ಜೀವನದ ಪರೀಕ್ಷೆಗೆ ಪಠ್ಯೇತರ ಶಿಕ್ಷಣವೇ ಶ್ರೀರಕ್ಷೆ

KannadaprabhaNewsNetwork | Published : Jun 1, 2024 12:45 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿಶಾಲಾ ಕಾಲೇಜುಗಳ ಪಠ್ಯವು ಕೇವಲ ಅಂಕಗಳನ್ನು ಮಾತ್ರ ನೀಡುತ್ತದೆ. ಜೀವನದಲ್ಲಿ ಎದುರಾಗುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಬಹಿರಂಗ (ಲೀಕ್) ಆಗುವುದಿಲ್ಲ. ಆದರೆ, ಜೀವನದ ಆ ಪರೀಕ್ಷೆಗಳಿಗೆ ಶಾಲಾ ಕಾಲೇಜುಗಳ ಪಠ್ಯೇತರ ಶಿಕ್ಷಣವೇ ಶ್ರೀರಕ್ಷೆಯಾಗಿದೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಶಾಲಾ ಕಾಲೇಜುಗಳ ಪಠ್ಯವು ಕೇವಲ ಅಂಕಗಳನ್ನು ಮಾತ್ರ ನೀಡುತ್ತದೆ. ಜೀವನದಲ್ಲಿ ಎದುರಾಗುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಬಹಿರಂಗ (ಲೀಕ್) ಆಗುವುದಿಲ್ಲ. ಆದರೆ, ಜೀವನದ ಆ ಪರೀಕ್ಷೆಗಳಿಗೆ ಶಾಲಾ ಕಾಲೇಜುಗಳ ಪಠ್ಯೇತರ ಶಿಕ್ಷಣವೇ ಶ್ರೀರಕ್ಷೆಯಾಗಿದೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗ, ಶೇಖ್ ಶಿಕ್ಷಣ ಸಂಸ್ಥೆಯ ಬಿಎಡ್. ಕಾಲೇಜು ಮತ್ತು ಆರ್‌ಸಿಯು ಬಿಎಡ್. ಕಾಲೇಜು ಶಿಕ್ಷಕರ ಒಕ್ಕೂಟದ ಸಹಯೋಗದಲ್ಲಿ ಶುಕ್ರವಾರ ನಗರದ ಶೇಖ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷೇನ್‌ನ ಬಿಎಡ್‌ ಕಾಲೇಜಿನಲ್ಲಿ ಜರುಗಿದ ನ್ಯಾವಿಗೇಷನ್ ಆಫ್ ಟೀಚರ್ ಎಜ್ಯುಕೇಷನ್ ಟುವರ್ಡ್ಸ್ ಹೈಯರ್ ಸ್ಟಾಂಡರ್ಸ್‌ ಬಿಎಡ್ ಪದವಿಯ ಪಠ್ಯಕ್ರಮದ ಸ್ವರೂಪ ರಚನೆಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲಾ ಕಾಲೇಜುಗಳ ಸಂದರ್ಭದಲ್ಲಿ ಶಿಕ್ಷಕರು ಪಠ್ಯದ ಜೊತೆಗೆ ಅನೇಕ ಪಠ್ಯೇತರ ಚಟುವಟಿಕೆಗಳಾದ ನಾಟಕ. ಕವಿತೆ, ಕಥೆ, ಪರಿಸರ, ಜಾತ್ರೆ ಈ ಸಂಗತಿಗಳ ಕುರಿತಾಗಿ ಕೂಡಾ ತಿಳಿಸುತ್ತಿದ್ದರು. ಆ ಸಂಗತಿಗಳೆ ಆಗಿನ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಳ್ಳಲು ಬಹು ದೊಡ್ಡ ಆಸರೆಯಾಗಿತ್ತು. ಆದರೆ, ಇಂದು ಅಂಕ ಗಳಿಕೆ ಹಿಂದೆ ಬಿದ್ದ ಪರಿಣಾಮ ಕೇವಲ ಪಠ್ಯ ಶಿಕ್ಷಣ ವಿದ್ಯಾರ್ಥಿಗಳಿಗೆ ಲಭಿಸುತ್ತಿದೆ. ಈ ಕಾರಣದಿಂದ ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಗೆ ಕುಂದು ತರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ನೂರಾರು ಬಾಹ್ಯ ಆಕರ್ಷಣೆ ಮತ್ತು ಚಂಚಲತೆ ಹುಟ್ಟುವ ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳು ಸುತ್ತ್ತವರೆದಿರುವ ಈ ಸಂದರ್ಭದಲ್ಲಿ ಅವರಿಗೆ ಶಿಕ್ಷಣದ ಮೇಲೆ ಮನಸ್ಸು ಕೇಂದ್ರಿಕೃತವಾಗುಲು ಬಹಳ ಶ್ರಮವಹಿಸುತ್ತಿರುವಿರಿ. ಶಿಕ್ಷಕ ವೃತ್ತಿ ಆಯ್ದುಗೊಂಡು ಸಮಾಜದ ರಚನಾತ್ಮಕ ಬೆಳವಣಿಗೆಯಲ್ಲಿ ತೊಡಿಸಿಕೊಂಡ ಪ್ರತಿಯೊಬ್ಬ ಶಿಕ್ಷಕರ ಈ ಸಾಹಸವು ಶ್ಲಾಘನೀಯ ಎಂದರು.

