ಕನ್ನಡಪ್ರಭ ವಾರ್ತೆ ಮಂಡ್ಯ
ಮೇ 5ರಿಂದ ನಾಲ್ಕು ದಿನಗಳ ಕಾಲ ನಡೆಯುವ ರಾಜ್ಯದ ಮೊದಲನೇ ದೊಡ್ಡ ಕೊಂಡೋತ್ಸವದ ದಾಖಲೆ ಇದಾಗಿದ್ದು ಕೀಲಾರ ಮತ್ತು ಆಲಕೆರೆ ಗ್ರಾಮಸ್ಥರು ಜೊತೆಯಾಗಿ ಹಬ್ಬವನ್ನು ಆಚರಿಸುತ್ತಿದ್ದಾರೆ.
ಈ ಹಬ್ಬವು 1967,1982 ಹಾಗೂ 2001ರಲ್ಲಿ ಅದ್ಧೂರಿಯಾಗಿ ಜರುಗಿದ್ದು, 2020ರಲ್ಲಿ ಕೊರೊನಾದಿಂದಾಗಿ ಮುಂದೂಡಲಾಗಿದ್ದ ಹಬ್ಬವು ಇದೀಗ ಮತ್ತೆ ಗ್ರಾಮಸ್ಥರು ಹಾಗೂ ಭಕ್ತರ ಸಡಗರ ಸಂಭ್ರಮಾಚರಣೆಯೊಂದಿಗೆ ನಡೆಯಲು ಸಜ್ಜಾಗಿದೆ.ಮೇ 5 ರಂದು ಬೆಳಗ್ಗೆ 5 ರಿಂದ ಗಂಗಾ ಪೂಜೆ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದು ಮಧ್ಯಾಹ್ನ 12 ಗಂಟೆಗೆ ಹೊಸ ನೀರು ತರುವರು. ಸಂಜೆಗೆ ಬೂದನೂರಿನ ತಗಡೂರು ಶ್ರೀ ಅಂಕನಾಥೇಶ್ವರ ದೇವರ ಬರಮಾಡಿಕೊಳ್ಳುವರು.
ಮೇ 7 ರಂದು ಬೆಳಗ್ಗೆ 5 ಗಂಟೆಗೆ ಬ್ರಾಹ್ಮೀ ಮಹೂರ್ತದಲ್ಲಿ ದೇವರ ಗುಡ್ಡರು ಕೊಂಡ ಹಾಯುವರು.
ಮೇ 8 ರಂದು ಬೆಳಗ್ಗೆ 8.30 ರಿಂದ ವೀರಭದ್ರೇಶ್ವರ ಸ್ವಾಮಿ ಹಬ್ಬದ ಅಂಗವಾಗಿ ಮಹಾಪ್ರಸಾದ (ಪರ) ವ್ಯವಸ್ಥೆ ಮಾಡಲಾಗಿದೆ. ಇದೇ ದಿನ ರಾತ್ರಿ ಆಲಕೆರೆ ಗ್ರಾಮದಲ್ಲಿ ಶ್ರೀವೀರಭದ್ರೇಶ್ವರ ಸ್ವಾಮಿ ರಥೋತ್ಸವ ಜರುಗಿ ಹಬ್ಬವು ಸಂಪನ್ನಗೊಳ್ಳುವುದು.
ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮೇಲಿನ ಬಸವನ ಪ್ರತಿಮೆಗೆ ಶಾಸ್ತ್ರದ ದಾರಕಟ್ಟಿ 72 ಅಡಿ ಉದ್ದದ ಕೊಂಡಕ್ಕೆ 25 ಅಡಿ ಎತ್ತರಕ್ಕೆ 12 ಅಡಿ ಅಗಲ ಸೌದೆ ಜೋಡಿಸುವರು. ಇದು ರಾಜ್ಯದಲ್ಲಿಯೇ ಮೊದಲ ಕೊಂಡ ಎನಿಸಲಿದೆ.
ಕೀಲಾರ ಗ್ರಾಮಸ್ಥರು ಸೌದೆ ಕಡಿದು ಕೊಂಡದ ಬಳಿಗೆ ಸೌದೆ ಸಂಗ್ರಹಿಸಿದರೆ ಆಲಕೆರೆ ಗ್ರಾಮಸ್ಥರು ಕೀಲಾರ ಗ್ರಾಮಸ್ಥರಿಗೆ ಊಟದ ವ್ಯವಸ್ಥೆ ಮಾಡುವುದು ಕಾಲದಿಂದ ಚಾಲ್ತಿಯಲ್ಲಿದೆ. ಸಂಜೆ ನಡೆಯುವ ಬಂಡಿ ಉತ್ಸವಕ್ಕೆ ಕೀಲಾರದ ಗ್ರಾಮಸ್ಥರು ದನಗಳ ವ್ಯವಸ್ಥೆ ಮಾಡಿದರೆ ಆಲಕೆರೆ ಗ್ರಾಮಸ್ಥರು ಬಂಡಿಗಳ ವ್ಯವಸ್ಥೆ ಮಾಡುವರು.