- 600 ವರ್ಷಗಳ ಯತಿಪರಂಪರೆ ಹೊಂದಿರುವ ಧಾರ್ಮಿಕ, ಸಾಂಸ್ಕೃತಿಕ ಪೀಠ.
ನೆಮ್ಮಾರ್ ಅಬೂಬಕರ್.ಕನ್ನಡಪ್ರಭ ವಾರ್ತೆ, ಶೃಂಗೇರಿ
ಆದಿಗುರು ಶ್ರೀ ಶಂಕರಭಗವತ್ಪಾದರು ಸ್ಥಾಪಿಸಿದ ಆಮ್ನಾಯ ಪೀಠಗಳಲ್ಲಿ ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಅಗ್ರಪೀಠ. ದೇಶದ ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಎದ್ದು ಕಾಣುವ ಹೆಸರು ಶೃಂಗೇರಿ ಪೀಠದ್ದು.ಶ್ರೀ ಶಂಕರರು ಶ್ರೀ ಶೈಲ ಪರ್ವತದಿಂದ ಶಿಷ್ಯ ಸಮೇತರಾಗಿ ಸಂಚರಿಸುತ್ತಾ ಶೃಂಗೇರಿಗೆ ಆಗಮಿಸಿ, ನಿಸರ್ಗ ರಮಣೀಯ ತುಂಗಾನದಿ ತೀರದಲ್ಲಿ ಬರುವಾಗ ಸುಡುಬಿಸಿಲಿನಲ್ಲಿ ಬಳಲುತ್ತಿದ್ದ ಕಪ್ಪೆಗೆ ಹಾವೊಂದು ನೆರಳು ನೀಡಿ ರಕ್ಷಿಸುತ್ತಿರು ವುದನ್ನು ಕಂಡ ಆಚಾರ್ಯರು ಪರಮವೈರಿಗಳಾದ ಹಾವು, ಕಪ್ಪೆ ಶತೃತ್ವ ಮರೆತು ಸ್ನೇಹಭಾವದಿಂದ ಇರುವ ಈ ಭೂಮಿ ಪವಿತ್ರವೆಂದು ಅರಿತು ತಾನು ಸ್ಥಾಪಿಸಲು ಉದ್ದೇಶಿಸಿದ್ದ ಆಮ್ನಾಯ ಪೀಠಗಳಲ್ಲಿ ಪ್ರಪ್ರಥಮ ಪೀಠ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಸ್ಥಾಪಿಸಿ ಶ್ರೀ ಶಾರದಾಂಬೆಯನ್ನು ಪ್ರತಿಷ್ಠಾಪಿಸಿದರು.
ತಮ್ಮ ಶಿಷ್ಯರಲ್ಲಿ ಒಬ್ಬರಾದ ಶ್ರೀ ಸುರೇಶ್ವರಾಚಾರ್ಯರನ್ನು ಮೊದಲ ಅಧಿಪತಿಯಾಗಿ ನೇಮಿಸಿದರು. ಇಲ್ಲಿಂದ ಆರಂಭಗೊಂಡ ಪೀಠದ ಅವಿಚ್ಛಿನ್ನ ಗುರು ಪರಂಪರೆ ಇಂದಿಗೂ ಮುಂದುವರಿಯುತ್ತಿದೆ.ಪೀಠದ 11ನೇ ಯತಿಗಳಾಗಿದ್ದ ಶ್ರೀ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣೀಕರ್ತರು. 14 ನೇ ಶತಮಾನ ದಲ್ಲಿ ಶೃಂಗೇರಿ ಧರ್ಮ ಸಂಸ್ಥಾನದ ಸಿಂಹಾಸನಧೀಶ್ವರಾಗಿದ್ದ ಶ್ರೀ ವಿದ್ಯಾರಣ್ಯರು ನವರಾತ್ರಿ ಆಚರಣೆಗೆ ಹೊಸ ಆಯಾಮ ನೀಡಿದರು. ವಿಜಯನಗರ ಸ್ಥಾಪಕ ಮೊದಲ ಚಕ್ರವರ್ತಿ ಒಂದನೇ ಹರಿಹರ ಶೃಂಗೇರಿಗೆ ಬಂದು ಜಗದ್ಗುರುಗಳನ್ನು ಭೇಟಿ ಮಾಡಿ ಪೀಠದಲ್ಲಿ ನಡೆಯುತ್ತಿದ್ದ ಧಾರ್ಮಿಕ, ಸಾಂಸ್ಕೃತಿಕ, ಉತ್ಸವಗಳು, ವಿದ್ಯಾದಾನ,ಅನ್ನದಾನ ನಿರಂತರವಾಗಿ ನಡೆಯುವಂತೆ ದಾನ ದತ್ತಿಗಳನ್ನು ನೀಡಿ, ಪೀಠಾಧಿಪತಿಗಳಿಗೆ ಚಿನ್ನದ ಕಿರೀಟ, ಛತ್ರಿ ಚಾಮರ, ಸ್ವರ್ಣ ಸಿಂಹಾಸನ, ಸ್ವರ್ಣ ಪಲ್ಲಕ್ಕಿ ಮೊದಲಾದ ಸಕಲ ರಾಜ ಲಾಂಚನಗಳನ್ನು ಕಾಣಿಕೆಯಾಗಿ ಸಲ್ಲಿಸಿದನು.