ಯುವ ಸಾಹಿತಿಗಳಿಗೆ ಟಿಪ್ಸ್: ಯುವ ಬರಹಗಾರರು ಮತ್ತು ಸಾಹಿತಿಗಳು ಕಥೆಕವನದ ಬಗ್ಗೆ ಬರಹದ ಬಗ್ಗೆ ಪ್ರಶ್ನೆ ಕೇಳುತ್ತಿರುತ್ತಾರೆ. ಜಗದಲ್ಲಿ ನಮ್ಮ ಜೀವನದ ಪ್ರತಿಕ್ಷಣವನ್ನು ಸಂಭ್ರಮಿಸಬೇಕು. ನಮ್ಮ ಜೀವನ ಮರೆತು ಹೋದಾಗ ಮಾತ್ರ ಅನೇಕ ಕಥೆ ಕವನಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಮೊಬೈಲ್‌ದಿಂದ ದೂರವಾಗಿ ನಾವು ಬದುಕಿನ ಕ್ಷಣಗಳನ್ನು ಆಹ್ಲಾದಿಸಿದಾಗ ಕವಿತೆಗಳು ಹುಟ್ಟುತ್ತವೆ ಎಂದು ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ ಯುವ ಬರಹಗಾರರಿಗೆ ಸಾಹಿತ್ಯ ರಚನೆಯ ಟಿಪ್ಸ್‌ನ್ನು ಜಯಂತ ಕಾಯ್ಕಿಣಿ ನೀಡಿದರು.ರಾಚವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರ ಕಾರ್ಯವಾಗಿತ್ತು. ನಾಲ್ಕೈದು ದಶಕಗಳ ಹಿಂದಿನ ಶಿಕ್ಷಕರು ವಿದ್ಯಾರ್ಥಿ ಮತ್ತು ಸಮಾಜದ ರಚನಾತ್ಮಕ ಬೆಳವಣಿಗೆ ಬಗ್ಗೆ ಸದಾಚಿಂತನೆ ನಡೆಸುತ್ತಿದ್ದರು. ಆದರೆ, ಇಂದು ಶಿಕ್ಷಕರ ಮಧ್ಯೆ ಗುಂಪುಗಾರಿಕೆ ಏರ್ಪಟ್ಟು ಜಾತಿ, ಅಂತಸ್ತು, ಹಣಗಳಿಕೆ ಈ ಎಲ್ಲ ಬಗೆಯ ಕೂಡಾ ಬಗೆಯ ವಿಘಟನಾತ್ಮಕ ಸಂಗತಿಗಳ ಚರ್ಚೆಗಳು ಸಾಮಾನ್ಯವಾಗಿ ಜರಗುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಖೇಧ ವ್ಯಕ್ತಪಡಿಸಿದರು.

