ಕನ್ನಡಪ್ರಭ ವಾರ್ತೆ ವಿಜಯಪುರ
ಸಮಾಜದಲ್ಲಿ ಶ್ರೀ ಭಗವದ್ಗೀತಾ ಜಾಗೃತಿ ಮೂಡಿಸುವ ಸಲುವಾಗಿ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿಯಿಂದ ನಗರದ ಪಿಡಿಜೆ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿರುವ ವಿಜಯಪುರ ಜಿಲ್ಲಾ ಶ್ರೀ ಭಗವದ್ಗೀತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಭಗವದ್ಗೀತಾ ಅಭಿಯಾನವೂ ಮುಖ್ಯವಾಗಿ ನಾಲ್ಕು ವಿಚಾರಗಳ ಜ್ಞಾನಕ್ಕಾಗಿ ನಡೆಯುತ್ತಿದೆ. ಮೊದಲನೇಯದಾಗಿ ವ್ಯಕ್ತಿತ್ವ ವಿಕಸನಕ್ಕಾಗಿ ಅಭಿಯಾನ ನಡೆಸಲಾಗುತ್ತಿದೆ. ಮನುಷ್ಯನ ವಕ್ತಿತ್ವ ಸಂಪೂರ್ಣವಾಗಿ ಹಾಳಾಗಿದೆ. ಮಧುಮೇಹ, ರಕ್ತದ ಒತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಗೆ ಮಾನಸಿಕ ಒತ್ತಡ ಕಾರಣವಾಗಿದೆ ಎಂದರು.ಮಾನಸಿಕ ಒತ್ತಡಕ್ಕೆ ಮನುಷ್ಯ ಸಿಲುಕಿರುವುದು ಕಂಡುಬರುತ್ತದೆ. ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಪರೀಕ್ಷೆಗಳ ನಂತರ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂದು ಆತ್ಮಹತ್ಯೆಗಳು ಜರುಗುತ್ತಿವೆ. ಇದು ಮನುಷ್ಯನ ಮಾನಸಿಕ ಸ್ಥಿತಿ ಹದಗೆಟ್ಟಿರುವುದಕ್ಕೆ ಉದಾಹರಣೆ. ದೇಶದಲ್ಲೇ ಅತಿಹೆಚ್ಚು ಆತ್ಮಹತ್ಯೆಗಳು ಬೆಂಗಳೂರಿನಲ್ಲಿ ಆಗುತ್ತಿವೆ. ಇಂತಹ ಸಮಯದಲ್ಲಿ ಶ್ರೀ ಭಗವದ್ಗೀತೆ ಓದಿದರೆ ಮಾನಸಿಕ ಸ್ಥಿತಿ ಸಹಜ ಸ್ಥಿತಿಗೆ ಬರಲಿದೆ ಎಂದು ಹೇಳಿದರು.
ಎರಡನೇಯದ್ದು ನೈತಿಕತೆ ಪುನರುತ್ಥಾನಕ್ಕಾಗಿ ನಡೆಸಲಾಗುತ್ತಿದೆ. ನೈತಿಕತೆ ಅಧೋಗತಿಗೆ ತಲುಪಿದೆ. ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಹತ್ತು ವರ್ಷದ ಹಿಂದಿನ ಅಂಕಿಸಂಖ್ಯೆಯನ್ನು ನೋಡಿದರೆ ವರ್ಷಕ್ಕೆ ಒಂದು ಲಕ್ಷ ಮಹಿಳೆಯರು ಕಾಣೆಯಾಗುತ್ತಿದ್ದಾರೆ. ಮನುಷ್ಯ ಅಪರಾಧ ಪ್ರಕರಣಗಳಲ್ಲಿ ತೊಡಗದಂತೆ ಮಾಡಬೇಕಿದೆ. ಅದಕ್ಕೆ ಭಗವದ್ಗೀತೆ ಸಹಾಯವಾಗಲಿದೆ ಎಂದರು.ಮೂರನೇಯದು ಸಾಮಾಜಿಕ ಸಾಮರಸ್ಯಕ್ಕಾಗಿ ಅಭಿಯಾನ ನಡೆಸುತ್ತಿದ್ದು, ಭಗವದ್ಗೀತೆಯಲ್ಲಿ ಎಲ್ಲ ಮತ ಸಿದ್ಧಾಂತಗಳಿಗೆ ಅವಕಾಶ ಇದೆ. ಭಗವದ್ಗೀತೆ ಓದಿದರೆ ಎಲ್ಲರೂ ಸಮಾನರಾಗುತ್ತಾರೆ. ನಾಲ್ಕನೇಯದಾಗಿ ರಾಷ್ಟ್ರೀಯ ಭಾವೈಕ್ಯತೆಗಾಗಿ, ದೇಶದಲ್ಲಿ ಆತಂಕವಾದ ಹೆಚ್ಚಾಗಿದೆ. ಶಿಕ್ಷಣ ಪಡೆದವರು ಆತಂಕವಾದಿಗಳಾಗುತ್ತಿದ್ದಾರೆ. ಎಲ್ಲರೂ ಸುಶಿಕ್ಷಿತರಿದ್ದಾರೆ. ನಾವು ಪಡೆಯುವ ಶಿಕ್ಷಣದಲ್ಲಿ ಸಂಸ್ಕೃತಿ, ಆಧ್ಯಾತ್ಮಿಕತೆಯ ಕೊರತೆಯಿಂದಾಗಿ ಭಗವದ್ಗೀತೆ ಮೂಲಕ ಅದನ್ನು ತರಬೇಕಿದೆ ಎಂದು ತಿಳಿಸಿದರು.
ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿ, ಭಗವದ್ಗೀತೆಯ ಮಹತ್ವ ಅರಿಯುವುದು ಮುಖ್ಯವಾಗಿದೆ. ಜಾಗೃತಿ ಮೂಡಿಸಲು ಪೂಜ್ಯರು 14 ವರ್ಷಗಳಿಂದ ಈ ಅಭಿಯಾನ ಮಾಡುತ್ತಿದ್ದಾರೆ. ಭಗವದ್ಗೀತೆ 5 ಸಾವಿರ ವರ್ಷಗಳ ಹಿಂದಿನ ಭಾರತದ ಪವಿತ್ರ ಗ್ರಂಥ. ಮನುಷ್ಯ ತೊಂದರೆಗೊಳಗಾದಾಗ, ಜಿಗುಪ್ಸೆಗೆ ಒಳಗಾದಾಗ ಸಂಜೀವಿನಿ ಕಡ್ಡಿಯಂತೆ ಬರುವುದು ಈ ಭಗವದ್ಗೀತೆ ಎಂದು ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಶ್ರೀಗಳು ತಮ್ಮ ಮಠಕ್ಕೆ ಸೀಮಿತವಾಗದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಂದೇಶ ಸಾರುವ ಕೆಲಸ ಮಾಡುತ್ತಿದ್ದಾರೆ. ಭಗವದ್ಗೀತೆ ಅಭಿಯಾನ ನಮ್ಮೆಲ್ಲರ ಮಾನಸಿಕ ಸಮಸ್ಯೆಗೆ ಉತ್ತರ ಕೊಡುವ ಕೆಲಸ ಮಾಡುತ್ತಿದ್ದಾರೆ. ಅರ್ಜುನನಂಥಹ ಮಹಾ ಸಾರಥಿಗೆ ಗೊಂದಲ ಉಂಟಾದಾಗ ಮಾರ್ಗದರ್ಶನ ಕೊಟ್ಟಿದ್ದು ಭಗವದ್ಗೀತೆಯ ಶ್ಲೋಕಗಳು. ಪ್ರಪಂಚದಾದ್ಯಂತ ಮಾನಸಿಕ ರೋಗಿಗಳಿಗೆ ಈ ಶ್ಲೋಕ ಹೇಳುವ ಮೂಲಕ ಗುಣಪಡಿಸುವ ಕೆಲಸ ನಡೆಯುತ್ತಿದೆ. ಮಕ್ಕಳೆಲ್ಲ ಭಗವದ್ಗೀತೆಯ ಶ್ಲೋಕಗಳನ್ನು ಕಂಠಪಾಠ ಮಾಡಬೇಕು. ಮುಂದೆ ನಿಮಗೆ ಇದರ ಮಹತ್ವ ತಿಳಿಯುತ್ತದೆ. ಶ್ರೀಗಳ ಸಾಮಾಜಿಕ, ಧಾರ್ಮಿಕ, ಮಕ್ಕಳ ಮೇಲಿನ ಕಾಳಜಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.
------------
ದೇಶಾದ್ಯಂತ ಇಂದು ವಕ್ಫ್ ಮಾಡುತ್ತಿರುವ ಅನ್ಯಾಯದ ಬಗ್ಗೆ ರೈತರು ತಿರುಗಿ ಬಿದ್ದಿದ್ದಾರೆ. ನಿಮ್ಮ ವಕ್ಫ್ ವಿರುದ್ಧ ಹೋರಾಟಕ್ಕೆ ನಮ್ಮದೂ ನೈತಿಕ ಬೆಂಬಲ ಇದೆ. ಇದು ದುರಂತ. ವಕ್ಫ್ ಹೆಸರಿನಲ್ಲಿ ರೈತರಿಗೆ ಅನ್ಯಾಯ ಆಗಬಾರದು. ವಕ್ಫ್ ಘಟನೆಯಿಂದ ಅನೇಕರಿಗೆ ಅನ್ಯಾಯವಾಗಿದೆ, ಹೀಗಾಗಬಾರದಿತ್ತು.