ಶ್ರೀಮಂಗಲ ವೆಸ್ಟ್‌ ನೆಮ್ಮಲೆ: ಹುಲಿ ಸೆರೆ ಕಾರ್ಯಾಚರಣೆ ಸ್ಥಗಿತ

KannadaprabhaNewsNetwork | Published : Oct 16, 2024 12:31 AM

ಸಾರಾಂಶ

ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡಿರುವ ಹುಲಿಯನ್ನು ಸೆರೆ ಹಿಡಿಯಲು ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯನ್ನು ಮಂಗಳವಾರ ಸಂಜೆಯಿಂದ ಸ್ಥಗಿತ ಮಾಡಲು ನಿರ್ಧರಿಸಲಾಗಿದೆ. ಹುಲಿ ಸಮೀಪದ ಅರಣ್ಯಕ್ಕೆ ಹೋಗಿರುವ ಹೆಜ್ಜೆ ಗುರುತು ಪತ್ತೆಯಾದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶ್ರೀಮಂಗಲ ಹೋಬಳಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡಿರುವ ಹುಲಿಯನ್ನು ಸೆರೆ ಹಿಡಿಯಲು ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯನ್ನು ಮಂಗಳವಾರ ಸಂಜೆಯಿಂದ ಸ್ಥಗಿತ ಮಾಡಲು ನಿರ್ಧರಿಸಲಾಗಿದೆ.

ಹುಲಿ ಸಮೀಪದ ಅರಣ್ಯಕ್ಕೆ ಹೋಗಿರುವ ಹೆಜ್ಜೆ ಗುರುತು ಪತ್ತೆಯಾದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹುಲಿ ತನ್ನ ಆವಾಸ ಸ್ಥಾನಕ್ಕೆ ಹಿಂತಿರುಗಿರುವುದು ಸಂತಸ ತಂದಿದೆ, ಈ ಮೂಲಕ ಹುಲಿಯಿಂದ ಆತಂಕಗೊಂಡಿದ್ದ ಜನರಲ್ಲಿ ಸಮಾಧಾನ ಮೂಡಿಸಿದೆ, ಈ ಮೂಲಕ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಕಾರ್ಯಾಚರಣೆ ಮೇಲುಸ್ತುವಾರಿ ವಹಿಸಿರುವ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ಹುಲಿ ಜಾನುವಾರಗಳ ಮೇಲೆ ದಾಳಿ ನಡೆಸಿದ ಸ್ಥಳದಲ್ಲಿ ದೊರೆತಿರುವ ಹೆಜ್ಜೆ ಗುರುತು ಹಾಗೂ ಬೀರುಗ ಗ್ರಾಮದ ಪಾಚಿಬೇಲ್ ಮೂಲಕ ಬ್ರಹ್ಮಗಿರಿ ಅಭಯಾರಣ್ಯಕ್ಕೆ ಹುಲಿ ತೆರಳಿರುವ ಸ್ಥಳದಲ್ಲಿ ಪತ್ತೆಯಾಗಿರುವ ಹುಲಿ ಹೆಜ್ಜೆ ಪರಸ್ಪರ ಹೊಂದಾಣಿಕೆಯಾಗುತ್ತಿದೆ. ಇದನ್ನು ವೈಜ್ಞಾನಿಕವಾಗಿಯೂ ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಈ ಹಿನ್ನಲೆ ಸ್ಥಳದಲ್ಲಿರುವ ಸಾಕಾನೆ, ಕ್ಷಿಪ್ರ ಕಾರ್ಯಪಡೆ, ಕಾಡಾನೆ ಟಾಸ್ಕ್ ಪೋರ್ಸ್‌ನ್ನು ಕಾರ್ಯಾಚರಣೆಯಿಂದ ಹಿಂಪಡೆಯಾಗುವುದು, ಆದರೆ ಶ್ರೀಮಂಗಲ ವನ್ಯಜೀವಿ ವಿಭಾಗದ ವಲಯರಣ್ಯಧಿಕಾರಿ ಅರವಿಂದ್ ಅವರ ನೇತೃತ್ವದಲ್ಲಿ ತಂಡವೊಂದು ಹುಲಿ ಚಲನವಲನದ ಮೇಲೆ ನಿಗಾ ಇಡುತ್ತದೆ ಎಂದರು.16 ಹಸುಗಳು ಬಲಿ: ಕಳೆದ 2 ತಿಂಗಳಿನಿಂದ ಶ್ರೀಮಂಗಲ ಹೋಬಳಿ ವ್ಯಾಪ್ತಿಯಲ್ಲಿ 16 ಹಸುಗಳನ್ನು ಹುಲಿ ದಾಳಿ ಮಾಡಿ ಕೊಂದಿದೆ. ಈ ಹಿನ್ನಲೆ ಶಾಸಕ ಎ. ಎಸ್.ಪೊನ್ನಣ್ಣ ಅರಣ್ಯ ಸಚಿವರು ಮತ್ತು ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಅರಿವಳಿಕೆ ನೀಡಿ ಹುಲಿಸೆರೆಗೆ ಅನುಮತಿ ಒದಗಿಸಿದ್ದರು. ಹುಲಿ ಸೆರೆಗೆ ಮೂರು ದಿನಗಳಿಂದ ಕಾರ್ಯಾಚರಣೆ ನಡೆದಿತ್ತು. ಮತ್ತೆ ಹುಲಿ ಸಂಚಾರ ಅಥವಾ ಜಾನುವಾರುಗಳ ಮೇಲೆ ದಾಳಿ ಪ್ರಕರಣ ಕಂಡು ಬಂದರೆ ಮತ್ತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಕೇತ್ ಪೂವಯ್ಯ ವಿವರಿಸಿದರು.ಈ ಸಂದರ್ಭ ಮಾತನಾಡಿದ ಅರಣ್ಯ ಇಲಾಖೆಯ ವನ್ಯಜೀವಿ ಮಾಜಿ ವಾರ್ಡನ್ ಕುಂಞಂಗಡ ಬೋಸ್ ಮಾದಪ್ಪ, ಕೂಂಬಿಂಗ್ ನಿಂದ ಹುಲಿಯ ಪ್ರಶಾಂತತೆಗೆ ತೊಂದರೆ ಉಂಟಾಗಿ ಹುಲಿ ತನ್ನ ಆವಾಸ ಸ್ಥಾನಕ್ಕೆ ಹಿಂತಿರುಗಿದೆ. ಇದನ್ನು ಅರಣ್ಯಧಿಕಾರಿಗಳು ಸಹ ಖಚಿತ ಪಡಿಸಿದ್ದಾರೆ. ಹಿಂತಿರುಗಿರುವ ಹುಲಿ ಕೂಡಲೇ ನಾಡಿಗೆ ಬರುವ ಸಾಧ್ಯತೆ ಕಡಿಮೆ. ಹುಲಿಯನ್ನು ಸೆರೆ ಹಿಡಿಯುವುದ್ದಕ್ಕಿಂತ ಅದು ಬಂದ ಜಾಗಕ್ಕೆ ವಾಪಸು ಹೋಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸೆರೆ ಹಿಡಿಯುವುದೇ ಆಗಲಿ, ಹುಲಿಯನ್ನು ಬಂದ ಜಾಗಕ್ಕೆ ಹಿಂತಿರುಗಿಸುವುದೇ ಆಗಲಿ ಅದು ಕಾರ್ಯಾಚರಣೆಯ ಯಶಸ್ಸು ಎಂದು ಭಾವಿಸಬೇಕಾಗುತ್ತದೆ ಎಂದರು.

