ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಶ್ರೀಹೊಂಬಾಳಮ್ಮ ದೇಗುಲದ 5 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿಗೆ ಅಕ್ರಮವಾಗಿ ಖಾತೆ ಮಾಡಿರುವ ಪುರಸಭೆ ಅಧಿಕಾರಿಗಳ ಕ್ರಮ ಖಂಡಿಸಿ ದೇಗುಲದ ಟ್ರಸ್ಟ್ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಜನಪರ ಸಂಘಟನೆಗಳ ಬೆಂಬಲದೊಂದಿಗೆ ಪಟ್ಟಣದ ತಾಲೂಕು ಕಚೇರಿ ಮತ್ತು ಪುರಸಭೆ ಎದುರು ಬೃಹತ್ ಪ್ರತಿಭಟನೆ ನಡೆಸಿದರು.ಪಟ್ಟಣದ ಶ್ರೀನರಸಿಂಹಸ್ವಾಮಿ ದೇಗುಲದ ಆವರಣದಿಂದ ಮೆರವಣಿಗೆ ನಡೆಸಿದ ಪ್ರತಿಭಟನೆಕಾರರು ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಕೆಲಕಾಲ ಧರಣಿ ನಡೆಸಿದರು. ಅಕ್ರಮ ಖಾತೆ ಮಾಡಿರುವ ಪುರಸಭೆ ನಿಕಟಪೂರ್ವ ಮುಖ್ಯಾಧಿಕಾರಿ ಅಶೋಕ್ ಮತ್ತು ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿದರು.
ಅಶೋಕ್ ಅಧಿಕಾರ ಅವಧಿಯಲ್ಲಿ ದೇಗುಲಕ್ಕೆ ಸೇರಿದ 5 ಗುಂಟೆ ಗ್ರಾಮಸ್ಥಾನ ಭಾಗವನ್ನು ಎಂ.ಟಿ.ಮಂಜುನಾಥ್ ಅವರಿಗೆ ನಿಯಮ ಬಾಹಿರವಾಗಿ ಖಾತೆ ಮಾಡಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಮೃತ್ಯುಂಜಯ ಆರೋಪಿಸಿದರು.ಮಂಜುನಾಥ್‌ಗೆ ಇ-ಖಾತೆ ಮಾಡುವ ಮುನ್ನ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಚರ್ಚೆ ನಡೆಸದೆ ಹಾಗೂ ಆಡಳಿತ ಅಧಿಕಾರಿಯಾಗಿರುವ ಉಪವಿಭಾಗಾಅಧಿಕಾರಿ ಎದುರು ಕಡತ ಮಂಡಿಸದೆ ಸರ್ಕಾರ ಮತ್ತು ಪುರಸಭೆ ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಜಾಗದ ಮೂಲ ದಾಖಲಾತಿ ಮತ್ತು ಸ್ಥಳದ ಐತಿಹ್ಯ ಮತ್ತು ಜಮೀನಿನ ಮೌಲ್ಯಕ್ಕೆ ಅನುಗುಣವಾಗಿ ಕಿಮ್ಮತ್ತು ಪಡೆಯದೆ ಅಕ್ರಮವಾಗಿ ಖಾತೆ ಮಾಡಲಾಗಿದೆ ಎಂದು ದೂರಿದರು.
ಅಕ್ರಮ ಖಾತೆ ಮಾಡಿರುವ ಅಶೋಕ್ ಹಾಗೂ ಸಿಬ್ಬಂದಿಯನ್ನು ಅಮಾನತ್ತು ಮಾಡಬೇಕು. ದೇಗುಲದ 5 ಗುಂಟೆ ಜಮೀನಿನ ಖಾತೆಯನ್ನು ಈ ಕೂಡಲೇ ರದ್ದುಗೊಳಿಸಬೇಕು. ಜಮೀನನ್ನು ಪುರಸಭೆ ವಶಕ್ಕೆ ಪಡೆದು ದೇಗುಲದ ಪುನರ್ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿಕೊಡಬೇಕು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಂತರ ಪುರಸಭೆ ಕಚೇರಿಗೂ ಮುತ್ತಿಗೆ ಹಾಕಿ ಮುಖ್ಯಾಧಿಕಾರಿ ಮೀನಾಕ್ಷಿ ಅವರಿಗೆ ಮನವಿ ಸಲ್ಲಿಸಿದರು.ಮನವಿ ಪತ್ರ ಸ್ವೀಕರಿಸಿ, ದೇಗುಲದ 5ಗುಂಟೆ ಜಾಗದ ಅಕ್ರಮ ಖಾತೆ ಸಂಬಂಧ ಕಳೆದ ಜು. 9ರಂದು ನಡೆದ ಪುರಸಭೆ ಸದಸ್ಯರ ಸಭೆಯಲ್ಲಿ ಮುಂದಿನ ಕಾನೂನು ಕ್ರಮದ ಬಗ್ಗೆ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ. ಆನಂತರ ಸಭೆ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗಿದೆ. ಅವರಿಂದ ಮುಂದಿನ ಆದೇಶ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಅಭಿ, ಉಪಾಧ್ಯಕ್ಷ ಸತೀಶ್, ಖಜಾಂಚಿ ಅಂಕಪ್ಪ, ಶೋಷಿತ ಸಮುದಾಯದ ವೇದಿಕೆಯ ರಾಜ್ಯಾಧ್ಯಕ್ಷ ಸುರೇಶ್ ಕಂಠಿ, ಛಲವಾದಿ ಮಹಾಸಭಾ ನಿರ್ದೇಶಕರಾದ ನಾಗಭೂಷಣ್, ಮರಿದೇವರು, ಚುಂಚಶ್ರೀ ಒಕ್ಕಲಿಗರ ಸಂಘದ ಡಾ. ಕೃಷ್ಣ, ದೇಶಹಳ್ಳಿ ಶಿವಪ್ಪ, ಪುರಸಭೆ ಸದಸ್ಯರಾದ ಎಂ .ಐ. ಪ್ರವೀಣ್, ಎಂ.ಬಿ.ಸಚಿನ್. ಟಿ.ಅರ್. ಪ್ರಸನ್ನ ಕುಮಾರ್, ಪ್ರಮೀಳಾ, ಸುಮಿತ್ರ, ಮಾಜಿ ಅಧ್ಯಕ್ಷ ಅಮರ ಬಾಬು, ಮುಖಂಡರಾದ ಎಂ.ಡಿ. ಮಹಾಲಿಂಗಯ್ಯ, ತಮ್ಮಣಗೌಡ ಹಲವರು ಪಾಲ್ಗೊಂಡಿದ್ದರು.