೀ ಶ್ರೀಕಂಠಸ್ವಾಮೀಜಿ, ಚಾಮರಾಜನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ಹಂಡ್ರಕಳ್ಳಿ ಮಠದ ಶ್ರೀ ಪಂಚಾಕ್ಷರಿಸ್ವಾಮೀಜಿ, ಆಲಹಳ್ಳಿ ಮಠದ ಶ್ರೀ ಇಮ್ಮಡಿ ಬಸಪ್ಪ ಸ್ವಾಮೀಜಿ, ಅರಕಲವಾಡಿ ಮಠದ ಶ್ರೀ ಬಸವಣ್ಣಸ್ವಾಮೀಜಿ, ಕೆಸ್ತೂರು ಮಠದ ತೋಂಟದಾರ್ಯ ಸ್ವಾಮೀಜಿ, ಕಿರಾಳು ಮಠದ ಶ್ರೀ ಚನ್ನಬಸವಸ್ವಾಮೀಜಿ, ನಾಗವಳ್ಳಿ ಮಠದ ಶ್ರೀ ಬಸವರಾಜ ಸ್ವಾಮೀಜಿ, ಕಾಗಲವಾಡಿಯ ಶ್ರೀ ವೀರಭದ್ರ ಸ್ವಾಮೀಜಿ ಇದ್ದರು.ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ನಿರೂಪಿಸಿದರು. ಕೆ.ವಿ ಶಿವಸ್ವಾಮಿ ಸ್ವಾಗತಿಸಿದರು. ಮೀನಾ ಮಹದೇವಪ್ಪ ಪ್ರಾರ್ಥಿಸಿದರು. ಕೆ.ಬಿ. ಸ್ವಾಮಿ ವಂದಿಸಿದರು.

Share this article