ಎಸ್ಸೆಸ್ಸೆಲ್ಸಿ: ಕನ್ನಡ ಪರೀಕ್ಷೆ ಬರೆದ 254 ವಿದ್ಯಾರ್ಥಿಗಳು

KannadaprabhaNewsNetwork |  
Published : Mar 19, 2026, 02:30 AM IST
ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೊಠಡಿ ಸಂಖ್ಯೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಸಂದರ್ಭ | Kannada Prabha

ಸಾರಾಂಶ

ಕುಶಾಲನಗರ ತಾಲೂಕಿನ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಬುಧವಾರ ಆರಂಭಗೊಂಡ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯು ವ್ಯವಸ್ಥಿತವಾಗಿ ಹಾಗೂ ಸುಗಮವಾಗಿ ನಡೆಯಿತು.

ಕನ್ನಡಪ್ರಭವಾರ್ತೆ ಕುಶಾಲನಗರ

ಕುಶಾಲನಗರ ತಾಲೂಕಿನ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಬುಧವಾರ ಆರಂಭಗೊಂಡ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯು ವ್ಯವಸ್ಥಿತವಾಗಿ ಹಾಗೂ ಸುಗಮವಾಗಿ ನಡೆಯಿತು. ಪರೀಕ್ಷೆಯ ಪ್ರಥಮ ದಿನ ವಿದ್ಯಾರ್ಥಿಗಳು ಕನ್ನಡ ಭಾಷಾ ಪರೀಕ್ಷೆ ಬರೆದರು. ಪರೀಕ್ಷೆ ಏ.2ರವರೆಗೆ ನಡೆಯಲಿದೆ.

ಬುಧವಾರ ನಡೆದ‌ ಮೊದಲದಿನ ಕನ್ನಡ ಪರೀಕ್ಷೆಯಲ್ಲಿ ನೋಂದಾಯಿತ 259 ವಿದ್ಯಾರ್ಥಿಗಳ ಪೈಕಿ 254 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 5 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಗೈರಾಗಿದ್ದರು.ಪೋಷಕರಲ್ಲಿ ಸಂತಸ: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಎರಡು ವರ್ಷಗಳ ನಂತರ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವನ್ನು ಪುನರ್ ಆರಂಭಿಸಿದ್ದು, ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಂತಸ ತಂದಿದೆ. ಕೂಡಿಗೆ ಭಾಗದಲ್ಲಿ 8 ಪ್ರೌಢಶಾಲೆಗಳಿದ್ದು, ಪ್ರಸಕ್ತ ಸಾಲಿನ ಮಕ್ಕಳು ಹಾಗೂ ಪುನರಾವರ್ತಿತ ಮಕ್ಕಳು ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಸೇರಿ 265 ಮಕ್ಕಳು ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆಯಲು ಪರೀಕ್ಷಾ ಮಂಡಳಿ ಅವಕಾಶ ಕಲ್ಪಿಸಿದೆ.

ನಾಪೋಕ್ಲು ವರದಿ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಳೆದ ಬಾರಿ ನಾಲ್ಕನೇ ಸ್ಥಾನ ಪಡೆದಿದ್ದ ಕೊಡಗು ಜಿಲ್ಲೆ, ಈ ಬಾರಿ ಮೊದಲ ಸ್ಥಾನ ಪಡೆಯಬೇಕು ಎಂಬ ಗುರಿಯೊಂದಿಗೆ ಪರೀಕ್ಷಾ ಸಿದ್ಧತಾ ಕಾರ್ಯಕ್ರಮ ಕೈಗೊಂಡಿದ್ದು ಬುಧವಾರ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭಗೊಂಡವು. ಜಿಲ್ಲೆಯಲ್ಲಿ 6582 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ನೋಂದಾಯಿಸಿದ್ದು ಪ್ರವೇಶ ಪತ್ರಗಳೊಂದಿಗೆ ವಿವಿಧ ಪರೀಕ್ಷಾ ಕೇಂದ್ರ ಗಳಿಗೆ ಪರೀಕ್ಷೆ ಬರೆಯಲು ಹಾಜರಾದರು. ಮೊದಲ ದಿನದ ಕನ್ನಡ ಪರೀಕ್ಷೆಗೆ ಇಬ್ಬರು ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ಸಿಗದೆ ಪರೀಕ್ಷೆಯಿಂದ ವಂಚಿತರಾದ ಘಟನೆ ಸಮೀಪದ ಬೆಟಗೇರಿಯಲ್ಲಿ ನಡೆದಿದೆ. ಬೆಟಗೇರಿಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಸಿಗದೇ ಪರೀಕ್ಷೆ ಒಂದರಿಂದ ವಂಚಿತರಾಗಿದ್ದು ಇಲಾಖೆ ಪರೀಕ್ಷೆ 2 ಬರೆಯಲು ಅವಕಾಶ ಕಲ್ಪಿಸಿದೆ. ಪ್ರವೇಶ ಪತ್ರ ನೀಡದೆ ವಿದ್ಯಾರ್ಥಿಗಳಿಗೆ ತೊಂದರೆ ಉಂಟು ಮಾಡಿದ ಶಾಲೆ ಆಡಳಿತ ಮಂಡಳಿ ಹಾಗೂ ಇಲಾಖೆ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಬುಧವಾರ ರಸ್ತೆ ತಡೆ ನಡೆಸಿದ ಪ್ರಸಂಗವು ಎದುರಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿ ರಸ್ತೆ ತಡೆಗೆ ಅವಕಾಶ ಕಲ್ಪಿಸಲಿಲ್ಲ. ಆಕ್ರೋಶಗೊಂಡ ಪೋಷಕರು ಸ್ಥಳಕ್ಕೆ ಶಿಕ್ಷಣಾಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದರು. ಆಂತರಿಕ ಅಂಕವನ್ನು ನೀಡದೇ ಇದ್ದುದರಿಂದ ವಿದ್ಯಾರ್ಥಿಗಳ ಪ್ರವೇಶ ಪತ್ರ ವನ್ನು ಮಂಡಳಿ ಕಳಿಸಿ ಕೊಟ್ಟಿಲ್ಲ ಎಂದು ಶಾಲೆಯ ಶಿಕ್ಷಕ ವೃಂದ ಸ್ಪಷ್ಟಪಡಿಸಿದರು. ಎಸ್ ಎಲ್ ಸಿ ಪರೀಕ್ಷೆಯನ್ನು ಪುನಃ ತೆಗೆದುಕೊಳ್ಳಲು ಅವಕಾಶವಿದ್ದು ಎಸ್ ಎಸ್ ಎಲ್ ಸಿ ಪರೀಕ್ಷೆ 2 ಬರೆ ಸುವಂತೆ ಪೋಷಕರ ಮನವೊಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಆಧಾರ್ ಸೀಡಿಂಗ್ - ಮ್ಯಾಪಿಂಗ್ ಕಡ್ಡಾಯ: ಶಶಿಧರ್ ಕೋಸಂಬೆ
ಕ್ಯಾನ್ಸರ್ ಪೀಡಿತ ಮಕ್ಕಳಿಗೆ 10 ಲಕ್ಷ ರು.ಗಳ ಉಡುಗೊರೆ !