ಅಂದಿನಿಂದ ವಿಜಯ ನಗರ ಸಾಮ್ರಾಜ್ಯ ಆಳಿದ ಎಲ್ಲಾ ಮನೆತನಗಳು, ರಾಜರುಗಳು ಶೃಂಗೇರಿ ಪೀಠದ ಪರಂಪರೆ ಅನುಸರಿಸಿ, ಜಗದ್ಗುರುಗಳ ಆಶೀರ್ವಾದ ಪಡೆದು ರಾಜ್ಯಭಾರ ಮಾಡುತ್ತಿದರು. ಕೆಳದಿ,ಇಕ್ಕೇರಿ ನಾಯಕರು, ಮೈಸೂರು ಯದುವಂಶಸ್ಥರು, ಹೈದರಾಲಿ, ಟಿಪ್ಪುಸುಲ್ತಾನ್, ಬಿಜಾಪುರ ಆದಿಲ್ ಶಾಹಿಗಳು, ಮರಾಠರು, ಪೇಶ್ವೆಗಳು,ಬ್ರಿಟೀಷ್ ಅಧಿಕಾರಿಗಳು ಶೃಂಗೇರಿ ಪೀಠಕ್ಕೆ ಭಕ್ತರಾಗಿ ದಾನ ದತ್ತಿಗಳನ್ನು ಸಮರ್ಪಿಸಿದರು.ಅಲ್ಲದೇ ಗ್ವಾಲಿಯರ್, ಇಂದೋರ್, ಕಾಶಿ, ನೇಪಾಳ ಸೇರಿದಂತೆ ದೇಶ, ವಿದೇಶ ಸಂಸ್ಥಾನಗಳ ರಾಜಮಹಾರಾಜರು ಪೀಠಕ್ಕೆ ಅನನ್ಯ ಭಕ್ತಿ ತೋರಿ ಬೆಲೆಬಾಳುವ ಕಾಣಿಕೆಗಳನ್ನು ಸಮರ್ಪಿಸಿದರು. ಅಂದಿನಿಂದಲೂ ಇಂದಿನವರೆಗೂ ನಾಡಿನ ದೇಶದ ಆಳರಸರು, ರಾಜಮಹಾರಾಜರಿಂದ ಹಿಡಿದು ಪ್ರಧಾನಮಂತ್ರಿ, ರಾಷ್ಟ್ರಪತಿವರೆಗಿನ ಗಣ್ಯವ್ಯಕ್ತಿಗಳು ಶೃಂಗೇರಿ ಪೀಠದ ಮೇಲಿನ ಅನನ್ಯ ಭಕ್ತಿಯಿಂದ ಭೇಟಿ ನೀಡುತ್ತಿರುವುದು ಸಾಕ್ಷಿಯಾಗಿದೆ.
ವಿಜಯನಗರ ಕಾಲದಿಂದಲೂ ಶೃಂಗೇರಿಯಲ್ಲಿ ನಡೆಯುತ್ತಿರುವ ನವರಾತ್ರಿ ದರ್ಬಾರ್ ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂಪ್ರದಾಯಗಳನ್ನು ಮುಂದೆ ಮೈಸೂರು ಅರಸರು ಅನುಸರಿಸಿದರು ಎನ್ನಲಾಗುತ್ತಿದೆ. ಶೃಂಗೇರಿಯಲ್ಲಿ ನಡೆಯುವ ಉತ್ಸವ ಗಳಲ್ಲಿ ನವರಾತ್ರಿ ಉತ್ಸವ ಶಿಖರ ಪ್ರಾಯವಾದುದು. ನವರಾತ್ರಿಯ 9 ದಿನಗಳ ಕಾಲ ವಿಜೃಂಭಣೆಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ.ಈ 9 ದಿನಗಳ ಕಾಲ ಪೀಠದ ಅಧಿದೇವತೆ ಶಾರದೆಗೆ ವಿವಿಧ ಫಲಪುಷ್ಪ, ಮುತ್ತು, ಪಚ್ಚೆ, ರತ್ನ ಇತ್ಯಾದಿ ಆಭರಣಗಳಿಂದ ಅಲಂಕರಿಸಿ ನಾಲ್ಕು ವೇದಗಳ ಪಾರಾಯಣ, ವಿವಿಧ ಜಪಗಳು, ಯಾಗಗಳು ನಡೆಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
