ಕನ್ನಡಪ್ರಭ ವಾರ್ತೆ ನಾಗಮಂಗಲ
ಆಕಸ್ಮಿಕವಾಗಿ ಹುಟ್ಟಿನಿಂದಲೇ ಬರುವ ಸೀಳುತುಟಿ ಮತ್ತು ಸೀಳು ಅಂಗುಳ ಸಮಸ್ಯೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಸರಿಪಡಿಸಿ ಮಕ್ಕಳು ಮತ್ತು ಪೋಷಕರ ಮೊಗದಲ್ಲಿ ಮಂದಹಾಸ ಮೂಡಿಸುವ ಕೆಲಸವನ್ನು ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿರವರ ಸಂಕಲ್ಪದೊಂದಿಗೆ ಕಳೆದ 18 ವರ್ಷಗಳಿಂದ ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ಬಿ.ಜಿ.ನಗರದಲ್ಲಿ ಆದಿಚುಂಚನಗಿರಿ ಆಸ್ಪತ್ರೆ ವತಿಯಿಂದ ಅಮೇರಿಕಾದ ರೋಟೋಪ್ಲಾಸ್ಟ್ ಇಂಟರ್ ನ್ಯಾಷನಲ್ ಸಂಸ್ಥೆ, ಬೆಂಗಳೂರು ಉತ್ತರ ವಲಯದ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಡಿ.13 ರವರೆಗೆ ಸೀಳುತುಟಿ, ಸೀಳು ಅಂಗುಳ ಮತ್ತು ಸುಟ್ಟಗಾಯಗಳಿಂದ ವಿರೂಪಗೊಂಡಿರುವ ಮಕ್ಕಳಿಗೆ ಆಯೋಜಿಸಿರುವ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಸೀಳು ತುಟಿ ಮತ್ತು ಸೀಳು ಅಂಗುಳ ಶಾಪವಲ್ಲ. ಆಕಸ್ಮಿಕವಾಗಿ ಬಂದಿರುವ ಕಾಯಿಲೆಯನ್ನು ಸೂಕ್ತ ಚಿಕಿತ್ಸೆ ನೀಡಿ ಪರಿಹರಿಸಬಹುದು. ಕಳೆದ ಶಿಬಿರಗಳಲ್ಲಿ ಯಶಸ್ವಿ ಚಿಕಿತ್ಸೆ ನೀಡಿ ವಿರೂಪಗೊಂಡಿದ್ದ ಸಾವಿರಾರು ಮಕ್ಕಳ ಮೊಗದಲ್ಲಿ ನಗು ಮತ್ತು ಸೌಂದರ್ಯವನ್ನು ಪುನಃಸ್ಥಾಪಿಸುತ್ತಿರುವ ಶ್ರೀಮಠ ಅಮೇರಿಕಾದಿಂದ ನುರಿತ ವೈದ್ಯರನ್ನು ಕರೆಸಿ ಸೂಕ್ತ ಚಿಕಿತ್ಸೆ ಕೊಡಿಸುತ್ತಿದೆ ಎಂದರು.ಹಳ್ಳಿಗಳಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ ಲಕ್ಷಾಂತರ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ಆದಿಚುಂಚನಗಿರಿ ಆಸ್ಪತ್ರೆ ನೀಡುತ್ತಿದೆ. ಬಡಜನತೆಯ ಆರೋಗ್ಯ ಸುಧಾರಿಸಲು ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೈಗೆಟುಕುವ ರೀತಿಯಲ್ಲಿ ಆರೋಗ್ಯ ಸೇವೆ ನೀಡುತ್ತಿದೆ ಎಂದು ಶ್ಲಾಘಿಸಿದರು.
