ಸಂಡೂರು: ತಾಲೂಕಿನ ಯಶವಂತನಗರ ಗ್ರಾಮದ ಸಿದ್ಧರಾಮೇಶ್ವರ ಸಂಸ್ಥಾನ ವಿರಕ್ತಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ (೪೮) ಶುಕ್ರವಾರ ನಸುಕಿನಲ್ಲಿ ಲಿಂಗೈಕ್ಯರಾದರು.
ಶನಿವಾರ ಅಂತ್ಯ ಸಂಸ್ಕಾರ: ಯಶವಂತನಗರ ಗ್ರಾಮದ ಶ್ರೀ ಸಿದ್ಧರಾಮೇಶ್ವರರ ಕರ್ತೃ ಗದ್ದುಗೆಯಿರುವ ಮೀನುಗೊಳ್ಳದಲ್ಲಿ ಜೂ. ೨೭ರಂದು ಮಧ್ಯಾಹ್ನ ೩ ಗಂಟೆಗೆ ಶ್ರೀಗಳ ಶಿವೈಕ್ಯ ಸಂಸ್ಕಾರ ಕ್ರಿಯೆಯನ್ನು ನೆರವೇರಿಸಲಾಗುವುದೆಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶ್ರೀಸಿದ್ಧರಾಮೇಶ್ವರರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ವಿಠಲಾಪುರ ಗ್ರಾಮದ ನಿವಾಸಿಗಳಾದ ಶಿವಯ್ಯ ಹಾಗೂ ಈರಮ್ಮ ದಂಪತಿಯ ನಾಲ್ಕನೇ ಪುತ್ರರಾಗಿ ಜನಿಸಿದರು. ಗಂಗಾಧರಯ್ಯ ಎಂಬುದು ಇವರ ಪೂರ್ವಾಶ್ರಮದ ಹೆಸರು.೨೦೧೩ರ ಡಿ. ೨೬ರಂದು ಸಿದ್ಧರಾಮೇಶ್ವರ ಸಂಸ್ಥಾನ ವಿರಕ್ತಮಠದ ಉತ್ತರಾಧಿಕಾರಿಗಳಾಗಿ ನಿಯೋಜಿತರಾದರು. ಸಂಡೂರಿನ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಶ್ರೀ ಪ್ರಭುಸ್ವಾಮೀಜಿ ಮಾರ್ಗದರ್ಶನ ಹಾಗೂ ಗ್ರಾಮದ ಸದ್ಭಕ್ತರ ಪ್ರೀತಿ, ವಿಶ್ವಾಸ ಗಳಿಸಿಕೊಂಡ ಶ್ರೀಗಳು ಶ್ರೀಮಠದ ಕೀರ್ತಿ ಹಾಗೂ ವೈಭವ ಹೆಚ್ಚಿಸಲು ಶ್ರಮಿಸಿದರು. ಶ್ರೀಗಳಿಗೆ ೨೦೧೯ರ ಮೇ ೧೫ರಂದು ಶ್ರೀಮಠದ ಪಟ್ಟಾಭಿಷೇಕ ನೆರವೇರಿಸಲಾಯಿತು.
ಸಿದ್ಧರಾಮೇಶ್ವರರ ಪಾರ್ಥಿವ ಶರೀರವನ್ನು ಬಳ್ಳಾರಿಯಿಂದ ಯಶವಂತನಗರಕ್ಕೆ ತೆಗೆದುಕೊಂಡು ಹೋಗುವ ಮಾರ್ಗ ಮಧ್ಯ ಸಂಡೂರಿನ ಭಕ್ತರು ಸಂಡೂರಿನ ಪ್ರಭುಸ್ವಾಮೀಜಿ ಹಾಗೂ ಬಾಚಿಗೊಂಡನಹಳ್ಳಿಯ ಕೌದಿ ಮಹಾಂತೇಶಸ್ವಾಮಿ ಮಠದ ಶಿವಮಹಾಂತೇಶ ಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀ ಸಿದ್ಧರಾಮೇಶ್ವರರ ದರ್ಶನ ಪಡೆದು, ಶ್ರದ್ಧಾಂಜಲಿ ಸಲ್ಲಿಸಿದರು. ಸಂಸದ ಈ. ತುಕಾರಾಂ ಅವರು ಯಶವಂತನಗರ ಗ್ರಾಮಕ್ಕೆ ತೆರಳಿ ಶ್ರೀಗಳ ದರ್ಶನ ಪಡೆದು, ಶ್ರದ್ಧಾಂಜಲಿ ಸಲ್ಲಿಸಿದರು.