ಶ್ರೀರಕ್ಷಾ,ಶ್ರೇಯಾ, ಅನುಶ್ರೀ ಜಿಲ್ಲೆಗೆ ಪ್ರಥಮ

KannadaprabhaNewsNetwork | Published : May 3, 2025 12:19 AM

ಸಾರಾಂಶ

ಮೊದಲ ಮೂರು ಸ್ಥಾನದಲ್ಲಿರುವ ಎಂಟು ಅಭ್ಯರ್ಥಿಗಳು ವಿದ್ಯಾರ್ಥಿನಿಯರೇ..!

ಧಾರವಾಡ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ ವಿವಿಧ ಶಾಲಾ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.ವಿಶೇಷ ಎಂದರೆ,ಮೊದಲ ಮೂರು ಸ್ಥಾನದಲ್ಲಿರುವ ಎಂಟು ಅಭ್ಯರ್ಥಿಗಳು ವಿದ್ಯಾರ್ಥಿನಿಯರೇ..!

ಇಲ್ಲಿಯ ಕೆ.ಇ.ಬೋರ್ಡ್‌ ಸಂಸ್ಥೆಯ ಕೆ.ಎನ್‌.ಕೆ. ಪ್ರೌಢಶಾಲೆಯ ಶ್ರಿರಕ್ಷಾ ಹಾವೇರಿ, ಅದೇ ಸಂಸ್ಥೆಯ ಕೆಇಬೋರ್ಡ್‌ ಇಂಗ್ಲೀಷ ಮಾಧ್ಯಮ ಹೈಸ್ಕೂಲ್‌ನ ಅನುಶ್ರೀ ರಾಘವೇಂದ್ರ ಕಾತಕಿ ಹಾಗೂ ಹುಬ್ಬಳ್ಳಿಯ ನಿರ್ಮಲಾ ಠಕ್ಕರ ಇಂಗ್ಲೀಷ ಮಾಧ್ಯಮ ಶಾಲೆಯ ಶ್ರೇಯಾ ಹೊಸೂರ 625 ಅಂಕಗಳಿಗೆ 623 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಮೂವರು ರಾಜ್ಯಕ್ಕೆ ಮೂರನೇ ಸ್ಥಾನ ಸಹ ಗಳಿಸಿದ್ದಾರೆ. ಈ ಪೈಕಿ ಶ್ರೀ ರಕ್ಷಾ ರೈತನ ಮಗಳಾಗಿದ್ದು ಬಡ ಕುಟುಂಬದಿಂದ ಬಂದವಳು ಎನ್ನುವುದು ವಿಶೇಷ.

ಇನ್ನು ಸಾಧನಕೇರಿಯ ಆದರ್ಶ ವಿದ್ಯಾಲಯದ ರಾಜೇಶ್ವರಿ ಮಂಜುನಾಥ ಹಡಪದ (ಪ್ರಥಮ ಭಾಷೆ ಇಂಗ್ಲೀಷಗೆ 125ಕ್ಕೆ 122 ಅಂಕ ಹೊರತು ಪಡಿಸಿ ಉಳಿದೆಲ್ಲ ವಿಷಯಗಳಿಗೆ 100ಕ್ಕೆ 100 ಅಂಕ), ಹುಬ್ಬಳ್ಳಿ ಕಾರವಾರ ರಸ್ತೆಯ ಸಿದ್ಧಾರೂಢ ನಗರದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯ ಶ್ರೀಯಾ ದೇವೇಂದ್ರ ಹಾಗೂ ಹುಬ್ಬಳ್ಳಿಯ ವಿದ್ಯಾರಣ್ಯ ಹೈಸ್ಕೂಲ್‌ನ ಗೌತಮಿ ಪಂಚಾಕ್ಷರಿ 622 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೆಯೇ ಧಾರವಾಡದ ಮಲ್ಲಸಜ್ಜನ ಇಂಗ್ಲೀಷ ಮಾಧ್ಯಮ ಶಾಲೆಯ ಶ್ರೇಯಾ ಬಸವರಾಜ ಕುರಿಯವರ 621 ಅಂಕ ಪಡೆಯುವ ಮೂಲಕ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.

ಹುಬ್ಬಳ್ಳಿಯ ಕೇಶ್ವಾಪೂರದ ಸರ್ಕಾರಿ ಶಾಲೆಯ ಶ್ರೇಯಾ ಬಸವರಾಜ ಶೀಲವಂತರ, ಪ್ರಜೆಂಟೇಶನ ಶಾಲೆಯ ಪ್ರತಿಕ್ಷಾ ಪುರೋಹಿತ, ಮುಗದ ಹನುಮಂತಪ್ಪ ಮಾವಲೇರ್‌ ಶಾಲೆಯ ಲಲಿತಾ ನೇಮನ್ನವರ, ಹುಬ್ಬಳ್ಳಿಯ ನಿರ್ಮಲಾ ಠಕ್ಕರ ಶಾಲೆಯ ಅಮೋಘ ಜಯಕಾರ ಹಾಗೂ ಕೆಇ ಬೋರ್ಡ್ ಶಾಲೆಯ ಶ್ರೀಲಕ್ಷ್ಮಿ ಕುಲಕರ್ಣಿ 620 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

Share this article