ರಾಜ್ಯದ ಇತಿಹಾಸದಲ್ಲೇ ಖಾಸಗಿಯವರಿಗೆ ಕೃಷಿ ಕಾಲೇಜನ್ನು ಮಂಜೂರು ಮಾಡಿರುವುದು ಇದೇ ಮೊದಲು. ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ಕಾಲೇಜು ಪ್ರಾರಂಭವಾಗಿದೆ. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಅಡಿ ಸ್ಥಾಪನೆಯಾಗಿರುವ ಕೃಷಿ ಕಾಲೇಜಿನ ಮಂಜೂರಾತಿಯನ್ನು ನಾನು ಕೃಷಿ ಸಚಿನಾಗಿ ಉದ್ಘಾಟನೆ ಮಾಡಿವ ಸೌಭಾಗ್ಯ ಸಿಕ್ಕಿದೆ. ತಾಲೂಕು ಮತ್ತು ರಾಜ್ಯದ ಜನತೆ ಈ ಕಾಲೇಜಿನ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಶ್ರೀಗಳಿಂದ ಆಶೀರ್ವಚನ: ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಡಾ. ನಿರ್ಮಲಾನಂದನಾಥ ಶ್ರೀಗಳು, ಸೀಳು ತುಟಿ ಮತ್ತು ಸೀಳು ಅಂಗುಳ ಹೊಂದಿರುವ ಮಕ್ಕಳ ಹಾಗೂ ವ್ಯಕ್ತಿಗಳ ಶಸ್ತ್ರ ಚಿಕಿತ್ಸೆಯನ್ನು ಸರಿಯಾಗಿ ಹಾಗೂ ಯಶಸ್ವಿಯಾಗಿ ನೆರವೇರಿಸಿ ಸುರಕ್ಷಿತವಾಗಿ ಅವರವರ ಮನೆಗಳಿಗೆ ಕಳಿಸುವ ಕೆಲಸವನ್ನು ನುರಿತ ವೈದ್ಯರ ತಂಡ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ಮಾಡಲಿದೆ. ಅಮೇರಿಕಾದಿಂದ ವೈದ್ಯರ ತಂಡ ಬಂದು ಚಿಕಿತ್ಸೆ ನೀಡುತ್ತಿರುವುದು ನಮ್ಮ ನಿಮ್ಮೆಲ್ಲರ ಅದೃಷ್ಟ ಎಂದರು.
ಹಳ್ಳಿಗಾಡಿನ ಬಡ ಜನರಿಗೆ ಹಾಗೂ ರೈತರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಲು ಇಂತಹ ಶಿಬಿರವನ್ನು ಏರ್ಪಡಿಸಿದ್ದು, ಪೋಷಕರು ಆತಂಕಪಡುವ ಅವಶ್ಯಕತೆ ಇಲ್ಲ. ಗುಣಮಟ್ಟದ ಚಿಕಿತ್ಸೆ ನೀಡಿ ಮಕ್ಕಳು ಮತ್ತು ಪೋಷಕರ ಮೊಗದಲ್ಲಿ ನಗು ತರುವುದೇ ನಮ್ಮ ಸಂಕಲ್ಪವಾಗಿದೆ ಎಂದರು.ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ, ವಾರ್ಡ್‌ಸೌಲಭ್ಯ, ಔಷದೋಪಾಚಾರ ನೀಡಲಾಗುವುದು . ಶಿಬಿರದ ಸೌಲಭ್ಯವನ್ನು ಶಿಬಿರಾರ್ಥಿಗಳು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಮೆರಿಕಾದ ರೋಟೋಪ್ಲಾಸ್ಟ್‌ನ ವೈದ್ಯಕೀಯ ನಿರ್ದೇಶಕ ಬ್ರಾಡ್ಲೀ ಕೂಟ್ಸ್, ಅಮೆರಿಕಾದ ರೋಟೋಪ್ಲಾಸ್ಟ್ ಮಿಷಿನ್ ಡೈರೆಕ್ಟ್‌ರ್ ಟೆಡ್ ಅಲೆಕ್ಸ್, ನಿಕಟಪೂರ್ವ ಜಿಲ್ಲಾ ರಾಜ್ಯಪಾಲ ರೋ.ವಿ.ಶ್ರೀನಿವಾಸ್‌ಮೂರ್ತಿ, ಬೆಂಗಳೂರು ಉತ್ತರ ರೋಟರಿ ಅಧ್ಯಕ್ಷ ಗಿರೀಶ್ ಯಾವಗಲ್, ಪ್ರಾಜೆಕ್ಟ್ ಚೇರ್ಮನ್ ಬಿ.ಎಸ್.ವಿನೋದ್ ಕುಮಾರ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ.ಎ.ಶೇಖರ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ನೊಂದನಾಧಿಕಾರಿ ಸಿ.ಕೆ.ಸುಬ್ಬರಾಯ, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಂ, ಶ್ರೀಆದಿಚುಂಚನಗಿರಿ ಆಸ್ಪತ್ರೆ ಮುಖ್ಯಸ್ಥ ಡಾ. ಕೆ.ಎಂ.ಶಿವಕುಮಾರ್ ಸೇರಿದಂತೆ ಇತರರು ಇದ್ದರು.