ಶ್ರೀರಾಮ ಮಂದಿರ ರಾಷ್ಟ್ರೀಯತೆಯ ಪ್ರತೀಕ

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ಶ್ರೀರಾಮ ಮಂದಿರ ನಿರ್ಮಾಣ ರಾಷ್ಟ್ರೀಯತೆಯ ಪ್ರತೀಕವಾಗಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಹಿಂದೂ ಧರ್ಮ ಅತ್ಯಂತ ಸನಾತನ ಧರ್ಮವಾಗಿದೆ. ಶ್ರೀರಾಮ ಮಂದಿರ ನಿರ್ಮಾಣ ರಾಷ್ಟ್ರೀಯತೆಯ ಪ್ರತೀಕವಾಗಿದೆ. ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠಾಪನೆಗೆ ಇಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

ಅವರು ಶನಿವಾರ ಬನಹಟ್ಟಿಯ ಹನುಮಾನ ದೇವಸ್ಥಾನದಲ್ಲಿ ಶ್ರೀರಾಮ ಮಂದಿರದ ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಜನರ ಸಹಕಾರ, ಕೊಡುಗೆಯಿಂದ ಕೋಟ್ಯಂತರ ರು. ಖರ್ಚು ಮಾಡಿ ಭವ್ಯವಾದ ಐತಿಹಾಸಿಕ ರಾಮ ಮಂದಿರ ನಿರ್ಮಾಣವಾಗಿದೆ. ಪಕ್ಷಾತೀತ ಹಾಗೂ ಜಾತ್ಯತೀತವಾಗಿ ನಾವೆಲ್ಲರೂ ಒಂದಾಗಿ ರಾಷ್ಟ್ರೀಯತೆಯ ಪ್ರತೀಕವಾಗಿರುವ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ಜ. ೨೨ ರಂದು ನಡೆಯಲಿದೆ. ಅದಕ್ಕೆ ಮುಂಚಿತವಾಗಿ ಜಾಗೃತಿ ಮೂಡಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಮಂತ್ರಾಕ್ಷತೆಯನ್ನು ಮನೆ ಮನೆಗೆ ನೀಡುವ ಕಾರ್ಯ ಕ್ಷೇತ್ರದಲ್ಲಿ ಪ್ರಾರಂಭವಾಗುತ್ತಿದೆ. ರಾಮ ಮಂದಿರದ ಪ್ರತಿಷ್ಠಾಪನೆಯ ಸಂದೇಶವನ್ನು ದೇಶದ ಪ್ರತಿಯೊಂದು ಮನೆಗೂ ತಲುಪಿಸುವುದು, ಆಹ್ವಾನ ನೀಡುವುದು ಉದ್ದೇಶವಾಗಿದೆ. ಭಾರತ ಬಲಿಷ್ಠವಾಗಿ ಹೋಗಲು, ನಾವೆಲ್ಲ ಒಂದಾಗಲೂ ನಮ್ಮ ಸನಾತನ ಧರ್ಮವನ್ನು ಉಳಿಸಿ ಬೆಳೆಸಬೇಕು. ಸ್ವಇಚ್ಛೆಯಿಂದ ಸಂಘಟಿತರಾಗಿ ಕೆಲಸಮಾಡೋಣ. ಜ. ೨೨ ರಂದು ನಡೆಯುವ ಕಾರ್ಯಕ್ರಮದಂದು ಕ್ಷೇತ್ರಾದ್ಯಂತ ಮನೆಮನೆಗಳಲ್ಲಿ ಕನಿಷ್ಠ ೫ ದೀಪಗಳನ್ನು ಹಚ್ಚುವುದರ ಮೂಲಕ ಶ್ರೀ ರಾಮ ಮಂದಿರ ಉದ್ಘಾಟನೆಯನ್ನು ಸಂಭ್ರಮ ಸಡಗರದಿಂದ ಆಚರಿಸೋಣ ಎಂದರು.