600 ವರ್ಷಗಳಿಂದ ದೇಶ ವಿದೇಶಗಳ ಸಂಸ್ಥಾನಗಳ ರಾಜಮಹಾರಾಜರು ಸಮರ್ಪಿಸಿದ್ದ ಸಕಲ ಆಭರಣಗಳನ್ನು ಶಾರದೆಗೆ ತೊಡಿಸಿ ಅಲಂಕರಿಸಿ ಪೂಜಿಸುವ ಪರಿಪಾಠ ಈ ಸಂದರ್ಭದಲ್ಲಿ ನಡೆಯುತ್ತದೆ. ದಿಂಡೀ ದೀಪಾರಾಧನೆ, ರಾಜಬೀದಿ ಉತ್ಸವಗಳು, ಜಗದ್ಗುರುಗಳ ಹಗಲು- ರಾತ್ರಿ ದರ್ಬಾರ್ ವಿಜಯನಗರ ವೈಭವವನ್ನೇ ನೆನಪಿಸುವಂತೆ ಮಾಡುತ್ತದೆ. ಶ್ರೀ ಶಾರದಾಂಬಾ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನವರಾತ್ರಿಯ ಸುಬಗನ್ನು ಇಮ್ಮಡಿ ಗೊಳಿಸುತ್ತದೆ.ವಿಜಯ ದಶಮಿಯಂದು ನಡೆಯುವ ಶಮೀ ಪೂಜೆ ವಿಜಯದ ಸಂಕೇತ. ವಿಜಯ ನಗರ ಸಾಮ್ರಾಜ್ಯ ಪ್ರತಿಷ್ಠಾಪನೆಗೆ ಕಾರಣರಾಗಿದ್ದ ಶ್ರೀ ವಿದ್ಯಾರಣ್ಯರು ಪೀಠವನ್ನು ಅಲಂಕರಿಸಿದಾಗ ವಿಜಯನಗರ ಅರಸರು ಈ ರಾಜ ಮರ್ಯಾದೆಗಳನ್ನು ಇಲ್ಲಿ ಸಮರ್ಪಿಸಿದರು. ಇಂದಿಗೂ ಈ ಆಚರಣೆ ನಡೆಯುತ್ತಾ ಬಂದಿದೆ. ಮಠವಾಗಿದ್ದ ಶ್ರೀ ಪೀಠ ಮಹಾಸಂಸ್ಥಾನವಾಗಿದ್ದು ಶ್ರೀ ವಿದ್ಯಾರಣ್ಯರ ಕಾಲದಲ್ಲಿಯೇ ಎಂಬುದು ಗಮನಾರ್ಹ.
ಕೇವಲ ಧಾರ್ಮಿಕ ಆಚರಣೆಗಳಲ್ಲದೇ ವೈಭವದ ಸಾಂಸ್ಕೃತಿಕ ಪರಂಪರೆ ಈ ದಸರಾ ವಿಶೇಷ. ವಿಜಯನಗರ ಅರಸರು ಸಂಗೀತ, ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ್ದ ಪ್ರಾಮುಖ್ಯತೆಯಂತೆ ಇಂದಿಗೂ ಕಲೆ, ಸಂಸ್ಕೃತಿಗೆ ಆದ್ಯತೆ ನೀಡಲಾಗುತ್ತಿದೆ. ದೇಶದ ಪ್ರಸಿದ್ದ ಕಲಾವಿದರು, ಸಂಗೀತಗಾರರಿಂದ ಸಂಗೀತ, ಹಾಡುಗಾರಿಕೆ ಸೇರಿದಂತೆ ವಿವಿಧ ಕಾರ್ಯಕ್ರಮ ನವರಾತ್ರಿಯ 9 ದಿನಗಳ ಕಾಲ ಮೇಳೈಸುತ್ತದೆ. ಮೈಸೂರಲ್ಲೂ ಇದೇ ಮಾದರಿಯಲ್ಲಿ ಆರಂಭಗೊಂಡ ದಸರಾ ಮುಂದೆ ಯದುವಂಶದ್ಥರಿಂದ ವಿಶ್ವವಿಖ್ಯಾತಿಗಳಿಸಿತು.600 ವರ್ಷಗಳ ಹಿಂದೆಯೇ ಯತಿ ಪರಂಪರೆಯಲ್ಲಿ ನಡೆದುಕೊಂಡು ಬಂದಿರುವ ಶೃಂಗೇರಿ ಪೀಠದ ವೈಭವಯುತ ದರ್ಬಾರ್ ವೀಕ್ಷಿಸಲು ದೇಶ, ವಿದೇಶಗಳ ನಾನಾ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ದಂಡೇ ಶೃಂಗೇರಿಗೆ ಬರುತ್ತದೆ. ಕನ್ನಡ ನಾಡಿನ ಹೆಮ್ಮೆಯ ಸಂಸ್ಕೃತಿಗೆ ಶಾರದಾಂಬೆ ಕ್ಷೇತ್ರದ ಪರಂಪರೆಯ ಬುನಾದಿ ಎದ್ದು ಕಾಣುತ್ತದೆ.27 ಶ್ರೀ ಚಿತ್ರ 1-ಶೃಂಗೇರಿಯಲ್ಲಿ ನಡೆಯುವ ಮಹಾರಥೋತ್ಸವ
27 ಶ್ರೀ ಚಿತ್ರ 2 ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ27-ಶ್ರೀ ಚಿತ್ರ 3-ಜಗದ್ಗುರುಗಳ ದಸರಾ ದರ್ಬಾರ್.