ಶ್ರೀರಾಮ ಸೇನೆ: ದತ್ತಮಾಲಾ ಅಭಿಯಾನಕ್ಕೆ ಚಾಲನೆ

KannadaprabhaNewsNetwork |  
Published : Oct 31, 2023, 01:16 AM IST
ಚಿಕ್ಕಮಗಳೂರಿನ ಶಂಕರಮಠದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಗಂಗಾಧರ್ ಕುಲಕರ್ಣಿ ನೇತೃತ್ವದಲ್ಲಿ ಸೋಮವಾರ ದತ್ತಮಾಲೆಯನ್ನು ಧರಿಸಿದರು.  | Kannada Prabha

ಸಾರಾಂಶ

ಶ್ರೀರಾಮ ಸೇನೆ: ದತ್ತಮಾಲಾ ಅಭಿಯಾನಕ್ಕೆ ಚಾಲನೆ

ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ನೇತೃತ್ವದಲ್ಲಿ ಮಾಲೆ ಧರಿಸಿದ ದತ್ತಭಕ್ತರು । ನ. 5 ರಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಶ್ರೀರಾಮ ಸೇನೆ ಈ ಬಾರಿ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ನಗರದ ಶಂಕರಮಠದಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ನೇತೃತ್ವದಲ್ಲಿ ಸಂಘಟನೆ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತರು ದತ್ತಮಾಲೆ ಧರಿಸಿದರು. ಬೆಳಿಗ್ಗೆ ಶಂಕರಮಠದಲ್ಲಿ ಭಜನೆ, ವಿಶೇಷ ಪೂಜೆ ನಂತರ ಮಾಲೆಯನ್ನು ಧರಿಸಲಾಗಿದ್ದು, ಇದೇ ದಿನದಂದು ರಾಜ್ಯದ ವಿವಿಧೆಡೆಯಲ್ಲಿ ಮಾಲಾಧಾರಣೆ ನಡೆದಿದೆ. ದತ್ತಮಾಲೆ ಧರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ದತ್ತಪೀಠ ಹಿಂದೂಗಳ ಪೀಠವಾಗಬೇಕು ಎನ್ನುವ ಉದ್ದೇಶದಿಂದ ಕಳೆದ 20 ವರ್ಷಗಳಿಂದ ಈ ಹೋರಾಟ ನಡೆಯುತ್ತಿದೆ. ಇದರಲ್ಲಿ ಯಶಸ್ಸು ಕಂಡಿದ್ದೇವೆ. ಅರ್ಚಕರ ನೇಮಕ ಆಗಿದೆ. ಇದು, ಕಾನೂನು ಬದ್ಧವಾಗಿ ಆಗಿದೆ. ರಾಜಕೀಯ ಹೋರಾಟದಿಂದಲೂ ಒಂದು ಹಂತಕ್ಕೆ ಬಂದು ನಿಂತಿದ್ದೇವೆ ಎಂದರು. ದತ್ತಪೀಠ ಸಂಪೂರ್ಣವಾಗಿ ಹಿಂದೂ ಪೀಠ. ಇಲ್ಲಿ ಯಾವುದೇ ಬಾಬಾ ಬುಡನ್ ಇಲ್ಲ, ಶಾಖಾದ್ರಿ ಕುಟುಂಬಕ್ಕೆ ದತ್ತಪೀಠದಲ್ಲಿ ಯಾವುದೇ ಕೆಲಸ ಇಲ್ಲ, ನೀವು ಸೀದಾ ನಾಗೇನಹಳ್ಳಿಗೆ ಹೊರಡಿ, ಅಲ್ಲಿ ದರ್ಗಾ ಇದೆ ಅಲ್ಲಿ ಏನಾದರೂ ಮಾಡಿ ಎಂದರು. ಶಾಖಾದ್ರಿ ಮನೆಯಲ್ಲಿ ಜಿಂಕೆ ಮತ್ತು ಚಿರತೆ ಚರ್ಮ ಪತ್ತೆಯಾಗಿದೆ. ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ದತ್ತಪೀಠದಲ್ಲಿ ಕುಳಿತು ಈ ರೀತಿಯ ಅವ್ಯವಹಾರ ಮಾಡ್ತಾ ಇದ್ದೀರಾ, ಹಣವನ್ನು ಲೂಟಿ ಮಾಡ್ತಾ ಇದ್ದೀರಾ, ಇಂತಹ ವ್ಯಕ್ತಿಯನ್ನು ಮೌಲ್ವಿಯಾಗಿ ಇರಲು ಹಿಂದೂಗಳು ಒಪ್ಪುವುದಿಲ್ಲ ಎಂದು ಹೇಳಿದರು. ಆ ಮೌಲ್ವಿಯನ್ನು ಹೊರಗೆ ಹಾಕಬೇಕು. ಇಲ್ಲದೆ ಹೋದರೆ, ಶ್ರೀರಾಮ ಸೇನೆ ಆ ಕೆಲಸ ಮಾಡುತ್ತೆ, ಅಕ್ರಮವಾಗಿ ಅವರು ಅಲ್ಲಿ ವಾಸ ಮಾಡುತ್ತಿದ್ದಾರೆ. ಅಲ್ಲಿಗೆ ಹೋಗುವವರನ್ನು ದಾರಿ ತಪ್ಪಿಸುತ್ತಿದ್ದಾರೆ. ಅವರು ಸಮಾಜಕ್ಕೆ ಕಂಟಕ, ಕೋಮು ದ್ವೇಷ ಬಿತ್ತುತ್ತಿದ್ದಾರೆ ಎಂದರು. ದತ್ತಪೀಠ ಮುಜರಾಯಿ ಇಲಾಖೆಗೆ ಸೇರಿದ್ದರಿಂದ ಇದಕ್ಕೆ ಸೇರಿರುವ ಜಮೀನಿಗೆ ಸಾವಿರಾರು ರು. ದತ್ತಿ ತಸ್ತಿಕ್‌ ಹಣ ಬರುತ್ತಿದೆ. ಅದ್ದರಿಂದ ದತ್ತಪೀಠಕ್ಕೆ ಬರುವ ಭಕ್ತರಿಗೆ ನಿತ್ಯ ಅನ್ನದಾನದ ವ್ಯವಸ್ಥೆ ಮಾಡಬೇಕು ಎಂದ ಅವರು, ಇಲ್ಲಿರುವ ಗೋರಿಗಳನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು. ಹಿಂದೂಗಳ ಸಂಸ್ಕೃತಿ ಪ್ರಕಾರ ದತ್ತಪೀಠಕ್ಕೆ ಬರುವವರು ಡ್ರಸ್ ಕೋಡ್ ಅನುಸರಿಸಬೇಕು. ಮಹಿಳೆಯರು ಮತ್ತು ಪುರುಷರು ಹಿಂದೂ ಸಂಪ್ರದಾಯದ ಉಡುಪುಗಳನ್ನು ಧರಿಸಬೇಕು ಎಂದು ಹೇಳಿದರು. ವಿಭಾಗೀಯ ಅಧ್ಯಕ್ಷ ರಂಜಿತ್ ಶೆಟ್ಟಿ ಮಾತನಾಡಿ, ಇಂದು ರಾಜ್ಯದ 30 ಜಿಲ್ಲೆಗಳಲ್ಲಿ ಭಕ್ತರು ಮಾಲೆ ಧರಿಸಿದ್ದಾರೆ. ನ. 3 ರಂದು ರಾಜ್ಯಾದ್ಯಂತ ದತ್ತ ದೀಪೋತ್ಸವ ನಡೆಯಲಿದ್ದು, ಮರು ದಿನ ದತ್ತ ಮಾಲಾಧಾರಿಗಳು ಪಡಿ ಸಂಗ್ರಹ ಮಾಡಲಿದ್ದಾರೆ ಎಂದು ಹೇಳಿದರು. ನ.5 ರಂದು ಬೆಳಿಗ್ಗೆ 7 ಗಂಟೆಗೆ ಇಲ್ಲಿನ ಶಂಕರಮಠದಿಂದ ಶೋಭಾಯಾತ್ರೆ ಹೊರಡಲಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಬಳಿಕ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆಯಲಿದ್ದಾರೆ. ಇದೇ ಸ್ಥಳದಲ್ಲಿ ಧಾರ್ಮಿಕ ಸಭೆ ಏರ್ಪಡಿಸಲಾಗಿದೆ ಎಂದರು. ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಅಡ್ಡಿಯಾರ್, ಸಂಜೀತ್ ಸುವರ್ಣ, ಜ್ಞಾನೇಂದ್ರ ಜೈನ್ ಸೇರಿದಂತೆ ಹಲವು ಮಂದಿ ದತ್ತಮಾಲೆ ಧರಿಸಿದರು. ಈ ಸಂದರ್ಭದಲ್ಲಿ ದುರ್ಗಾ ಸೇನೆಯ ಜಿಲ್ಲಾಧ್ಯಕ್ಷೆ ನವೀನಾ ರಂಜಿತ್, ವೆಂಕಟೇಶ್ ಇದ್ದರು. 30 ಕೆಸಿಕೆಎಂ 1 ಚಿಕ್ಕಮಗಳೂರಿನ ಶಂಕರಮಠದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಗಂಗಾಧರ್ ಕುಲಕರ್ಣಿ ನೇತೃತ್ವದಲ್ಲಿ ಸೋಮವಾರ ದತ್ತಮಾಲೆಯನ್ನು ಧರಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