ಬಳ್ಳಾರಿ: ಬಳ್ಳಾರಿಯ ಶ್ರೀ ರಾಮಕೃಷ್ಣ ಆಶ್ರಮ ಉತ್ತರ ಕರ್ನಾಟಕದ ಬೇಲೂರು ಮಠವಾಗಬೇಕು. ಪಶ್ಚಿಮಬಂಗಾಳದ ಬೇಲೂರು ಮಠದಲ್ಲಿ ಜರುಗುವ ಆಧ್ಯಾತ್ಮಿಕ ಹಾಗೂ ಸೇವಾ ಚಟುವಟಿಕೆ ಬಳ್ಳಾರಿಯ ಆಶ್ರಮದಲ್ಲೂ ನಿರಂತರವಾಗಿ ನಡೆಯುವಂತಾಗಬೇಕು ಎಂದು ಬೇಲೂರು ಮಠದ ಸಹ ಪ್ರಧಾನ ಕಾರ್ಯದರ್ಶಿ ಶ್ರೀ ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್ ಅವರು ತಿಳಿಸಿದರು.
ಬಳ್ಳಾರಿಯ ಶ್ರೀ ರಾಮಕೃಷ್ಣ ಆಶ್ರಮ ಬೇಲೂರು ಮಠಕ್ಕೆ ಹಸ್ತಾಂತರಗೊಂಡಿರುವುದು ಅತ್ಯಂತ ಸಂತಸ ತಂದಿದೆ. ಅಲ್ಲಂ ಕರಿಬಸಪ್ಪ, ಎಚ್. ಸೀತಾರಾಮ ರೆಡ್ಡಿಯವರು ಸೇರಿದಂತೆ ಈ ಊರಿನ ಅನೇಕರು ಆಶ್ರಮದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಆ ಎಲ್ಲ ಮಹನೀಯರ ಸೇವಾ ಕೈಂಕರ್ಯ ಸದಾ ಸ್ಮರಣೀಯ. ರಾಮಕೃಷ್ಣ ಮಿಷನ್ ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಸೇವಾ ಕೈಂಕರ್ಯದಲ್ಲೂ ತೊಡಗಿಸಿಕೊಳ್ಳುತ್ತದೆ. ಬಳ್ಳಾರಿಯ ಆಶ್ರಮದ ಮೂಲಕ ಸಹ ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ. ಈ ಭಾಗದ ಜನರ ಕಲ್ಯಾಣಕ್ಕಾಗಿ ಆಶ್ರಮ ಹೆಚ್ಚು ಸಕ್ರೀಯವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಆಶಿಸಿದರು.
ಭಾರತದ ಕಲ್ಯಾಣದಲ್ಲಿ ಜಗತ್ತಿನ ಕಲ್ಯಾಣವಿದೆ. ಭಾರತ ಉಳಿದರೆ ಜಗತ್ತು ಉಳಿಯುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಸಮಾಜದ ಕಲ್ಯಾಣವೇ ರಾಷ್ಟ್ರದ ಕಲ್ಯಾಣ. ಆತ್ಮದರ್ಶನ, ಆತ್ಮಜ್ಞಾನವೇ ನಮ್ಮೆಲ್ಲರ ಗುರಿಯಾಗಿದೆ. ಗೃಹಸ್ಥಾಶ್ರಮವಾಗಲೀ, ಸನ್ಯಾಸಾಶ್ರಮವಾಗಲೀ ನಾವೆಲ್ಲರೂ ಆತ್ಮಜ್ಞಾನಿಗಳಾಗಬೇಕು. ಯೋಗಿಗಳಾಗಬೇಕು ಎಂದರು.ಭಾರತದಲ್ಲಿ ಜನಿಸಿದ ಪ್ರತಿಯೊಬ್ಬರೂ ಅನಂತ ಶಕ್ತಿಯುಳ್ಳವರು. ತ್ಯಾಗ ಮತ್ತು ಸೇವೆಯ ಮೂಲಕ ನಮ್ಮೊಳಗಿನ ಅನಂತತೆಯನ್ನು ವೃದ್ಧಿಸಿಕೊಳ್ಳಬೇಕು. ನಾನು ಭಗವಂತನ ಮಗು. ಅತುಲ ಆತ್ಮವಿಶ್ವಾಸದ ಆಗರ. ಎಲ್ಲವನ್ನೂ ಧೈರ್ಯದಿಂದ ಎದುರಿಸಬಲ್ಲೆ. ನನ್ನ ದೇವರು ನನ್ನನ್ನು ಎಂದೂ ಕೈಬಿಡುವುದಿಲ್ಲ ಎಂಬ ನಂಬಿಕೆಯನ್ನು ಇಟ್ಟುಕೊಳ್ಳಬೇಕು ಎಂದು ಶ್ರೀ ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್ ತಿಳಿಸಿದರು.
ಸಮಾರಂಭದಲ್ಲಿ ಹಾಜರಿದ್ದ ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಅವರು ಆಧ್ಯಾತ್ಮಿಕ ಹಾಗೂ ಸೇವಾ ವಿಚಾರದಲ್ಲಿ ಬಳ್ಳಾರಿಯ ಎಲ್ಲ ಪಕ್ಷದವರು ಒಂದಾಗಿ ಕೆಲಸ ಮಾಡುತ್ತೇವೆ. ರಾಮಕೃಷ್ಣ ಮಿಷನ್‌ಗೆ ಬೇಕಾದ ಅಗತ್ಯ ನೆರವು ನೀಡಲು ನಾವು ಸಿದ್ಧರಿದ್ದೇವೆ ಎಂದರು. ಶಾಸಕ ನಾರಾ ಭರತ್ ರೆಡ್ಡಿ ಅವರು ₹10 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅವರು ಬದಲಾಗುತ್ತಿರುವ ಯುವಕರ ಆದ್ಯತೆ ಹಾಗೂ ದುಶ್ಚಟಗಳಿಂದ ತಪ್ಪಿಸಲು ಬಳ್ಳಾರಿಯ ರಾಮಕೃಷ್ಣ ಮಿಷನ್‌ನ ಪಾತ್ರ ಕುರಿತು ತಿಳಿಸಿದರು.
ಮೇಯರ್ ಪಿ. ಗಾದೆಪ್ಪ ಮಾತನಾಡಿ, ರಾಮಕೃಷ್ಣ ಮಿಷನ್ ನ ಆಶ್ರಮ ಇರುವ ಈ ಹಿಂದೆಯೇ ನಾಮಕರಣಗೊಂಡಿರುವ ರಸ್ತೆಗೆ ಶ್ರೀರಾಮಕೃಷ್ಣ ವಿವೇಕಾನಂದ ರಸ್ತೆಗೆ ನಾಮಫಲಕ ಅಳವಡಿಸುವುದಾಗಿ ಭರವಸೆ ನೀಡಿದರು. ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರದ ಅಧ್ಯಕ್ಷ ಶ್ರೀಧರ ಬೋನಗೇರಿ, ಕಾರ್ಯದರ್ಶಿ ಜಗನ್ನಾಥ, ಪೃಥ್ವಿರಾಜ್ ಭೂಪಾಲ್ ಸೇರಿದಂತೆ ಆಶ್ರಮದ ಭಕ್ತರು ಉಪಸ್ಥಿತರಿದ್ದರು. ಚಿಲ್ಕರಾಯಿ ಎರಿಸ್ವಾಮಿ, ರಾಜಶೇಖರ್ ಹಾಗೂ ಗಡಗಿ ರಾಕೇಶ್ ಅವರು ಕಾರ್ಯಕ್ರಮ ನಿರ್ವಹಿಸಿದರು.