ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಶುಕ್ರವಾರ ಬೆಳಗ್ಗೆ ಗದ್ದಿಗೆ ಮಠದ ಶ್ರೀಗಳ ನೇತೃತ್ವದಲ್ಲಿ ಅಗ್ನಿ ಕುಂಡಕ್ಕೆ ವಿವಿಧ ವಾದ್ಯಮೇಳ ಕಳಸಾದಾರತಿಯೊಂದಿಗೆ ಐದು ಸುತ್ತು ಪೂಜಾ ಕೈಂಕರ್ಯ ನಡೆಸಿ ನಂತರ ಅಗ್ನಿ ಹಾಯಲಾಯಿತು. ಉಚ್ಚಾಯಿ ಉತ್ಸವ ವೀರಂಘಂಟೆ ಮಡಿವಾಳೇಶ್ವರರ ಕರ್ತು ಗದ್ದಿಗೆಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮದ ಭಕ್ತರು ಹಿರಿಯರ ಮಾರ್ಗದರ್ಶನದಲ್ಲಿ ರಥಕ್ಕೆ ಎಣ್ಣೆ ಹಚ್ಚಿ ನಂತರ ರಥ ಶೃಂಗರಿಸಿ ದೇವರನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಯಿತು. ಸಂಜೆ ಶುಭ ಮುಹೂರ್ತದಲ್ಲಿ ಜೋಡು ತೇರಿನ ರಥೋತ್ಸವ ಎಳೆದು ಸಂಭ್ರಮಿಸಿದರು.
ಭಕ್ತರು ದೇವರಿಗೆ ದೀಡ ನಮಸ್ಕಾರ, ಉರುಳು ಸೇವೆ ಸಲ್ಲಿಸುವ ಮೂಲಕ ಹರಕೆ ತೀರಿಸಿದರು. ಸರದಿ ಸಾಲಿನಲ್ಲಿ ನಿಂತು ದೇವಸ್ಥಾನದಲ್ಲಿ ದರ್ಶನ ಪಡೆದರು. ಸಂಪ್ರದಾಯದಂತೆ ಗುರು ಶಿಷ್ಯರ ಜೋಡು ರಥಗಳಿಗೆ ಜೋಡು ಕೊಡೆ, ಕಳಸವಿಟ್ಟು ಭಕ್ತರು ಜೋಡು ಎಡೆ ಸಲ್ಲಿಸಿ ಪೂಜೆ ಸಲ್ಲಿಸಿದರು. ಗದ್ದಿಗೆ ಮಠದ ಶ್ರೀ ಗುರು ಮಡಿವಾಳೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ದೇವಸ್ಥಾನದ ಮುಂದೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ಸಂಘಟನೆಗಳು ಜಾತ್ರೆಗೆ ಬಂದ ಯಾತ್ರಾತ್ರಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತ ಸಮೂಹ ಶ್ರೀ ವೀರಘಂಟಿ ಮಡಿವಾಳೇಶ್ವರ ದೇವಸ್ಥಾನದಿಂದ ಜೋಡುಗುಡಿಯ ಪಾದುಗಟ್ಟಿಯವರೆಗೆ ಜೋಡು ರಥಗಳನ್ನು ಎಳೆಯುವ ಮೂಲಕ ಭಕ್ತಿ ಮೆರೆದವರು. ಲಕ್ಷಾಂತರ ಭಕ್ತರು ಜಯ ಘೋಷ ಮೊಳುಗಿಸಿ ರಥಗಳಿಗೆ ಉತ್ತತ್ತಿ, ಬಾಳೆಹಣ್ಣು ಮತ್ತು ಕಬ್ಬು ಹಾರಿಸಿ ದೇವರ ಕೃಪೆಗೆ ಪಾತ್ರರಾದರು.ಜಿಲೇಬಿ ಬಜಿ ವಿಶೇಷ:
ಕಲಕೇರಿ ಶ್ರೀ ಗುರು ವೀರಗಂಟೆ ಮಡಿವಾಳೇಶ್ವರ ಜಾತ್ರೆ ಸುಮಾರು 15 ದಿನಗಳ ಕಾಲ ನಡೆಯುತ್ತದೆ. ಜಾತ್ರೆಯಲ್ಲಿ ಜಿಲೇಬಿ ಬಜಿ ವಿಶೇಷ. ಸುಮಾರು 100ಕ್ಕೂ ಅಧಿಕ ಅಂಗಡಿಗಳಲ್ಲಿ ಜಾತ್ರೆಗೆ ಬಂದ ಯಾತ್ರಿಕರು ಜಿಲೇಬಿ, ಬಜಿ ಹಾಗೂ ಪಳಾರವನ್ನು ಖರೀದಿಸಿ, ಸವಿದು ಸಂತುಷ್ಟರಾದರು. ಈ ಭಾಗದ ಸುಮಾರು 40ಕ್ಕೂ ಹೆಚ್ಚು ಗ್ರಾಮಗಳಿಂದ ಅಲಂಕೃತ ಎತ್ತಿನಗಾಡಿ, ಟ್ರ್ಯಾಕ್ಟರ್, ದ್ವಿಚಕ್ರ ಮತ್ತು ಕಾಲ್ನಡಿಗೆಯಲ್ಲಿ ಜಾತ್ರೆಗೆ ಬರುವುದು ವಿಶೇಷ. ತಿಂಗಳಗಳ ಕಾಲ ನಡೆಯುವ ಜಾತ್ರೆಯಲ್ಲಿ ನಾಟಕ ಪ್ರದರ್ಶನ ಪ್ರಮುಖ ಆಕರ್ಷಣೆ ಕೇಂದ್ರವಾಗಿರಲಿದೆ.