ಶ್ರೀ ದೇವಿಯ ತವರು ಮನೆಯಲ್ಲಿ ಹೋಮ ಹವನ ।ಕುಂಬಾರರ ಮನೆಯಿಂದ ಬಾಸಿಂಗ ತಂದು ಅಲಂಕಾರ
ಕನ್ನಡಪ್ರಭ ವಾರ್ತೆ, ತರೀಕೆರೆಮಲೆನಾಡಿನ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದ ಲಕ್ಕವಳ್ಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಕೋಟೆ ಮಾರಿಕಾಂಬಾ ದೇವಿ ಜಾತ್ರೋತ್ಸವದಲ್ಲಿ ವಿಶೇಷವಾಗಿ ಕಳೆದ ಒಂದು ತಿಂಗಳಿನಿಂದ ಗ್ರಾಮದ ವಿವಿಧ ಸಮುದಾಯದ ಜನರು ತಮ್ಮ ಇಷ್ಟ ಕುಲದೇವತೆಗಳ ವಿಶೇಷ ಪೂಜೆ ನೆರವೇರಿಸಿದರು. ಪ್ರಸ್ತುತ ಜಾತ್ರೆ ಉತ್ಸವದಲ್ಲಿ ಶ್ರೀ ಕೋಟೆ ಮಾರಿಕಾಂಬಾ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಮೇ 14 ರಂದು ಧಾರ್ಮಿಕ ಪುರಾಣದಲ್ಲಿ ತಿಳಿಸಿದಂತೆ ಶ್ರೀ ದೇವಿಯ ತವರು ಮನೆಯಲ್ಲಿ ದಿನವಿಡೀ ಬೆಳಿಗ್ಗೆ ಹೋಮ ಹವನ ನಡೆದು, ಶಾಸ್ತ್ರೋಕ್ತವಾಗಿ ಕುಂಬಾರ ಸಮುದಾಯದವರಿಂದ ಮನೆ ಸಾಮಾಗ್ರಿ ಹಾಗೂ ಶ್ರೀ ದೇವಿಗೆ ಬಾಸಿಂಗ ತಂದು ಅಲಂಕರಿಸಲಾಗಿತ್ತು. ಶ್ರೀ ದೇವಿಗೆ ನಿಜರೂಪ ತಾಳಲು ಗದ್ದುಗೆ ಹತ್ತಿರವಿರುವ ಭದ್ರಾ ನದಿಯ ಪುಣ್ಯ ಕ್ಷೇತ್ರದಲ್ಲಿ ಗಂಗಾ ಪೂಜೆ ನೇರವೇರಿಸಿ, ಗಂಗೆಯನ್ನು ಕಳಸೋತ್ಸವ ಮೆರವಣಿಗೆ ಮೂಲಕ ತಂದು ಪೂಜೆ ಮಾಡಿ, ಸಂಜೆ ಶ್ರೀ ದೇವಿಗೆ ದೃಷ್ಟಿ ತೆಗೆಯಲು ವಿಶೇಷ ವಾಗಿ "ದುಷ್ಠಿಬೊಟ್ಟು "ಕಾರ್ಯಕ್ರಮ ನೆರವೇರಿತು.ಸಂಜೆ ವಿಶೇಷ ಮುಹೂರ್ತ 6.05 ಗಂಟೆಗೆ ನಿಗದಿತ ಅವಧಿಯಲ್ಲಿ ನಡೆದ ಧಾರ್ಮಿಕ ಸೇವೆ ಮೂಲಕ ಶ್ರೀ ದೇವಿ ಹಣೆಗೆ ನೇರವಾಗಿ ನೋಡದೇ ಕನ್ನಡಿಯಲ್ಲಿ ಬಿಂಬ ನೋಡಿ ತಿಲಕವಿಟ್ಟ ಕ್ಷಣದಲ್ಲೇ ಗದ್ದುಗೆಯ ಮುಂಬಾಗ ಅಂದಾಜು 50 ಮೀಟರ್ ಅಂತರದಲ್ಲಿ ಪ್ರತಿಷ್ಠಾಪಿಸಿರುವ ದೃಷ್ಟಿ ಕಲ್ಲುಸ್ಥಳದಲ್ಲಿ ಇಟ್ಟಿರುವ ಒಣಗಿದ ಹುಲ್ಲಿನ ರಾಶಿಗೆ ಶ್ರೀ ದೇವಿಯ ಕಣ್ಣಿನ ದೃಷ್ಟಿ ತಾಗಿ ಬೆಂಕಿ ಹತ್ತಿ ಉರಿಯಲಾರಂಭಿಸುತ್ತದೆ. ನಂತರ ಭಕ್ತರು ಶ್ರೀ ದೇವಿಗೆ ಹರಕೆಗಳನ್ನು ಒಪ್ಪಿಸಿದರು.ಶ್ರೀ ದೇವಿಯ ಕಳಸವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗದ್ದುಗೆಗೆ ಹಿಂದಿರುಗಿ ನಂತರ ಶ್ರೀ ದೇವಿಯ ಮೂರ್ತಿ ಯನ್ನು ಗ್ರಾಮದ ಹವಾಲ್ದಾರ್ ತಿಮ್ಮಾಭೋವಿಯವರ ಕುಟುಂಬದವರಿಂದ ಶ್ರೀ ದೇವಿಯ ಪೂಜೆ ಸಲ್ಲಿಸಿ ಮೂರ್ತಿಯನ್ನು ಎತ್ತಿಕೊಟ್ಟರು. ಮೆರವಣಿಗೆ ಉತ್ಸವದ ಮೂಲಕ ಜಾತ್ರೆ ಸ್ಥಳದಲ್ಲಿ ಶ್ರೀ ದೇವಿಯನ್ನು ಪ್ರತಿಷ್ಠಾಪಿಸ ಲಾಯಿತು. ಇಂಥ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ಶ್ರೀ ದೇವಿ ದರ್ಶನ ಪಡೆದರು.
ಶಾಸಕ ಜಿ.ಎಚ್.ಶ್ರೀನಿವಾಸ್ ತಮ್ಮ ಕುಟುಂಬದ ಜೊತೆಗೆ ಭಾಗವಹಿಸಿ ಶ್ರೀ ದೇವಿ ದರ್ಶನ ಪಡೆದರು. ತರೀಕೆರೆ ತಹಸೀಲ್ದಾರ್ ಮತ್ತು ಸಿಬ್ಬಂದಿ ವರ್ಗ, ಗ್ರಾಮ ಪಂಚಾಯಿತಿ ಸದಸ್ಯರು, ಜಾತ್ರೆ ಉತ್ಸವ ಸಮಿತಿ ಪದಾಧಿಕಾರಿಗಳು, ಅಸಂಖ್ಯ ಭಕ್ತರು ಪಾಲ್ಗೊಂಡಿದ್ದರು ಎಂದು ಪತ್ರಿಕಾ ಹೇಳಿಕೆಯಲ್ಲಿ ಗ್ರಾಮದ ಧಾರ್ಮಿಕ ಮುಖಂಡ ಎಲ್.ಟಿ.ಹೇಮಣ್ಣ ತಿಳಿಸಿದ್ದಾರೆ.15ಕೆಟಿಆರ್.ಕೆ.1ಃ
ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ಶ್ರೀ ಕೋಟೆ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಏರ್ಪಡಿಸಲಾಗಿತ್ತು.