ನಾಳೆಯಿಂದ ಶ್ರೀರಾಮ ತಾರಕ ಮಂತ್ರ ಸಪ್ತಾಹ

KannadaprabhaNewsNetwork | Published : Apr 9, 2024 12:45 AM

ಸಾರಾಂಶ

ಏ. ೧೦ರಂದು ಬೆಳಗ್ಗೆ ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ಧಿ ಧ್ವಜಪೂಜೆ, ತೋರಣ ಮುಹೂರ್ತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ರಾತ್ರಿ ಬಲು ಉತ್ಸವ, ಮಹಾಪೂಜೆ ನಡೆಯಲಿದೆ.

ಹೊನ್ನಾವರ: ಧರ್ಮಸ್ಥಳ ನಿತ್ಯಾನಂದನಗರದ ಶ್ರೀರಾಮ ಕ್ಷೇತ್ರದಲ್ಲಿ ೬೪ನೇ ವರ್ಷದ ಶ್ರೀರಾಮ ತಾರಕ ಮಂತ್ರ ಸಪ್ತಾಹ ಸಮಾರಂಭ ಹಾಗೂ ಮಹಾ ಬ್ರಹ್ಮರಥೋತ್ಸವವು ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಏ. ೧೦ರಿಂದ ೧೭ರ ವರೆಗೆ ನಡೆಯಲಿದೆ ಎಂದು ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಸಂಚಾಲಕ ವಾಮನ ನಾಯ್ಕ ಮಂಕಿ ತಿಳಿಸಿದರು.

ಪಟ್ಟಣದ ನಾಮಧಾರಿ ಕಾರ್ಯಲಯದಲ್ಲಿ ಸೋಮವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಏ. ೧೦ರಂದು ಬೆಳಗ್ಗೆ ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ಧಿ ಧ್ವಜಪೂಜೆ, ತೋರಣ ಮುಹೂರ್ತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ರಾತ್ರಿ ಬಲು ಉತ್ಸವ, ಮಹಾಪೂಜೆ ನಡೆಯಲಿದೆ. ಏ. ೧೧ರಂದು ಗುರುಪೂಜೆ, ಅನ್ನಪೂಣೇಶ್ವರಿ ಅಲಂಕಾರ, ಗುರುದೇವರ ಉತ್ಸವ ಪೂಜೆ ನಡೆಯಲಿದೆ. ಏ. ೧೨ರಂದು ನವಗ್ರಹ ಶಾಂತಿ ಹೋಮ, ರಾತ್ರಿ ಶ್ರೀರಾಮ ದೇವರ ರಜತ ಪಲ್ಲಕ್ಕಿ ಉತ್ಸವ ನಡೆಯಲಿದೆ. ಏ. ೧೩ರಂದು ಮಹಾಮೃತ್ಯುಂಜಯ ಹೋಮ, ಸಂಜೆ ಅನ್ನಪೂರ್ಣೇಶ್ವರಿ ದೇವಿಯ ಬಲಿ ಉತ್ಸವ ಮತ್ತು ಪುಷ್ಪ ರಥೋತ್ಸವ ನಡೆಯಲಿದೆ.

ಏ. ೧೪ರಂದು ನವದುರ್ಗಾ ಹೋಮ ಸಂಜೆ ದುರ್ಗಾಪರಮೇಶ್ವರಿ ದೇವಿಯ ಮೂರ್ತಿ ಬಲಿ ಉತ್ಸವ, ಚಂದ್ರಮಂಡಲ ರಥೋತ್ಸವ ನಡೆಯಲಿದೆ. ಏ. ೧೫ರಂದು ಸಹಸ್ರನಾಮ ಯಾಗ, ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ, ಸಂಜೆ ಬಲಿ ಉತ್ಸವ ಮತ್ತು ಬೆಳ್ಳಿ ರಥೋತ್ಸವ ನಡೆಯಲಿದೆ. ಏ. ೧೬ರಂದು ದತ್ತಯಾಗ, ಸಂಜೆ ಹನುಮಾನ ರಥೋತ್ಸವ, ಕಟ್ಟೆಪೂಜೆ, ಕೆರೆ ದೀಪೋತ್ಸವ ನಡೆಯಲಿದೆ.

ಏ. ೧೭ರಂದು ಬೆಳಗ್ಗೆ ವಿಷ್ಣು ಸಹಸ್ರನಾಮ ಹೋಮ, ಶ್ರೀರಾಮ ತಾರಕ ಮಂತ್ರ ಯಜ್ಞ ಮಂಗಳ, ಮಹಾ ಸಂಕಲ್ಪ, ಪೂರ್ಣಾಹುತಿ, ಸಂಜೆ ಭೂತಬಲಿ, ದೇವರ ಪಾಲಕಿ ಬಲಿ ಉತ್ಸವ, ಮಹಾ ಬ್ರಹ್ಮರಥೋತ್ಸವ ಹಾಗೂ ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಶ್ರೀರಾಮ ತಾರಕ ಮಂತ್ರ ಸಪ್ತಾಹದಲ್ಲಿ ಜಿಲ್ಲೆಯ ವಿವಿಧ ಭಾಗದ ಭಜನಾ ಮಂಡಳಿಗಳು ಪಾಲ್ಗೊಳ್ಳಲಿವೆ ಎಂದರು.

ಸಮಿತಿಯ ಕಾರ್ಯದರ್ಶಿ ಟಿ.ಟಿ. ನಾಯ್ಕ, ಸದಸ್ಯರಾದ ಶೇಖರ ನಾಯ್ಕ, ತುಕಾರಾಮ ನಾಯ್ಕ, ಸೀತಾರಾಮ ನಾಯ್ಕ, ಸತೀಶ ನಾಯ್ಕ, ಮಾರುತಿ ನಾಯ್ಕ, ಗಜಾನನ ನಾಯ್ಕ, ಜಗದೀಶ ನಾಯ್ಕ ಇದ್ದರು.

Share this article