ಈ ಸಂದರ್ಭದಲ್ಲಿ ನಗರದ ಗೌಡರಾದ ಸಿದ್ದನಗೌಡ ಪಾಟೀಲ, ರಾಜುಗೌಡ ಪಾಟೀಲ, ಸುರೇಶ ಚಿಂಡಕ, ಶಿವಾನಂದ ಗಾಯಕವಾಡ, ವೀರುಪಾಕ್ಷಯ್ಯ ಮಠದ, ವಿದ್ಯಾಧರ ಸವದಿ, ಶಿವಾನಂದ ಕಾಗಿ, ಅಶೋಕ ರಾವಳ, ಶ್ರೀಶೈಲ ಬೀಳಗಿ, ಶ್ರೀನಿವಾಸ ಹಳ್ಯಾಳ, ಭೀಮಸಿ ಆದಗೊಂಡ, ಪ್ರಭಾಕರ ಮೊಳೇದ, ಈರಯ್ಯ ಪರಾಳಮಠ, ಶಾಂತವೀರ ಚನಪನ್ನವರ, ಶ್ರೀಶೈಲ ಮಠಪತಿ, ದುಂಡಪ್ಪ ಮಾಚಕನೂರ, ಪರಶುರಾಮ ರಾವಳ, ಚಿದಾನಂದ ಹೊರಟ್ಟಿ, ರೇವಪ್ಪ ಗುಣಕಿ, ಶ್ರೀಶೈಲ ಬಡಿಗೇರ, ಪ್ರವೀಣ ಧಬಾಡಿ, ಕಾಳಪ್ಪ ಬಡಿಗೇರ, ಈರಣ್ಣ ಚಿಂಚಖಂಡಿ, ಸದಾಶಿವ ಪರೀಟ, ಮಲ್ಲು ಸಾರವಾಡ, ಶಶಿಕಲಾ ಸಾರವಾಡ, ದುರ್ಗವ್ವ ಹರಿಜನ ಸೇರಿದಂತೆ ಅನೇಕರು ಇದ್ದರು.

---

ಕೋಟ್

ಶ್ರೀರಾಮಮಂದಿರ ನಿರ್ಮಾಣದಿಂದ ದೇಶದ ಅಸ್ಮಿತೆ ಹೆಚ್ಚಿಸಿದೆ. ನಮ್ಮತನ ಇಮ್ಮಡಿಗೊಳಿಸಿದೆ. ದೇಶದ ಜನ ಪರಸ್ಪರ ಸೌಹಾರ್ದತೆಯಿಂದ ಇರುವಂತಾಗಬೇಕು. ಹಿಂದು ಧರ್ಮದ ಹಿರಿಮೆ ಹೆಚ್ಚಬೇಕು. ಶ್ರೀರಾಮ ಮಂದಿರ ಉದ್ಘಾಟನೆಗೆ ಹೋಗಲು ಕೆಲವರಿಗೆ ಆಗುವುದಿಲ್ಲ. ಹೀಗಾಗಿ ಶ್ರೀರಾಮನ ಮಂತ್ರಾಕ್ಷತೆ ಸ್ವೀಕರಿಸಿ ಇಲ್ಲಿಂದಲ್ಲೇ ನಮಿಸಿ. ಎಲ್ಲರಿಗೂ ಶ್ರೀರಾಮ ಒಳಿತು ಮಾಡಲಿ.

-ಸಿದ್ದು ಸವದಿ, ಶಾಸಕ

--

ಏನಿದು ಶ್ರೀರಾಮ ಮಂತ್ರಾಕ್ಷತೆ?

ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ದೇಶಾದ್ಯಂತ 5 ಕೋಟಿ ಜನರಿಗೆ ಪವಿತ್ರ ಮಂತ್ರಾಕ್ಷತೆ ವಿತರಿಸಲು ರಾಮಜನ್ಮಭೂಮಿ ಟ್ರಸ್ಟ್‌ ಯೋಜನೆ ರೂಪಿಸಿದೆ. ಅಕ್ಕಿಗೆ ಅರಿಶಿಣ-ಕುಂಕುಮ ಹಾಗೂ ತುಪ್ಪದ ಮಿಶ್ರಣ ಲೇಪನ ಮಾಡಿದ ಅಕ್ಷತೆಯನ್ನು ಜನತೆಗೆ ವಿತರಿಸುವ ಕಾರ್ಯ. ಜ. 15ರೊಳಗೆ ಐದು ಕೋಟಿ ಜನರಿಗೆ ತಲುಪಿಸಲು ಯೋಜನೆ ಇದಾಗಿದೆ. ಇದರೊಟ್ಟಿಗೆ ಶ್ರೀರಾಮ ಮಂದಿರ, ಶ್ರೀರಾಮನ ಬಗ್ಗೆ ಮಾಹಿತಿ ನೀಡುವ ಉದ್ದೇಶವನ್ನು ಒಳಗೊಂಡಿದೆ.

Share this article