- ಶಸ್ತ್ರ ಹರಕೆ, ಕೆಂಡ ಹಾಯ್ದ ಭಕ್ತರು, ಒಣಕೊಬ್ಬರಿ ಸುಟ್ಟು ಭಕ್ತಿ ಸಮರ್ಪಣೆ - - -
ಕನ್ನಡಪ್ರಭ ವಾರ್ತೆ ಹೊನ್ನಾಳಿತಾಲೂಕಿನ ಚಿಕ್ಕಹಾಲಿವಾಣ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗುಳ ಮಹೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖ ವಿಜೃಂಭಣೆಯಿಂದ ನೆರವೇರಿತು.
ಗುಗ್ಗುಳ ಸಂದರ್ಭದಲ್ಲಿ ರಾಣೇಬೆನ್ನೂರಿನ ಪುರುವಂತರ ಸಂಗಡಿಗರಿಂದ ಬಾಯಿ ಹಾಗೂ ದೇಹದ ಭಾಗಗಳಿಗೆ ಭಕ್ತರು ಶಸ್ತ್ರಗಳನ್ನು ಹಾಕಿಸಿಕೊಳ್ಳತ್ತಿದ್ದ ದೃಶ್ಯ ರೋಮಾಂಚನಕಾರಿತ್ತು. ಖಡ್ಗ ಪ್ರದರ್ಶನ ನಡೆಯಿತು. ವಿವಿಧ ದೇವರ ಉತ್ಸವ ಮೂರ್ತಿಗಳು ಪಲ್ಲಕ್ಕಿಯಲ್ಲಿ ಪ್ರದಕ್ಷಿಣೆ ಹಾಕಿದ ನಂತರ ಕೆಂಡದರ್ಚನೆ ನಡೆಯಿತು. ನೂರಾರು ಭಕ್ತರು ಕೆಂಡ ಹಾಯ್ದರು. ಹರಕೆ ಹೊತ್ತ ಮಹಿಳೆಯರು ಕೆಂಡ ಹಾಯ್ದ ಸ್ಥಳದ ಪಕ್ಕದಲ್ಲಿ ಒಣಕೊಬ್ಬರಿಯನ್ನು ಸುಟ್ಟು ಭಕ್ತಿ ಸೇವೆ ಸಲ್ಲಿಸಿದರು. ಮಹಾ ಪ್ರಸಾದ ನಡೆಯಿತು.ಗುಗ್ಗುಳ ಮಹೋತ್ಸವದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ, ಹರಿಹರ ತಾಲೂಕಿನ ಹಿರೇಹಾಲಿವಾಣ ಗ್ರಾಮದ ಶ್ರೀ ಹಾಲೇಶ್ವರ ಸ್ವಾಮಿ, ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದವು. ಶ್ರೀ ಕರಿಯಮ್ಮ ದೇವಿ ಉತ್ಸವ ಮೂರ್ತಿಯನ್ನು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಒಳಗೆ ಇಡಲಾಗಿತ್ತು. ಹಿರೇಹಾಲಿವಾಣ ಗ್ರಾಮದ ಶ್ರೀ ಹಾಲೇಶ್ವರ ಸ್ವಾಮಿ ಹಾಗೂ ಚಿಕ್ಕಹಾಲಿವಾಣ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ಉತ್ಸವ ಮೂರ್ತಿಗಳು ಗುಗ್ಗುಳ ಮಹೋತ್ಸವ ಮತ್ತು ಕೆಂಡದರ್ಚನೆ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವು.
ಹರಿಹರ ತಾಲೂಕಿನ ಹಿರೇಹಾಲಿವಾಣ ಗ್ರಾಮದ ಮುಖಂಡರು, ಹೊನ್ನಾಳಿ ಪಟ್ಟಣ ಸೇರಿದಂತೆ ತಾಲೂಕಿನ ಯರೇಹಳ್ಳಿ, ಯಕ್ಕನಹಳ್ಳಿ, ಕೂಲಂಬಿ, ಕುಂದೂರು, ಚಿಕ್ಕೆರೇಹಳ್ಳಿ, ದೊಡ್ಡೆರೇಹಳ್ಳಿ, ಹರಿಹರ ತಾಲೂಕಿನ ಮಲೇಬೆನ್ನೂರು, ಹರಳಹಳ್ಳಿ ಮತ್ತಿತರ ಗ್ರಾಮಗಳ ಜನತೆ, ಶ್ರೀ ವೀರಭದ್ರೇಶ್ವರಸ್ವಾಮಿ ಒಕ್ಕಲಿನ ನೂರಾರು ಕುಟುಂಬಸ್ಥರು ಆಗಮಿಸಿದ್ದರು.ಮಧ್ಯಾಹ್ನ 3ರಿಂದ ಸಂಜೆ 6 ಗಂಟೆವರೆಗೆ ಜವಳ ಕಾರ್ಯಕ್ರಮ ನಡೆಯಿತು. ರಾತ್ರಿ 7ರಿಂದ 10ರವರೆಗೆ ಅಡ್ಡಪಲ್ಲಕ್ಕಿ ಉತ್ಸವ ಪಾರಂಪರಿಕ ಶ್ರದ್ಧಾ-ಭಕ್ತಿ-ವೈಭವಗಳಿಂದ ನೆರವೇರಿತು. ಅನ್ನ ದಾಸೋಹ ನಡೆಸುವುದಕ್ಕೆ ಭಕ್ತರು ನೂರಾರು ಕೆ.ಜಿ. ಅಕ್ಕಿ ದಾನ ಮಾಡಿದ್ದರು. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳು ತಾಲೂಕಿನ ಹತ್ತೂರು, ಗೋಪಗೊಂಡನಹಳ್ಳಿ ದೊಡ್ಡೇರೇಹಳ್ಳಿ, ಚಿಕ್ಕರೇಹಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಅಪಾರ ಭಕ್ತರು ಪಾಲ್ಗೊಂಡರು.
- - - -14ಎಚ್.ಎಲ್.ಐ1:ಚಿಕ್ಕಹಾಲಿವಾಣ ಶ್ರೀ ವೀರಭದ್ರೇಶ್ವರಸ್ವಾಮಿ ಗುಗ್ಗುಳ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖ ವಿಜೃಂಭಣೆಯಿಂದ ನೆರವೇರಿತು.