ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಹೇಂದ್ರ, ಲಕ್ಷ್ಮಿ ಹಾಗೂ ಕಾವೇರಿ ಆನೆಗಳು ಆಗಮಿಸಿದ್ದು, ಶ್ರೀರಂಗ ವೇದಿಕೆ ಬಳಿ ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲಿ ಸ್ವಾಗತಿಸಲಾಯಿತು. ಬಳಿಕ ಶ್ರೀರಂಗನಾಥಸ್ವಾಮಿ ದೇಗುಲಕ್ಕೆ ತೆರಳಿದ ಗಜಪಡೆಗಳು ದೇವಾಲಯದ ಪ್ರಧಾನ ಅರ್ಚಕ ವಿಜಯ ಸಾರಥಿ ದೇವಾಲಯದ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು.
ನಂತರ ದೇವಾಲಯದ ಪರಾಂಗಣದ ಸುತ್ತಲೂ ಪ್ರದಕ್ಷಣೆ ನಡೆಸಿದರು. ನಂತರ ದೇವಾಲಯದ ಬಲ ಭಾಗದ ಕಲ್ಯಾಣಿಯಲ್ಲಿ ನೀರು ಕುಡಿದ ಆನೆಗಳು ದಣಿವು ಹಾರಿಸಿಕೊಂಡವು. ಗಜಪಡೆಗಳೊಂದಿಗೆ ಮಾವುತರು ಹಾಗೂ ಕಾವಾಡಿಗರು ಆಗಮಿಸಿದ್ದರು. ಅಂಬಾರಿ ಮೆರವಣಿಗೆಗೆ ಸಿದ್ಧತೆ ಕೈಗೊಂಡಿದ್ದಾರೆ.ಈ ವೇಳೆ ಡೀಸಿ ಡಾ.ಕುಮಾರ್, ಎಡೀಸಿ ಶಿವಾನಂದ ಮೂರ್ತಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ, ಎಸಿ ಶ್ರೀನಿವಾಸ್, ತಹಸೀಲ್ದಾರ್ ಚೇತನಾ ಯಾದವ್, ಡಿವೈಎಸ್ಪಿ ಶಾಂತಮಲ್ಲಪ್ಪ, ತಾಪಂ ಇಒ ವೇಣು, ಶ್ರೀರಂಗನಾಥಸ್ವಾಮಿ ದೇವಾಲಯದ ಇಒ ಉಮಾ, ದೇವಾಲಯದ ಸಮಿತಿ ಅಧ್ಯಕ್ಷ ಸೋಮಶೇಖರ್, ನಿಮಿಷಾಂಬ ಸಮಿತಿ ಅಧ್ಯಕ್ಷ ದಯಾನಂದ, ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್ ದಿನೇಶ್, ಪುರಸಭೆ ಮುಖ್ಯಾಧಿಕಾರಿ ಸತೀಶ ಸೇರಿದಂತೆ ಇತರರು ಇದ್ದರು.
ಸೆ.25ರಿಂದ 28ರವರೆಗೆ 4 ದಿನಗಳ ಕಾಲ ನಡೆಯುವ ಶ್ರೀರಂಗಪಟ್ಟಣ ದಸರಾಗೆ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಕಿರಂಗೂರು ಬನ್ನಿ ಮಂಟಪದ ಬಳಿ ಮಧ್ಯಾಹ್ನ 3 ಗಂಟೆಗೆ ಶ್ರೀಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.
ಕಿರಂಗೂರು ಬನ್ನಿ ಮಂಟಪದಲ್ಲಿ ಮಧ್ಯಾಹ್ನ 12 ರಿಂದ ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ವೈದಿಕರ ತಂಡ ದಸರಾ ಮಹೋತ್ಸವದ ಶ್ರೀಚಾಂಮುಂಡೇಶ್ವರಿ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯವನ್ನು ನೆರೆವೇರಿಸುವರು.
ಮೆರವಣಿಗೆಯಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಸಚಿವರ ಆಪ್ತ ಕಾರ್ಯದರ್ಶಿ ಹೆಚ್.ಜಿ ಪ್ರಭಾಕರ್, ಸ್ಥಳೀಯ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶಬಾಬು ಬಂಡಿಸಿದ್ದೇಗೌಡ ಸೇರಿದಂತೆ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಅಂಬಾರಿ ಮೆರವಣಿಗೆ ಹೆದ್ದಾರಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿ ಶ್ರೀರಂಗನಾಥ ಮೈದಾನದಲ್ಲಿರುವ ವೇದಿಕೆ ತಲುಪಲಿದೆ.
ವಿದ್ಯುತ್ ದೀಪಾಲಂಕಾರ:
ಈ ಬಾರಿ ದಸರಾ ಕಾರ್ಯಕ್ರದಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸ್ಥಳೀಯ ಕಲಾವಿದರು ಸೇರಿದಂತೆ ಹೆಸರಾಂತ ಚಲನಚಿತ್ರ ಗಾಯಕರು, ಕಿರುತೆರೆ ನಟರು ಹಾಗೂ ಹಿರಿಯ ಕಲಾವಿದರಿಂದ ವೇದಿಕೆಯಲ್ಲಿ ನಡೆಯುವ 4ದಿನಗಳ ಕಾರ್ಯಕ್ರಮದಲ್ಲಿ ಭಾಗವಸಲು ಅವಕಾಶ ನೀಡಲಾಗಿದೆ.
ದಸರಾ ಮೆರವಣಿಗೆ ಬಳಿಕ ಕ್ರೀಡೆಗಳು ಸೇರಿದಂತೆ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ಆರಂಭವಾಗುವ ಶ್ರೀರಂಗನಾಥ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ದತೆ ಪೂರ್ಣಗೊಂಡಿದ್ದು, ಜಿಲ್ಲಾಡಳಿತ ನೇತೃತ್ವದಲ್ಲಿ ಕಾರ್ಯಕರ್ತರು ಹಗಲು - ರಾತ್ರಿ ಕಾರ್ಯ ನಿರ್ವಸುತ್ತಿದ್ದಾರೆ. ಶಾಸಕರು, ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೆ ಮೊಕ್ತಾಂ ಹೂಡಿ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.