ಕಾರ್ಯಾಚರಣೆ ಮುಗಿದ ಹಿನ್ನಲೆ ಶಿಬಿರಕ್ಕೆ ವಾಪಸು ತೆರಳುವ ಮುನ್ನ ಮತ್ತಿಗೋಡು ಸಾಕಾನೆ ಶಿಬಿರದಿಂದ ಆಗಮಿಸಿದ್ದ ಶ್ರೀರಾಮ ಮತ್ತು ಅಜಯ ಸಾಕಾನೆಗಳು ತೋಡಿನಲ್ಲಿ ಕಾವಾಡಿಗರ ಜೊತೆ ಸಂತಸದಲ್ಲಿ ಸ್ನಾನದಲ್ಲಿ ತೊಡಗಿಕೊಂಡವು.ತಾ.ಪಂ. ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ, ಟಿ. ಶೆಟ್ಟಿಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಪ್ರಭು ಸುಬ್ಬಯ್ಯ, ಕೊಡಗು ಬೆಳೆಗಾರ ಒಕ್ಕೂಟದ ಮಾಣೀರ ವಿಜಯ ನಂಜಪ್ಪ, ಚೊಟ್ಟೆಯಾಂಡಮಾಡ ವಿಶು, ಶ್ರೀಮಂಗಲ ವನ್ಯಜೀವಿ ವಲಯಾರಣ್ಯಾಧಿಕಾರಿ ಅರವಿಂದ್, ಸಿಬ್ಬಂದಿ ಹಾಜರಿದ್ದರು.

Share this article