ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದೂ ಕೊಟ್ಟ ಮಾತು ತಪ್ಪುವವರಲ್ಲ. ಅವರು ಯಾರಿಗೆ ಯಾವ ಮಾತು ಕೊಟ್ಟಿದ್ದರೂ ಅದನ್ನು ಈಡೇರಿಸುತ್ತಾರೆ ಎಂದು ಮಾಜಿ ಸಂಸದ, ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾರ್ಮಿಕವಾಗಿ ಹೇಳಿದ್ದಾರೆ.
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದೂ ಕೊಟ್ಟ ಮಾತು ತಪ್ಪುವವರಲ್ಲ. ಅವರು ಯಾರಿಗೆ ಯಾವ ಮಾತು ಕೊಟ್ಟಿದ್ದರೂ ಅದನ್ನು ಈಡೇರಿಸುತ್ತಾರೆ ಎಂದು ಮಾಜಿ ಸಂಸದ, ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾರ್ಮಿಕವಾಗಿ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜನರ ಆಶೀರ್ವಾದದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಸಿದ್ದರಾಮಯ್ಯ ಅವರು ಕರ್ನಾಟಕ ಜನರಿಗೆ ಕೊಟ್ಟ ಎಲ್ಲ ಭರವಸೆಯನ್ನೂ ಈಡೇರಿಸಿದ್ದಾರೆ. ಅವರು ಕೊಟ್ಟ ಮಾತು ತಪ್ಪುವವರಲ್ಲ. ಯಾರಿಗೇ ಮಾತು ಕೊಟ್ಟರೂ ಅದರಲ್ಲಿ ತಪ್ಪುವುದಿಲ್ಲ. ಈ ಸರ್ಕಾರದಲ್ಲೂ ಅವರು ಯಾರಿಗೆ ಯಾವ ಮಾತು ನೀಡಿದ್ದಾರೋ ಅದರಂತೆ ನಡೆಯುತ್ತಿದ್ದಾರೆ ಎಂದರು.
ಅಧಿಕಾರ ಹಸ್ತಾಂತರ ಚರ್ಚಿಸಿಲ್ಲ:
ಅಧಿಕಾರ ಹಸ್ತಾಂತರ ಕುರಿತು ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ ಬಳಿ ಅಧಿಕಾರ ಹಸ್ತಾಂತರ ವಿಚಾರ ಚರ್ಚೆ ಮಾಡಿಲ್ಲ ಮತ್ತು ಚರ್ಚೆ ಮಾಡುವಷ್ಟು ದೊಡ್ಡವನೂ ನಾನಲ್ಲ. ಅವರಿಗೆ ಅವರದ್ದೇ ಆದ ಜವಾಬ್ದಾರಿಯಿದೆ. ಕರ್ನಾಟಕ ಜನರಿಗೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ್ದಾರೆ. ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಪವರ್‌ಶೇರಿಂಗ್ ವಿಚಾರದಲ್ಲೂ ಕೊಟ್ಟ ಮಾತಿನಂತೆ ನಡೆಯುತ್ತಾರಾ ಎಂಬ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲದ ವಿಚಾರ. ಸಿದ್ದರಾಮಯ್ಯ ಈಗ ನಮ್ಮ ಮುಖ್ಯಮಂತ್ರಿ. ಶಾಸಕರ ಬೆಂಬಲದಿಂದ ಆಡಳಿತ ನಡೆಸುತ್ತಿದ್ದಾರೆ. ನನ್ನಣ್ಣನಿಗೆ ಅದೃಷ್ಟವಿದ್ದರೆ, ಅವರು ಮುಖ್ಯಮಂತ್ರಿ ಆಗುತ್ತಾರೆ. ಎಲ್ಲವನ್ನೂ ವರಿಷ್ಠರು ನಿರ್ಧರಿಸುತ್ತಾರೆ. ನಾವು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವವರು. ಪಕ್ಷ ಏನು ಹೇಳುತ್ತದೆಯೋ ಅದನ್ನು ಸಿಎಂ ಮತ್ತು ಡಿಸಿಎಂ ಸೇರಿ ಎಲ್ಲ ನಾಯಕರು ಪಾಲನೆ ಮಾಡುತ್ತಾರೆ. ಅದು ನಮ್ಮ, ನಿಮ್ಮ ಮುಂದೆ ನಡೆಯುವ ಚರ್ಚೆಯಲ್ಲ. ಸದ್ಯಕ್ಕೆ ಸಿಎಂ ಹುದ್ದೆ ಖಾಲಿಯಿಲ್ಲ ಎಂದು ತಿಳಿಸಿದರು.
ಪಕ್ಷದ ಕೆಲಸ ಮಾಡ್ತಿದ್ದಾರೆ:
ಡಿ.ಕೆ.ಶಿವಕುಮಾರ್ ಅವರು ಪಕ್ಷದ ಕೆಲಸ ಮಾಡುತ್ತಿದ್ದಾರೆ. ನಾಳೆ ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ, ಯಾರೇ ಅಧ್ಯಕ್ಷರಾದರೂ ಅವರಿಗೆ ಅವಕಾಶ ಮಾಡಿಕೊಡಲು ಶಿವಕುಮಾರ್ ಸಿದ್ಧರಿದ್ದಾರೆ. ಇನ್ನು, ಕೆಪಿಸಿಸಿ ಅಧ್ಯಕ್ಷರಾಗಿ ದಾಖಲೆ ಬರೆಯುವ ಇಚ್ಛೆ ಶಿವಕುಮಾರ್ ಅವರಿಗಿಲ್ಲ. ರಾಜಕಾರಣದಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ ಜನರಿಗೇ ಆಗಲಿ, ಬೇರೆಯವರಿಗೇ ಆಗಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಅದರಂತೆ ಕೆಲಸ ಮಾಡುತ್ತಿದ್ದಾರೆ ಎಂದರು.
