ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶಾಸಕ ಎಚ್.ಟಿ.ಮಂಜು, ಸಮಾಜ ಸೇವಕರಾದ ಮಲ್ಲಿಕಾರ್ಜುನ, ಸೋಮಶೇಖರ್, ಗ್ರೇಡ್-2 ತಹಸೀಲ್ದಾರ್ ಲೋಕೇಶ್ ಹಾಗೂ ದೇವಾಲಯದ ಧರ್ಮದರ್ಶಿ ರಾಮಚಂದ್ರ ಅವರು ಶ್ರೀಲಕ್ಷ್ಮೀ ನಾರಾಯಣಸ್ವಾಮಿ ಉತ್ಸವಮೂರ್ತಿಗೆ ಸಾಂಪ್ರದಾಯಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಶಾಸಕ ಎಚ್.ಟಿ.ಮಂಜು ಮಾತನಾಡಿ, ಹೊಸಹೊಳಲು ಗ್ರಾಮ ಹೊಯ್ಸಳ ಶಿಲ್ಪಕಲೆಗೆ ಹೆಸರಾಗಿದೆ. ಇಲ್ಲಿನ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ ಸುಮಾರು 900 ವರ್ಷಗಳ ಹಿಂದೆ ಹೊಯ್ಸಳ ದೊರೆಗಳಿಂದ ನಿರ್ಮಿತವಾಗಿದ್ದು ಪುರಾತತ್ವ ಇಲಾಖೆಯ ಸಂರಕ್ಷಣೆಯಲ್ಲಿದೆ ಎಂದರು.ಹಲವು ಶತಮಾನಗಳಿಂದಲೂ ರಥೋತ್ಸವ ನಡೆದುಕೊಂಡು ಬರುತ್ತಿದೆ. ಹಬ್ಬ ಹರಿದಿನಗಳು ಜಾತ್ರೆ ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ ರಥೋತ್ಸವದ ಸಂಭ್ರಮದಲ್ಲಿ ಎಲ್ಲಾ ಜಾತಿ ವರ್ಗಗಳ ಜನರು ಒಂದಾಗಿ ಭಗವಂತನ ನಾಮ ಸ್ಮರಣೆ ಮಾಡಿದಾಗ ಸಾಮಾಜಿಕ ಅಸಮಾನತೆ ದೂರಾಗಿ ಪರಸ್ಪರ ಪ್ರೀತಿ ವಿಶ್ವಾಸ ಸ್ನೇಹ ಸೌಹಾರ್ದತೆ ಮೂಡಲಿದೆ ಎಂದ ಅವರು, ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀರಥದ ಕಳಸಕ್ಕೆ ಹಣ್ಣು ಜವನ ಸಮರ್ಪಿಸಿ ಧನ್ಯತಾ ಭಾವನೆ ಮೆರೆದಿದ್ದಾರೆ ಎಂದರು.
ತೇರಿನ ಬೀದಿಯಲ್ಲಿ ಸಾವಿರಾರು ಜನ ಉಘೇ..ಉಘೇ ಗೋವಿಂದ. ಉಘೇ ವೆಂಕಟರಮಣ, ಉಘೇ ಶ್ರೀನಿವಾಸ ಎಂಬ ಜಯಘೋಷಗಳೊಂದಿಗೆ ಶ್ರೀರಥವನ್ನು ಎಳೆದರು. ರಥ ಬೀದಿಯ ಉದ್ದಕ್ಕೂ ಮನೆಮನೆಗಳ ಮುಂದೆ ರಂಗೋಲಿಯಿಟ್ಟು ಸುಮಂಗಲಿಯರು ಲಕ್ಷ್ಮೀನಾರಾಯಣನಿಗೆ ಹಣ್ಣುಕಾಯಿ ಸಮರ್ಪಿಸಿದರು.
ರಥಬೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಕುರುಹಿನಶೆಟ್ಟಿ ಸಮಾಜದ ಬಂಧುಗಳು ನೆರೆದಿದ್ದ ಸಾವಿರಾರು ಭಕ್ತಾದಿಗಳಿಗೆ ಮಜ್ಜಿಗೆ ಹಾಗೂ ಪಾನಕವನ್ನು ವಿತರಿಸಿ ಬಿಸಿಲಿನ ಜಳದ ತೀವ್ರತೆಯಿಂದ ದಣಿವಾರಿಸಿಕೊಳ್ಳಲು ನೆರವಾದರು. ರಥೋತ್ಸವದ ಅಂಗವಾಗಿ ನಡೆದ ದನಗಳ ಜಾತ್ರೆಯು ಮಹೋತ್ಸವದ ಮೆರಗು ಹೆಚ್ಚಿಸಿತ್ತು.