ಕನಕಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಕಲ್ಲಹಳ್ಳಿ ವೆಂಕಟರಮಣಸ್ವಾಮಿ ದೇವರ ಬ್ರಹ್ಮರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಸಂಭ್ರಮ, ಸಡಗರದಿಂದ ಜರುಗಿತು.
ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ದೇವರಿಗೆ ಅಭಿಷೇಕ, ಹೋಮ, ವಿಶೇಷ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಿಸಿ, ಮಧ್ಯಾಹ 1 ಗಂಟೆ ವೇಳೆಗೆ ಭವ್ಯವಾದ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಕೂರಿಸಿ ದೇವಾಲಯದ ಸುತ್ತಲೂ ಮೆರವಣಿಗೆ ನಡೆಸಲಾಯಿತು.
ರಥೋತ್ಸವಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಕುಡಿಯಲು ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಜಾತ್ರಾ ಮಹೋತ್ಸವ ಅಂಗವಾಗಿ ರಾತ್ರಿ ಏರ್ಪಡಿಸಿದ್ದ ಬಾಣ ಬಿರಸುಗಳ ಮದ್ದು-ಗುಂಡು ಸಾರ್ವಜನಿಕರ ಗಮನ ಸೆಳೆಯಿತು.