ಕನ್ನಡಪ್ರಭ ವಾರ್ತೆ, ಶೃಂಗೇರಿ
ಮಂಗಳೂರು ಸೊಲ್ಲಾಪುರ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ರ ಶೃಂಗೇರಿ ನೆಮ್ಮಾರು ತನಿಕೋಡುವರೆಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಹೆದ್ದಾರಿ ಅಗಲೀಕರಣ, ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಇತ್ತ ಕಾಮಗಾರಿಯೂ ಪೂರ್ಣವಾಗದೇ, ಅತ್ತ ಜನ, ವಾಹನ ಸಂಚಾರಕ್ಕೂ ಸುಗಮವಾಗಿರದೇ ಅವ್ಯವಸ್ಥೆಗಳ ಅಗರವಾಗಿದೆ. ಹೊಂಡಗುಡಿಂಗಳಲ್ಲಿ ವಾಹನಗಳು ಬಿದ್ದು, ಮರಗಳು ಉರುಳಿಬಿದ್ದು, ಸುರಕ್ಷತೆಯಿಲ್ಲದೇ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದ ಕಾರ್ಮಿಕರು ಬಲಿಯಾಗುತ್ತಿರುವ ದುರ್ಘಟನೆಗಳು ಸಂಭವಿಸುತ್ತೇವೆ,ಅಲ್ಲಲ್ಲಿ ಡ್ರೈನೇಜ್‌ಗಾಗಿ ಹೊಂಡಗಳನ್ನು ತೆಗೆಯುತ್ತಿದ್ದು, ಎಲ್ಲೆಡೆ ಮಣ್ಣಿನ ರಾಶಿಗಳನ್ನು ಹಾಕುತ್ತಿದ್ದು ಇಡೀ ಪ್ರದೇಶವೇ ದೂಳು ಮಯವಾಗುತ್ತಿದೆ. ಮಳೆ ಬಂದರೆ ಕೆಸರುತುಂಬಿ, ನಿಯಂತ್ರಣ ತಪ್ಪಿದ ವಾಹನಗಳು ಉರುಳಿ ಬಿದ್ದು ಅವಘಡಗಳು ಸಂಭವಿಸುತ್ತಿವೆ. ಡ್ರೈನೇಜ್‌ಗಾಗಿ ರಸ್ತೆಯ ಎರಡು ಕಡೆಗಳಲ್ಲಿ ಹೊಂಡ ತೆಗೆದಿದ್ದರೂ ಕೆಲವೆಡೆ ತಡೆಗೋಡೆ ಮಾಡಿದರೆ, ಇನ್ನು ಕೆಲವೆಡೆ ಹಾಗೇಯೇ ಬಿಟ್ಟರುವುದರಿಂದ ತೊಂದರೆಯಾಗುತ್ತಿದೆ. ಮರಗಳು ಇದ್ದಲ್ಲಿ ಮರಗಳನ್ನು ತೆರವು ಮಾಡದೇ ಅದರಡಿಯೇ ಜೆಸಿಬಿಯಿಂದ ಅವೈಜ್ಞಾನಿಕವಾಗಿ ಹೊಂಡ ತೋಡುತ್ತಿರುವುದರಿಂದ ಮರಗಳು ಉರುಳುವ ಅಪಾಯ ಉಂಟಾಗುತ್ತಿದೆ. ಇನ್ನು ರಸ್ತೆಯಲ್ಲಿಯೇ ಲೋಡುಗಟ್ಟಲೇ ಮಣ್ಣು, ಕಿತ್ತುಹಾಕಿದ ಡಾಂಬರು ರಾಶಿಯಿಂದ ಮಣ್ಣು, ದೂಳು, ಕೆಸರಿನಿಂದ ವಾಹನಗಳಿಗೆ, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಗುಡ್ಡದ ಪಕ್ಕದಲ್ಲಿ ಇರುವ ಮನೆಗಳ ಬಳಿಯೂ ಮಣ್ಣು ತೆಗೆಯುತ್ತಿರುವುದರಿಂದ ಗುಡ್ಡ ಕುಸಿದು ಮನೆಗಳು ಕುಸಿಯುವ ಭೀತಿಯಿದೆ. ಎಲ್ಲೆಡೆ ಜೆಸಿಬಿ ಬಳಸಿ ಕೇವಲ ಹೊಂಡಗುಂಡಿಗಳನ್ನು ತೆಗೆಯುತ್ತಿರುವುದು, ಗುಡ್ಡ ಕೊರೆಯುತ್ತಿರುವುದು, ಪರಿಪೂರ್ಣವಾಗಿ ಒಂದೂ ಕಡೆಯೂ ಕಾಮಗಾರಿ ಪೂರ್ಣಗೊಳಿಸದೇ ಇರುವುದರಿಂದ ಇವರ ಕಳಪೆ, ಅವೈಜ್ಞಾನಿಕ ಕಾಮಗಾರಿಗಳಿಗೆ ಜನರು ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ.ಇನ್ನು ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಯಾವುದೇ ರೀತಿಯ ಸುರಕ್ಷತೆಯಿಲ್ಲ. ಅಪಾಯದಂಚಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೆಲ್ಮೆಟ್ ಆಗಲಿ, ಸೇಫ್ಟಿಶೂ, ಜಾಕೇಟ್ ಗಳಾಗಲಿ ಯಾವುದೇ ರೀತಿಯ ಸುರಕ್ಷತೆಯಿಲ್ಲ. ಅಭದ್ರತೆಯ ನಡುವೆ ಕೆಲಸ ಮಾಡಬೇಕಿದೆ. ತನಿಕೋಡು ಬಳಿ ಜೆಸಿಬಿಯಿಂದ ಗುಡ್ಡ ತೆರವು ಮಾಡುತ್ತಿದ್ದಾಗ ಮಣ್ಣುಕುಸಿದು ಕಾರ್ಮಿಕನೊಬ್ಬ ಮೃತಪಟ್ಟ ದಾರುಣ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ.ನಮ್ಮಾರಿನಿಂದ ತನಿಕೋಡಿನವರೆಗೆ ರಸ್ತೆಯುದ್ದಕ್ಕೂ ಮಣ್ಣುಗಳ ರಾಶಿ, ಹೊಂಡಗುಂಡಿಗಳು ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿರುವುದರಿಂದ ಮಳೆ ಬಂದಾಗಲೆಲ್ಲ ಬಹಳಷ್ಟು ಅಪಾಯವಾಗುತ್ತಿದೆ.ಇದು ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಲ್ಲಿರುವ ಹೊಂಡಗುಡಿಗಳು, ಮಣ್ಣಿನ ರಾಶಿಯಿಂದ, ಪೂರ್ಣಗೊಳ್ಳದ ಡ್ರೈನೇಜ್‌ಗಳಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಶೃಂಗೇರಿ ಬಳಿ ಕಳೆದೆರೆಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಈಗ ನೆಮ್ಮಾರು ತನಿ ಕೋಡುವರೆಗಿನ ರಸ್ತೆ ಕಾಮಗಾರಿಯೂ ಅವೈಜ್ಞಾನಿಕವಾಗಿ ನಡೆಯುತ್ತಿರುವುದರಿಂದ ಮಳೆಗಾಲಕ್ಕೂ ಮೊದಲು ಪೂರ್ಣ ಗೊಳ್ಳದಿದ್ದರೆ ಸರಣಿ ಅವಘಡಗಳೇ ನಡೆಯುವುದರಲ್ಲಿ ಸಂಶಯವಿಲ್ಲ. ಒಂದೆಡೆಯಿಂದ ಪೂರ್ಣ ವ್ಯವಸ್ಥಿತವಾಗಿ ಕಾಮಗಾರಿ ಆರಂಬಿಸಿದರೆ ಅನುಕೂಲ. ಇನ್ನಾದರೂ ಹೆದ್ದಾರಿ ಇಲಾಖೆ ಗುತ್ತಿಗೆದಾರರು ಅವೈಜ್ಞಾನಿಕತೆ ಬಿಟ್ಟು, ವ್ಯವಸ್ಥಿತವಾಗಿ ಕಾಮಗಾರಿ ಚುರುಕುಗೊಳಿಸಿ ಜನರಿಗೆ ಆಗುತ್ತಿರುವ ತೊಂದರೆ, ಜೀವಬಲಿಗಳನ್ನು ತಪ್ಪಿಸಲು ಮುಂದಾಗಬೇಕಿದೆ.20 ಶ್ರೀ ಚಿತ್ರ 1-ಶೃಂಗೇರಿ ರಾಷ್ಟ್ರೀಯ ಹೆದ್ದಾರಿ ನೆಮ್ಮಾರು ಬಳಿ ಹೆದ್ದಾರಿ ಅಭಿವೃದ್ದಿ ಕಾಮಗಾರಿಯಗುತ್ತಿರುವುದು.20 ಶ್ರೀ ಚಿತ್ರ 2-
ಮನೆಗಳಿರುವ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಗುಡ್ಡತೆರವುಗೊಳಿಸುತ್ತಿರುವುದು.