ಶಿಕ್ಷಕರು ತಮ್ಮ ಭವಿಷ್ಯ ಮತ್ತು ಕನಸುಗಳಿಗಿಂತ ಮೊದಲು ವಿದ್ಯಾರ್ಥಿಗಳ ಭವಿಷ್ಯ ಮತ್ತು ಕನಸುಗಳ ಸಾಕಾರಕ್ಕಾಗಿ ಶ್ರಮವಹಿಸಬೇಕು. ವಿದ್ಯಾರ್ಥಿಗಳ ಉನ್ನತಿಯೆ ಶಿಕ್ಷಕ ತನ್ನ ಉನ್ನತಿ ಎಂದು ಸಂಕಲ್ಪ ತೊಟ್ಟಾಗ ಮಾತ್ರ ಶಿಕ್ಷಕರ ಬದುಕು ಸಾರ್ಥಕವಾಗುತ್ತದೆ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ನವದೆಹಲಿಯ ಪ್ರೊ.ಸುಭಾಂಶು ಭೂಷಣ, ಕುಲಸಚಿವೆ ರಾಜಶ್ರೀ ಜೈನಾಪೂರ, ಹಣಕಾಸು ಅಧಿಕಾರಿ ಪ್ರೊ.ಎಸ್.ಬಿ.ಆಕಾಶ, ಡಾ. ಬಿ.ಬಿ. ಪೊಲೀಸ್‌ಪಾಟೀಲ, ಶೇಖ್ ಬಿಎಡ್.ಕಾಲೇಜಿನ ಪ್ರಾಚಾರ್ಯೆ ಇಂದಿರಾ ಸುತಾರ, ಎಸ್‌ಇಪಿ ಸದಸ್ಯ ಕಾರ್ಯದರ್ಶಿ ಡಾ.ಭಾಗ್ಯವಾನ ಮುದಿಗೌಡರ, ಪ್ರೊ. ಎಂ.ಜಿ. ಹೆಗಡೆ ಹಾಜರಿದ್ದರು. ರಾಚವಿ ವ್ಯಾಪ್ತಿಯ ವಿವಿಧ ಬಿಎಡ್ ಕಾಲೇಜುಗಳ ಇನ್ನೂರುಕ್ಕೂ ಹೆಚ್ಚು ಅಧ್ಯಾಪಕರು ಹಾಜರಿದ್ದರು. ಪ್ರೊ. ಶ್ರೀಕಂಠಸ್ವಾಮಿ. ಎಸ್, ಪ್ರೊ.ಟಿ.ಎನ್. ರಾಜು, ಡಾ.ಸೋಮಶೇಖರ. ಟಿ.ವಿ, ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ. ಎರಿಸ್ವಾಮಿ ಎಂ.ಸಿ ಪರಿಚಯಿಸಿದರು. ಡಾ.ಸುಷ್ಮಾ. ಆರ್ ನಿರೂಪಿಸಿದರು. ಡಾ. ಕನಕಪ್ಪ ಪೂಜಾರ ವಂದಿಸಿದರು.ಕೋಟ್‌....ಸಾಮಾನ್ಯ ಜನರು ಮಾತ್ರ ಈ ಸಮಾಜದಲ್ಲಿ ಕಳಕಳಿ ಮತ್ತು ಅಂತಃಕರಣ ಹೊಂದಿದ್ದಾರೆ. ಪರಸ್ಪರ ಸಹಾಯ ಮತ್ತು ಬೆಂಬಲ ನೀಡುವ ಮೂಲಕ ಸಾಮಾನ್ಯ ಜನರು ಇತರರಿಗೆ ಮಾದರಿಯಾಗಿದ್ದಾರೆ. ಹಲವಾರು ಜನರ ಸಹಾಯ, ಬೆಂಬಲ ಮತ್ತು ಸಹಕಾರದ ಫಲದಿಂದ ನಮ್ಮೆಲ್ಲರ ಬದುಕು ಮತ್ತು ಸಮಾಜ ಸಾಗುತ್ತಿದೆ. ಆ ಎಲ್ಲ ಸಾಮಾಜಿಕ ಋಣದ ಬಗ್ಗೆ ಅರಿವಿರಬೇಕು. ನಾವು ಕೃತಜ್ಞರಾಗದೆ ಸಾಮಾಜಿಕ ಋಣದ ಮಹತ್ವ ಅರಿತು ಅದನ್ನು ಮರಳಿಸುವ ಕಾರ್ಯದಲ್ಲಿ ಸದಾತೊಡಗಬೇಕು.-ಜಯಂತ ಕಾಯ್ಕಿಣಿ, ಸಾಹಿತಿ.

Share this article