ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ನಡುವಿನ ಸಂಘರ್ಷದ ಬೆನ್ನಲ್ಲೇ ಶ್ರೀರಾಮುಲು ಅವರನ್ನು ತಮ್ಮ ಬಣದ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಭಿನ್ನ ಬಣದ ನಾಯಕ ಯತ್ನಾಳ್ ಯತ್ನಿಸುತ್ತಿದ್ದು, ಈ ಸಂಬಂಧ ಶ್ರೀರಾಮುಲು ಹಾಗೂ ಯತ್ನಾಳ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ಹೇಳಿವೆ.
ಬಳ್ಳಾರಿ : ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ನಡುವಿನ ಸಂಘರ್ಷದ ಬೆನ್ನಲ್ಲೇ ಶ್ರೀರಾಮುಲು ಅವರನ್ನು ತಮ್ಮ ಬಣದ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಭಿನ್ನ ಬಣದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಯತ್ನಿಸುತ್ತಿದ್ದು, ಈ ಸಂಬಂಧ ಶ್ರೀರಾಮುಲು ಹಾಗೂ ಯತ್ನಾಳ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ಹೇಳಿವೆ.
ಅವಕಾಶ ಒದಗಿ ಬಂದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗುವ ಅವಕಾಶವನ್ನು ಸಹ ನೀಡಲಾಗುವುದು ಎಂದು ಯತ್ನಾಳ್ ಅವರು ಶ್ರೀರಾಮುಲುಗೆ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀರಾಮುಲು, ರಾಜ್ಯಾಧ್ಯಕ್ಷ ಸ್ಥಾನ ನನಗೇನೂ ಬೇಡ. ಮೊದಲಿನಿಂದಲೂ ನಿಮ್ಮ ಜೊತೆ ಉತ್ತಮ ಸಂಬಂಧವಿದೆ. ರಾಜಕೀಯ ಹೊರತಾಗಿಯೂ ಗೆಳತನವಿದೆ. ಹೀಗಾಗಿ, ನಿಮ್ಮ ಜೊತೆ ಇರುತ್ತೇನೆ ಎಂದು ಯತ್ನಾಳ್‌ಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಬಿಜೆಪಿ ಸಭೆಯಲ್ಲಿ ಸಂಡೂರು ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಸೋಲು ಕುರಿತು ನಡೆದ ಪರಾಮರ್ಶೆ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರವಾಲ್ ಅವರು ಶ್ರೀರಾಮುಲು ವಿರುದ್ಧ ಹರಿಹಾಯ್ದಿದ್ದರು. ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನೀವೇ ಕಾರಣ ಎಂದು ಆರೋಪಿಸಿದ್ದರು. ಆದರೆ, ಈ ವೇಳೆ, ಸಭೆಯಲ್ಲಿದ್ದ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ತಮ್ಮ ಪರ ನಿಲ್ಲಲಿಲ್ಲ. ಜನಾರ್ದನ ರೆಡ್ಡಿ ಮಾತು ಕೇಳಿ ಅವರು ಮೌನ ವಹಿಸಿದ್ದರು. ಇದು ತಮಗೆ ಬೇಸರವಾಗಿದೆ. ಸಂಡೂರು ಉಪ ಚುನಾವಣೆಯಲ್ಲಿ ತಾವು ಮಾಡಿರುವ ಕೆಲಸದ ಬಗ್ಗೆ ವಿಜಯೇಂದ್ರ ಅವರಿಗೆ ಗೊತ್ತಿದ್ದರೂ ತಮ್ಮ ಪರ ಸಭೆಯಲ್ಲಿ ಧ್ವನಿ ಎತ್ತಲಿಲ್ಲ ಎಂದು ಯತ್ನಾಳ್ ಎದುರು ಶ್ರೀರಾಮುಲು ಬೇಸರ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಶತ್ರುಗಳ ಶತ್ರು ಮಿತ್ರ ಎಂಬಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಶ್ರೀರಾಮುಲು ನಡುವಿನ ಮುನಿಸು ಹೊರ ಬೀಳುತ್ತಿದ್ದಂತೆಯೇ ಶ್ರೀರಾಮುಲು ಅವರನ್ನು ಸಂಪರ್ಕಿಸಿರುವ ಯತ್ನಾಳ್, ಸಾಂತ್ವನ ಹೇಳಿದ್ದಲ್ಲದೇ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಪಕ್ಷದಲ್ಲೇ ಇರುವಂತೆ ಹಾಗೂ ಪಕ್ಷದಲ್ಲಿನ ಇಂತಹ ಘಟನೆ ವಿರೋಧಿಸುತ್ತ ತಮ್ಮ ಟೀಂ ಸೇರಿಕೊಳ್ಳುವಂತೆ ಸೂಕ್ಷ್ಮವಾಗಿ ಹೇಳಿದ್ದಾರೆ. ಇದಕ್ಕೆ ಶ್ರೀರಾಮುಲು ಸಕಾರಾತ್ಮಕವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.
ಶಾಸಕ ಯತ್ನಾಳ್ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ನಡುವೆ ಅನೇಕ ವರ್ಷಗಳಿಂದ ಗೆಳತನವಿದೆ. ಯತ್ನಾಳ್ ಅಧ್ಯಕ್ಷರಾಗಿರುವ ಸಿದ್ಧಸಿರಿ ಸೌಹಾರ್ದ ಸಹಕಾರ ಬ್ಯಾಂಕ್ ನ ಉಪಾಧ್ಯಕ್ಷರಾಗಿರುವ ಬಿ.ಶ್ರೀರಾಮುಲು, ಬಳ್ಳಾರಿಯಲ್ಲೂ ಬ್ಯಾಂಕ್‌ನ ಶಾಖೆ ಆರಂಭಿಸಲು ಸಹಕಾರ ನೀಡಿದ್ದಾರೆ. ಈ ಮೊದಲಿನಿಂದಲೂ ಇಬ್ಬರು ಆತ್ಮೀಯರಾಗಿದ್ದು, ಶ್ರೀರಾಮುಲು ಅವರು ಯತ್ನಾಳ್ ಬಣಕ್ಕೆ ಸೇರ್ಪಡೆಗೊಂಡರೆ ಯಾವ ಅಚ್ಚರಿಯೂ ಇಲ್ಲ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. ಒಂದು ವೇಳೆ, ಶ್ರೀರಾಮುಲು ಅವರು ಯತ್ನಾಳ್ ಬಣಕ್ಕೆ ಸೇರಿಕೊಂಡರೆ ರಾಜಕೀಯವಾಗಿ ಎಷ್ಟರ ಮಟ್ಟಿಗೆ ಲಾಭವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.