ತೆಂಗಿನ ಗರಿ, ಬಾಳೆ ಎಲೆಯಲ್ಲೂ ಅರಳಿದ ರಾಮ!

KannadaprabhaNewsNetwork |  
Published : Jan 21, 2024, 01:33 AM IST
lalbagh 15 | Kannada Prabha

ಸಾರಾಂಶ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಸ್ಪರ್ಧೆಗಳಿಗೆ ನಟಿ ತಾರಾ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಸಂದರ್ಭದಲ್ಲೇ ಎಳೆಯ ತೆಂಗಿನ ಗರಿ, ಬಾಳೆ ಎಲೆಗಳಲ್ಲಿ ಶ್ರೀರಾಮನ ಪ್ರತಿಕೃತಿ, ರಾಮ ಮಂದಿರ ಸೇರಿದಂತೆ ವಿವಿಧ ದೇವಾಲಯಗಳ ಗೋಪುರಗಳು, ಪ್ರಾಣಿಪಕ್ಷಿಗಳು, ಹೂವುಗಳ ವಿವಿಧ ಆಕೃತಿಗಳನ್ನು ಲಾಲ್‌ಬಾಗ್‌ನ ಮಾಹಿತಿ ಕೇಂದ್ರದಲ್ಲಿ ಅನಾವರಣಗೊಂಡಿದ್ದು ಗಮನ ಸೆಳೆಯುತ್ತಿವೆ.

215ನೇ ಫಲಪುಷ್ಪ ಪ್ರದರ್ಶನದ ಅಂಗವಾಗಿ ಶನಿವಾರ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಕೆಬಾನ, ಪುಷ್ಪ ರಂಗೋಲಿ, ಥಾಯ್‌ ಆರ್ಟ್‌(ಬಾಳೆ ಎಲೆಯ ಕಲಾಕೃತಿ), ಜಾನೂರು (ತೆಂಗಿನ ಗರಿಯ ಕಲಾಕೃತಿ) ಸ್ಪರ್ಧೆಗಳಲ್ಲಿ ಮಹಿಳೆಯರು, ಮಕ್ಕಳು ಅದ್ಭುತ ಕಲಾಕೃತಿಗಳನ್ನು ರಚಿಸಿ ಆಕರ್ಷಿಸಿದರು.

ತೆಂಗಿನ ಗರಿಗಳಲ್ಲಿ ರಚಿತವಾದ ಕಲಾಕೃತಿಯಲ್ಲಿ ಆಯೋಧ್ಯೆ, ರಾಮನ ಮಂಟಪ, ಅದರಲ್ಲಿ ರಾಮ-ಸೀತೆ, ಲಕ್ಷ್ಮಣರ ಪ್ರತಿಮೆಗಳು ವಿಶೇಷವಾಗಿದ್ದು, ನೋಡುಗರ ಗಮನ ಸೆಳೆಯುತ್ತಿವೆ. ಹಾಗೆಯೇ ಬಿಲ್ಲು ಹಿಡಿದ ರಾಮನ ನಿಲುವಿನ ಭಂಗಿಯೂ ತೆಂಗಿನ ಗರಿಗಳಲ್ಲಿ ನಿರ್ಮಾಣಗೊಂಡಿದೆ. ಇವು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯ ವೇಳೆ ರಾಮನಾಮ ಸ್ಮರಣೆಗೆ ಇಂಬು ನೀಡಿವೆ.

ಇಕೆಬಾನ, ತರಕಾರಿ ಕೆತ್ತನೆ ಮತ್ತು ಪುಷ್ಪ ರಂಗೋಲಿ ಸ್ಪರ್ಧೆಯಲ್ಲಿ ಹೆಚ್ಚಾಗಿ ಬಸವಣ್ಣನವರ ಅನುಭವ ಮಂಟಪ, ಸ್ಮಾರಕ, ರಾಮ ರೂಪಕಗಳು, ತೆಂಗಿನಗೆರೆಯ ಗೌತಮ ಬುದ್ದ, ಕಾಡು ಮನುಷ್ಯ, ಡಾಲ್ ಮಾದರಿ, ವಚನಗಾರರ ಫೋಟೋಫ್ರೇಂಗಳು, ಶಿಲೆಗಳು ಹಾಗೂ ಹಲವು ವೈವಿಧ್ಯಮಯ ಹೂ ಬುಕ್ಕೆಗಳನ್ನು ಪ್ರದರ್ಶಿಸಿದ್ದರು. ಪುಷ್ಪಭಾರತಿ, ಬೋನ್ಸಾಯ್, ಜಾನೂರು ಒಣ ಹೂವಿನ ಜೋಡಣೆ ಮತ್ತು ಡಚ್ ವೈಶಿಷ್ಟವುಳ್ಳ ಹೂವುಗಳ ಜೋಡಣೆ ಗಮನ ಸೆಳೆಯಿತು.

ಈ ಪೂರಕ ಕಲೆಗಳ ಪ್ರದರ್ಶನಕ್ಕೆ ಚಾಲನೆ ನೀಡಿದ ಹಿರಿಯ ನಟಿ ತಾರಾ ಅನುರಾಧ ಅವರು, ಇದೊಂದು ಅದ್ಭುತವಾದ ಕಲೆ. ತೆಂಗಿನ ಗರಿ ಮತ್ತು ಬಾಳೆ ಎಲೆ ಬಳಸಿ ಊಹೆಗೂ ನಿಲುಕದ ರೀತಿಯಲ್ಲಿ ಇಷ್ಟೊಂದು ವೈವಿಧ್ಯಮಯ ಪ್ರತಿಕೃತಿಗಳನ್ನು ಮಾಡಿರುವುದು ಆಕರ್ಷಕ ಹಾಗೂ ಅದ್ಭುತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪೂರಕ ಕಲೆಗಳ ಸ್ಪರ್ಧೆಯಲ್ಲಿ ಇಕೆಬಾನ 10, ಪುಷ್ಪ ರಂಗೋಲಿ 15, ತರಕಾರಿ ಕೆತ್ತನೆ 20, ಥಾಯ್‌ ಆರ್ಟ್‌ 18, ಜಾನೂರು 25 ಮಂದಿ ಪಾಲ್ಗೊಂಡಿದ್ದರು. ವಿಜೇತರಿಗೆ ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