ಶ್ರಮಕ್ಕೆ ಫಲ ಸಿಗುತ್ತದೆ:
ಡಿ.ಕೆ.ಶಿವಕುಮಾರ್ ಅವರ ಪ್ರಯತ್ನದ ಪ್ರತಿಫಲವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಶಿವಕುಮಾರ್ ಅವರ ಶ್ರಮಕ್ಕೆ ಒಂದಲ್ಲಾ ಒಂದು ದಿನ ಫಲ ಸಿಕ್ಕೇ ಸಿಗುತ್ತದೆ. ಕಾದು ನೋಡಬೇಕು. ಈಗಲೇ ಸಿಗುತ್ತದೆಯೇ ನನಗೆ ಗೊತ್ತಿಲ್ಲ. ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಶ್ರಮ ಹಾಕಿದ್ದಾರೆ. ಪ್ರತಿಯೊಬ್ಬರದ್ದೂ ಒಂದೊಂದು ರೀತಿ ಆಸೆ ಇರುತ್ತದೆ. ಎಲ್ಲದಕ್ಕಿಂತ ಉತ್ತಮ ಆಡಳಿತ ನೀಡುವುದು ಮುಖ್ಯ ಎಂದು ಡಿ.ಕೆ.ಸುರೇಶ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟರೆ ಡಿ.ಕೆ. ಶಿವಕುಮಾರ್ ಮೂಲೆಗುಂಪಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ಯಾರ ಹಣೆಯಲ್ಲಿ ಏನು ಬರೆದಿದೆಯೋ ಅದು ಆಗುತ್ತದೆ. ಬೇರೆ ಏನೂ ಮಾಡಲು ಸಾಧ್ಯವಿಲ್ಲ. ರೇವಂತ್ ರೆಡ್ಡಿ ಅವರು ಪಕ್ಷಕ್ಕೆ ಬಂದ ಮೂರೇ ವರ್ಷದಲ್ಲಿ ತೆಲಂಗಾಣ ಸಿಎಂ ಆದರು. ಗುಜರಾತ್, ಹರಿಯಾಣದಲ್ಲಿ ಮೊದಲ ಬಾರಿ ಶಾಸಕರಾದವರು ಸಿಎಂ ಆಗಿದ್ದಾರೆ. ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ. ಎಲ್ಲವೂ ಭರವಸೆ ಮೇಲೆ ನಡೆಯಲಿದೆ ಎಂದರು.
ಎರಡೂವರೆ ವರ್ಷದ ಹಿಂದಿನ ಮಾತಿಗೆ ನೀವು ಸಾಕ್ಷಿಯಾಗಿದ್ದೀರಿ ಎಂಬ ಮಾತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಎಲ್ಲದಕ್ಕೂ ಸಾಕ್ಷಿಯಾಗಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಇನ್ನು, ನಾಲ್ಕು ಗೋಡೆಗಳ ಮಧ್ಯೆ ತೆಗೆದುಕೊಂಡ ತೀರ್ಮಾನ ಬಹಿರಂಗವಾಗಿ ಹೇಳಲಾಗದು ಎಂದು ತಿಳಿಸಿದರು.
ಹೈಕಮಾಂಡ್ ಸ್ಪಷ್ಟ ನಿಲುವು ತಿಳಿಸುತ್ತಿಲ್ಲವೇಕೆ ಎಂದು ಕೇಳಿದಾಗ ಉತ್ತರಿಸಿ, ಹೈಕಮಾಂಡ್ ನಾಯಕರಿಗೆ ಕೇವಲ ಕರ್ನಾಟಕ ವಿಚಾರ ಮಾತ್ರವಿಲ್ಲ. ಅನೇಕ ವಿಚಾರಗಳನ್ನು ಅವರು ಗಮನಿಸುತ್ತಿರುತ್ತಾರೆ. ಬಿಹಾರ ಸೋಲಿನ ಪರಾಮರ್ಶೆ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಗಳು, ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್, ಪಕ್ಷ ಸಂಘಟನೆ, ಹೋರಾಟ ಸೇರಿ ಹಲವು ವಿಚಾರಗಳ ಬಗ್ಗೆ ಗಮನಹರಿಸಬೇಕು. ಅವರು ಎಲ್ಲವನ್ನೂ ಸ್ಪಷ್ಟಪಡಿಸುತ್ತಾರೆ. ಇನ್ನು, ನಾಯಕತ್ವ ಬದಲಾವಣೆ ವಿಚಾರ ಬಂದಾಗ ಶಾಸಕರ ಅಭಿಪ್ರಾಯ ಮುಖ್ಯವಾಗುತ್ತದೆ. ಆದರೆ, ಈಗ ಆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
;Resize=(690,390))
)
)


;Resize=(128,128))
;Resize=(128,128))
;Resize=(128,128))
;Resize=(128,128))